ಮಂಡ್ಯ: ರಾಜ್ಯದಲ್ಲಿ ಕಾಂಗ್ರೆಸ್ (Congress) ಸರ್ಕಾರ ಅಸ್ತಿತ್ವಕ್ಕೆ ಬಂದಾಗಿನಿಂದಲೂ ಸರ್ಕಾರ ಕೆಡವಲು ಬಿಜೆಪಿ (BJP) ಪ್ರಯತ್ನ ಮಾಡುತ್ತಿದೆ ಎಂದು ಕಾಂಗ್ರೆಸ್ ನಾಯಕರು ಆರೋಪಗಳನ್ನು ಮಾಡುತ್ತಾ ಬಂದಿದ್ದಾರೆ. ಇದೀಗ ಅಂತಹದ್ದೇ ಒಂದು ಗಂಭೀರ ಆರೋಪವನ್ನು ಮಂಡ್ಯದ (Mandya) ಕಾಂಗ್ರೆಸ್ ಶಾಸಕ ಗಣಿಗ ರವಿಕುಮಾರ್ (Ganiga Ravikumar) ಮಾಡಿದ್ದಾರೆ.
ಮಂಡ್ಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರ ಕೆಡವಲು ಸಂತೋಷ್ ಜೀ, ಶೋಭಾ ಕರಂದ್ಲಾಜೆ, ಕುಮಾರಸ್ವಾಮಿ, ಪ್ರಹ್ಲಾದ್ ಜೋಶಿ ಮುಂದಾಗಿದ್ದಾರೆ. ಈಗಾಗಲೇ ಕಾಂಗ್ರೆಸ್‌ನ ಶಾಸಕರನ್ನು ಸಂಪರ್ಕ ಮಾಡಿ 100 ಕೋಟಿ ರೂ. ಆಫರ್ ಮಾಡಲಾಗಿದೆ ಎಂದು ಆರೋಪಿಸಿದರು. ಇದನ್ನೂ ಓದಿ: ಪಬ್‌ನಲ್ಲಿ ಮತ್ತೆ ಶುರುವಾಯ್ತು ಕನ್ನಡ ಹಾಡುಗಳಿಗಾಗಿ ಕಿರಿಕ್
ಸುಮಾರು 50 ಮಂದಿ ಶಾಸಕರನ್ನು ಸಂಪರ್ಕ ಮಾಡಿದ್ದಾರೆ. ಅವರಲ್ಲಿ ನನ್ನನ್ನು ಸಹ ದೂರವಾಣಿ ಮೂಲಕ ಸಂಪರ್ಕ ಮಾಡಿ ಆಫರ್ ಮಾಡಿದ್ದಾರೆ. ನನ್ನ ಬಳಿ ಕಾಲ್ ರೆಕಾರ್ಡ್ ಇದೆ. ಇನ್ನೂ ಇದರ ಬಗ್ಗೆ ಸಾಕ್ಷಿಗಳನ್ನು ಕಲೆ ಹಾಕುತ್ತಿದ್ದೇವೆ. ಸಾಕ್ಷಿ ಸಮೇತ ರೆಡ್ ಹ್ಯಾಂಡ್ ಆಗಿ ಐಟಿ, ಇಡಿ ಅವರಿಗೆ ಹಿಡಿದು ಕೊಡುತ್ತೇವೆ. ನಮ್ಮ ಸರ್ಕಾರ ಬಂಡೆಯಂತೆ ಸ್ಥಿರವಾಗಿ ಇದೆ. ಯಾರು ನಮ್ಮ ಸರ್ಕಾರವನ್ನು ಕೆಡವಲು ಸಾಧ್ಯವಿಲ್ಲ. 5 ವರ್ಷ ರಾಜ್ಯದಲ್ಲಿ ನಮ್ಮ ಸರ್ಕಾರ ಇರುತ್ತದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಕಾರ್ಕಳ ಅತ್ಯಾಚಾರ ಪ್ರಕರಣ- ಆರೋಪಿಗಳು ನಾಲ್ಕು ದಿನ ಪೊಲೀಸ್ ಕಸ್ಟಡಿಗೆ