ಹಾಸನ: ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಚನ್ನಪಟ್ಟಣ ಕೆರೆ ಅಭಿವೃದ್ಧಿಗೆಂದು ಮಂಜೂರಾಗಿದ್ದ 144 ಕೋಟಿ ರೂ. ಹಣದಲ್ಲಿ 100 ಕೋಟಿ ರೂ.ಗಳನ್ನು ಶಾಸಕ ಪ್ರೀತಂ ಗೌಡ (Preetham Gowda) ಪಡೆದಿದ್ದಾರೆ ಎಂದು ಕಾಂಗ್ರೆಸ್ (Congress) ಮುಖಂಡ ಹೆಚ್.ಕೆ.ಮಹೇಶ್ ಆರೋಪಿಸಿದ್ದಾರೆ.
ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಾಸಕ ಪ್ರೀತಂ ಗೌಡ, 144 ಕೋಟಿ ಹಣದಲ್ಲಿ 6 ಕೆರೆ ಹಾಗೂ 9 ಪಾರ್ಕ್ ಅಭಿವೃದ್ಧಿ ಮಾಡಿದ್ದಾರೆ. ಆದರೆ ಇದರಲ್ಲಿ ಭಾರಿ ಭ್ರಷ್ಟಾಚಾರ ನಡೆದಿದೆ. ಸುಮಾರು 100 ಕೋಟಿ ರೂ.ಗಳನ್ನು ಶಾಸಕರು ಪಡೆದಿದ್ದಾರೆ ಎಂದಿದ್ದಾರೆ. ಇದನ್ನೂ ಓದಿ: ಶಿರಹಟ್ಟಿಯಲ್ಲಿ ಕಾರ್ಯಕರ್ತರಿಂದಲೇ ಶಾಸಕರ ಹಠಾವೋ ಬಿಜೆಪಿ ಬಚಾವೋ ಅಭಿಯಾನ
Advertisement
Advertisement
ಶಾಸಕರು ಭ್ರಷ್ಟಾಚಾರ ಮಾಡಿಲ್ಲ ಎನ್ನುವುದಾದರೆ, ಯಾವ ಕಾಮಗಾರಿಗೆ ಎಷ್ಟು ಹಣ ಖರ್ಚಾಗಿದೆ? ನಿಗದಿಯಾಗಿದ್ದ ಮೊತ್ತ ಎಷ್ಟು? ಯಾವ ಇಲಾಖೆ ಆ ಹಣ ನೀಡಿದ್ದು? ಎಂಬುದನ್ನು ಕಾಮಗಾರಿ ನಡೆದ ಸ್ಥಳದಲ್ಲಿ ನಾಮಫಲಕ ಅಳವಡಿಸಲಿ ಎಂದು ಆಗ್ರಹಿಸಿದರು. ತಮಗೆ ಇಷ್ಟ ಬಂದಂತೆ ಶಾಸಕರು ಕಾಮಗಾರಿ ಮಾಡಿರುವುದು ಹಾಗೂ ಭ್ರಷ್ಟಾಚಾರದಿಂದಾಗಿ ಚನ್ನಪಟ್ಟಣ ಕೆರೆ ಅಂಗಳವೂ ಸೂಕ್ತ ರೀತಿಯಲ್ಲಿ ಅಭಿವೃದ್ಧಿಯಾಗಿಲ್ಲ. ಉಳಿದ ಕೆರೆ, ಪಾರ್ಕ್‍ಗಳ ಸ್ಥಿತಿಯೂ ಇದೇ ರೀತಿಯಾಗಿದೆ ಎಂದು ಆಕ್ರೋಶ ಹೊರ ಹಾಕಿದ್ದಾರೆ.
Advertisement
ಕಾಮಗಾರಿಗೆ ಬಳಕೆಯಾದ ಹಣ ಕಾವೇರಿ ನೀರಾವರಿ ನಿಗಮದ್ದಾಗಿದೆ. ರೈತರಿಗೆ ಸೇರಬೇಕಾದ ಅನುದಾನ ಬೇರೆಯವರ ಜೇಬು ಸೇರಿದೆ. ಮಹಾರಾಜ ಪಾರ್ಕ್‍ಗೆ 14.36 ಕೋಟಿ ರೂ., ಉಳಿದ ಉದ್ಯಾನವನಗಳಿಗೆ 22 ಕೋಟಿ ರೂ. ವೆಚ್ಚ ಮಾಡಲಾಗಿದೆ. ಉಳಿದ 6 ಕೆರೆಗಳಿಗೆ 7 ರಿಂದ 8 ಕೋಟಿ ರೂ. ಹಣ ಬಳಕೆ ಮಾಡಿ 144 ಕೋಟಿ ರೂ. ಲೆಕ್ಕವನ್ನು ತೋರಿಸಿದ್ದಾರೆ. ಆದರೆ ಎಲ್ಲೂ ಯೋಜನೆಯ ಫಲಕ ಹಾಕಿಲ್ಲ ಎಂದಿದ್ದಾರೆ.
Advertisement
ಈ ಸಂಬಂಧ ಲೋಕಾಯುಕ್ತರಿಗೆ (Lokayukta) ದೂರು ನೀಡಲಾಗುವುದು. ಶಾಸಕರ ಭ್ರಷ್ಟಾಚಾರಕ್ಕೆ ಸಹಕರಿಸಿರುವ ಎಲ್ಲಾ ಅಧಿಕಾರಿಗಳು ಜೈಲಿಗೆ ಹೋಗುವ ಕಾಲ ಬರಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ: ಶಾಸಕಿ ಸೌಮ್ಯಾ ರೆಡ್ಡಿ ಕಾರು ಸೀಜ್