– 9 ಸುಧಾರಣೆಗೆ ಕ್ಯಾಬಿನೆಟ್ ಒಪ್ಪಿಗೆ
– ಎಜಿಆರ್ ಶುಲ್ಕ ಪಾವತಿಗೆ 4 ವರ್ಷ ಕಾಲಾವಕಾಶ
ನವದೆಹಲಿ: ಆರ್ಥಿಕ ಸಂಕಷ್ಟದಲ್ಲಿರುವ ಟೆಲಿಕಾಂ ಕಂಪನಿಗಳ ನೆರವಿಗೆ ಕೇಂದ್ರ ಸರ್ಕಾರ ಮುಂದಾಗಿದ್ದು, ಟೆಲಿಕಾಂ ವಲಯದ ಒಟ್ಟು 9 ಸುಧಾರಣೆಗಳಿಗೆ ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ.
ಟೆಲಿಕಾಂ ಕಂಪನಿಗಳು ಬಾಕಿ ಉಳಿಸಿಕೊಂಡಿರುವ ಹೊಂದಾಣಿಕೆ ಮಾಡಲಾದ ನಿವ್ವಳ ಆದಾಯವನ್ನು (ಅಡ್ಜಸ್ಟೆಡ್ ಗ್ರಾಸ್ ರೆವೆನ್ಯೂ- ಎಜಿಆರ್) ಪಾವತಿಸಬೇಕಿದೆ. ಭಾರೀ ಮೊತ್ತವನ್ನು ಪಾವತಿಸಬೇಕಾದ ಅನಿವಾರ್ಯತೆಗೆ ಸಿಲುಕಿದ್ದ ಹಿನ್ನೆಲೆಯಲ್ಲಿ ಕಂಪನಿಗಳಿಗೆ ಸಮಸ್ಯೆ ಆಗಿತ್ತು. ಅದರಲ್ಲೂ ವೊಡಾಫೋನ್ ಕಂಪನಿ ದಿವಾಳಿಯ ಅಂಚಿಗೆ ತಲುಪಿತ್ತು. ಈಗ ಸರ್ಕಾರ ಪುನಶ್ಚೇತನ ಕ್ರಮಗಳನ್ನು ಪ್ರಕಟಿಸಿದ ಹಿನ್ನೆಲೆಯಲ್ಲಿ ಕಂಪನಿಗಳು ನಿಟ್ಟುಸಿರು ಬಿಟ್ಟಿದೆ.
ಏನು ಕ್ರಮ?
ಇಲ್ಲಿಯವರೆಗೆ ಟೆಲಿಕಾಂ ವಲಯಕ್ಕೆ ಅಟೋಮ್ಯಾಟಿಕ್(ಸ್ವಯಂಚಾಲಿತ) ಮಾರ್ಗದ ಮೂಲಕ ಶೇ.49 ರಷ್ಟು ವಿದೇಶಿ ಬಂಡವಾಳ ಹೂಡಿಕೆಗೆ(ಎಫ್‍ಡಿಐ) ಅನುಮತಿ ಇತ್ತು. ಇದಕ್ಕೂ ಹೆಚ್ಚಿನ ಹೂಡಿಕೆಗೆ ಸರ್ಕಾರದ ಅನುಮತಿ ಪಡೆಯುವುದು ಕಡ್ಡಾಯವಾಗಿತ್ತು. ಆದರೆ ಈಗ ಈ ಪ್ರಮಾಣವನ್ನು ಶೇ.100ಕ್ಕೆ ಹೆಚ್ಚಿಸಲಾಗಿದೆ. ಆದರೆ ಚೀನಾ ಮತ್ತು ಪಾಕಿಸ್ತಾನ ಎಫ್‍ಡಿಐಗೆ ಸರ್ಕಾರದ ಅನುಮತಿ ಬೇಕು ಎಂಬ ಷರತ್ತನ್ನು ವಿಧಿಸಲಾಗಿದೆ. ಇದನ್ನೂ ಓದಿ : ತಿಂಗಳಿಗೆ 160 ರೂ.ಗೆ 16 ಜಿಬಿ ಡೇಟಾ ಸಿಗುತ್ತಿರುವುದು ದುರಂತ – ಏರ್‌ಟೆಲ್ ಮುಖ್ಯಸ್ಥ
ಎಜಿಆರ್ ರೂಪದಲ್ಲಿ ಸರ್ಕಾರಕ್ಕೆ ಪಾವತಿಸಬೇಕಿದ್ದ ಬಾಕಿ ಶುಲ್ಕ ಪಾವತಿ ಮಾಡಲು ಟೆಲಿಕಾಂ ಕಂಪನಿಗಳಿಗೆ 4 ವರ್ಷ ಕಾಲಾವಕಾಶ ನೀಡಲಾಗಿದೆ. ಇದಕ್ಕೆ ಕೇಂದ್ರ ಸರ್ಕಾರ ಸಣ್ಣ ಪ್ರಮಾಣ ಬಡ್ಡಿಯನ್ನು ವಿಧಿಸಲಿದೆ. ಎಜಿಆರ್ ವ್ಯಾಪ್ತಿಯಿಂದ ಟೆಲಿಕಾಮೇತರ ಆದಾಯ ಹೊರಗಿಡಲಾಗಿದೆ. ಇದರ ಜೊತೆ ತಡವಾಗಿ ಪಾವತಿ ಮಾಡಿದರೆ ವಿಧಿಸಲಾಗುತ್ತಿದ್ದ ಬಡ್ಡಿಯನ್ನು ಕಡಿಮೆ ಮಾಡಲಾಗಿದ್ದು, ದಂಡವನ್ನು ರದ್ದು ಮಾಡಲಾಗಿದೆ.
ಟೆಲಿಕಾಂ ಕಂಪನಿಗಳ ನಡುವೆ ಸ್ಪೆಕ್ಟ್ರಂ ವಿನಿಮಯಕ್ಕೆ ಸರ್ಕಾರ ಅನುಮತಿ ನೀಡಿದೆ. ಇದರ ಜೊತೆ ಹಳೆ ಕಂಪನಿಗಳಿಂದ ತಿಂಗಳ ಬದಲು ವರ್ಷಕ್ಕೊಮ್ಮೆ ಸ್ಪೆಕ್ಟ್ರಂ ಶುಲ್ಕ ಪಾವತಿಗೆ ಒಪ್ಪಿಗೆ ನೀಡಿದ್ದು ಬಡ್ಡಿಯನ್ನು ಕಡಿಮೆ ಕಡಿಮೆ ಮಾಡಿದೆ. ಸ್ಪೆಕ್ಟ್ರಂ ಅವಧಿಯನ್ನು 20ರಿಂದ 30 ವರ್ಷಕ್ಕೆ ಹೆಚ್ಚಳ ಮಾಡುವುದರ ಜೊತೆ 10 ವರ್ಷದ ಬಳಿಕ ಸ್ಪೆಕ್ಟ್ರಂ ಮರಳಿಸಲು ಅವಕಾಶ ನೀಡಲಾಗಿದೆ. ಈ ಎಲ್ಲ ಕ್ರಮಗಳಿಂದ ಕಂಪನಿಗಳಿಗೆ ಹಣ ಉಳಿತಾಯವಾಗಲಿದ್ದು ಬೇರೆ ಹೂಡಿಕೆ ನೆರವಾಗಬಹದು ಎಂದು ಸರ್ಕಾರ ಹೇಳಿದೆ.
ವಿದೇಶಿ ಸಲಕರಣೆ ಆಮದಿಗೆ ಲೈಸೆನ್ಸ್ ಪಡೆಯಬೇಕೆಂಬ ಷರತ್ತನ್ನು ರದ್ದುಗೊಳಿಸಲಾಗಿದೆ. ಆದರೆ ಬಿಎಸ್‍ಎನ್‍ಎಲ್ ಮತ್ತು ಎಂಟಿಎನ್‍ಎಲ್ ಸೇರಿದಂತೆ ಎಲ್ಲಾ ಭಾರತೀಯ ಸಂಸ್ಥೆಗಳು ಭಾರತ ನಿರ್ಮಿತ ತಂತ್ರಜ್ಞಾನ ಮತ್ತು ಮೂಲಸೌಕರ್ಯಗಳನ್ನು ಬಳಸಲಿದೆ. ನಾವು ದೇಶಿಯ ತಂತ್ರಜ್ಞಾನವನ್ನು ಬಳಸುವುದು ಮಾತ್ರ ಅಲ್ಲ ಈ ತಂತ್ರಜ್ಞಾನಗಳನ್ನು ರಫ್ತುದಾರ ದೇಶವನ್ನಾಗಿ ಮಾಡುವ ಗುರಿಯನ್ನು ಹೊಂದಿದ್ದೇವೆ ಎಂದು ಟೆಲಿಕಾಂ ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದಾರೆ. ಇಲ್ಲಿಯವರೆಗೆ 3ಜಿ ಮತ್ತು 4ಜಿ ತಂತ್ರಜ್ಞಾನಗಳ ಹೆಚ್ಚಿನ ಭಾಗವನ್ನು ಆಮದು ಮಾಡಿಕೊಳ್ಳಲಾಗಿದೆ. ಇದನ್ನೂ ಓದಿ: ಸಾಲದಲ್ಲಿ ವಿಐಎಲ್ ಕಂಪನಿ – ಸರ್ಕಾರಕ್ಕೆ ಷೇರು ಮಾರಲು ಮುಂದಾದ ಬಿರ್ಲಾ
ಭಾರತದಲ್ಲಿ ಎಫ್‍ಡಿಐ ಹೇಗೆ?
ಭಾರತದಲ್ಲಿ ಎರಡು ರೀತಿಯಲ್ಲಿ ಎಫ್‍ಡಿಐ ಹೂಡಿಕೆ ಮಾಡಬಹುದು. ಅಟೋಮ್ಯಾಟಿಕ್ ಮಾರ್ಗದಲ್ಲಿ ನೇರವಾಗಿ ಕಂಪನಿಗಳಲ್ಲಿ ಹೂಡಿಕೆ ಮಾಡಬಹುದು. ಇದಕ್ಕೆ ಸರ್ಕಾರದ ಯಾವುದೇ ಅನುಮತಿ ಅಗತ್ಯವಿಲ್ಲ. ಸರ್ಕಾರದ ಮಾರ್ಗದಲ್ಲಿ ಅನುಮತಿ ಪಡೆಯಬೇಕಾದರೆ ಎಫ್‍ಡಿಐಗೂ ಮುನ್ನ ಕಂಪನಿಗಳು ಕೇಂದ್ರ ಸರ್ಕಾರ ಅನುಮತಿ ಪಡೆಯಬೇಕೆಂಬ ಷರತ್ತನ್ನು ವಿಧಿಸಲಾಗಿದೆ. ಇದನ್ನೂ ಓದಿ : ಸರ್ಕಾರ ಸಹಾಯ ಮಾಡದಿದ್ದರೆ ವೊಡಾಫೋನ್, ಐಡಿಯಾ ಮುಚ್ಚುತ್ತೇವೆ- ಬಿರ್ಲಾ
ಬಾಕಿ ಎಷ್ಟಿದೆ?
ಟೆಲಿಕಾಂ ಸಂಸ್ಥೆಗಳಾದ ಏರ್ಟೆಲ್, ವೊಡಾಫೋನ್ ಐಡಿಯಾ ಮತ್ತು ರಿಲಯನ್ಸ್ ಕಮ್ಯುನಿಕೇಷನ್ಸ್ ಕೇಂದ್ರಕ್ಕೆ ಪರವಾನಗಿ ಶುಲ್ಕವಾಗಿ ಸುಮಾರು 92 ಸಾವಿರ ಕೋಟಿ ರೂ., ಮತ್ತು ಸ್ಪೆಕ್ಟ್ರಂ ಬಳಕೆಯ ಶುಲ್ಕ 41 ಸಾವಿರ ಕೋಟಿಯನ್ನು ಬಾಕಿ ಉಳಿಸಿಕೊಂಡಿವೆ. 2020ರಲ್ಲಿ ಸುಪ್ರೀಂ ಕೋರ್ಟ್ ಟೆಲಿಕಾಂ ಕಂಪನಿಗಳಿಗೆ ಬಾಕಿ ಉಳಿಸಿಕೊಂಡಿರುವ ಹಣವನ್ನು ಕೇಂದ್ರ ಸರ್ಕಾರಕ್ಕೆ ಪಾವತಿಸಬೇಕೆಂದು ಆದೇಶ ನೀಡಿತ್ತು.
ಏನಿದು ಎಜಿಆರ್?:
ದೇಶದ ಹೊಸ ಟೆಲಿಕಾಂ ನೀತಿ ಪ್ರಕಾರ, ದೂರಸಂಪರ್ಕ ಆದಾಯದ ಜತೆಗೆ ಬಾಡಿಗೆ, ಲಾಭಾಂಶ, ನಿಶ್ಚಿತ ಠೇವಣಿಯಿಂದ ಬರುವ ಲಾಭ ಹಾಗೂ ಇನ್ನಿತರೆ ಆದಾಯಗಳನ್ನು ಎಜಿಆರ್ ಎಂದು ಪರಿಗಣಿಸಲಾಗುತ್ತದೆ. ಕೇಂದ್ರ ಸರ್ಕಾರದ ಅನುಮತಿ ಪಡೆದು ಕಾರ್ಯನಿರ್ವಹಿಸುವ ಕಂಪನಿಗಳು ತಮ್ಮ ಎಜಿಆರ್ ನಲ್ಲಿ ಒಂದಷ್ಟು ಪಾಲನ್ನು ಕೇಂದ್ರ ಸರ್ಕಾರಕ್ಕೆ ನೀಡಬೇಕಾಗುತ್ತದೆ. ಅದನ್ನು ವಾರ್ಷಿಕ ಲೈಸೆನ್ಸ್ ಶುಲ್ಕ ಎಂದು ಕರೆಯಲಾಗುತ್ತದೆ. ಇದರ ಜತೆಗೆ ತಮಗೆ ಹಂಚಿಕೆಯಾದ ಸ್ಪೆಕ್ಟ್ರಂ ಅನ್ನು ಬಳಕೆ ಮಾಡಿದ್ದಕ್ಕೆ ಬಳಕೆ ಶುಲ್ಕವನ್ನೂ ಪಾವತಿಸಬೇಕಾಗಿದೆ.