ನವದೆಹಲಿ: 2024ರ ಲೋಕಸಭಾ ಚುನಾವಣೆ ಕಳೆಗಟ್ಟಿದೆ. ಈಗಾಗಲೇ ಮೊದಲ ಹಂತದ ಚುನಾವಣೆ ನಡೆಯುತ್ತಿದ್ದು, ಮೊದಲಿಗೆ 21 ರಾಜ್ಯಗಳ 102 ಕ್ಷೇತ್ರಗಳಿಗೆ ಮತದಾನ ನಡೆದಿದೆ. ಇದರಿಂದಾಗಿ ರಾಷ್ಟ್ರೀಯ ಪಕ್ಷಗಳ ನಡುವೆ ಕೆಸರೆರಚಾಟ ಶುರುವಾಗಿದೆ. ಕಾಂಗ್ರೆಸ್ ತನ್ನ ಗ್ಯಾರಂಟಿಗಳ ಮೇಲೆ ನಂಬಿಕೆಯಿಟ್ಟಿದ್ದರೆ, ಬಿಜೆಪಿ ಮೋದಿ ಗ್ಯಾರಂಟಿಯ ಮೇಲೆ ಭರವಸೆ ಹೊಂದಿದೆ. ಅದಕ್ಕೆ ಪೂರಕವಾಗಿ ಕಳೆದ 10 ವರ್ಷಗಳಲ್ಲಿ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಸಾಧನೆಗಳನ್ನು ಜನರ ಮುಂದೆ ಬಿತ್ತರಿಸಲು ಶುರು ಮಾಡಿದ್ದಾರೆ.
ಬಿಜೆಪಿಯಿಂದಷ್ಟೇ ಕರ್ನಾಟಕಕ್ಕೆ ನ್ಯಾಯ.
ಕಾಂಗ್ರೆಸ್ ಕರ್ನಾಟಕಕ್ಕೆ ಮಾಡಿದ್ದ ಅನ್ಯಾಯವನ್ನು ಪ್ರಧಾನಿ ಶ್ರೀ @narendramodi ಅವರು ಸರಿಪಡಿಸಿದ್ದಾರೆ.
ಕಳೆದ ಹತ್ತು ವರ್ಷಗಳಲ್ಲಿ ಕರ್ನಾಟಕಕ್ಕೆ ಮೋದಿ ಸರ್ಕಾರ ನೀಡಿದ್ದು ₹7 ಲಕ್ಷ ಕೋಟಿಗೂ ಹೆಚ್ಚು. #ModiKiGuarantee pic.twitter.com/Q7v3x3Dedr
— BJP Karnataka (@BJP4Karnataka) April 24, 2024
ಕಳೆದ 10 ವರ್ಷಗಳ ಸಾಧನೆಯನ್ನು ಬಣ್ಣಿಸುತ್ತಿರುವ ಪ್ರಧಾನಿ ಮೋದಿ ಅವರು, ಮುಂದಿನ ಗ್ಯಾರಂಟಿಗಳೊಂದಿಗೆ ಚುನಾವಣೆ ಎದುರಿಸುತ್ತಿದ್ದಾರೆ. ಇತ್ತೀಚೆಗೆ ಮಾಧ್ಯಮಗಳಿಗೆ ನೀಡುತ್ತಿರುವ ಸಂದರ್ಶನಗಳಲ್ಲಿ ನೆರೆ-ಹೊರೆ ದೇಶಗಳ ಜೊತೆಗಿನ ಸಂಬಂಧ, ಲೋಕಸಭಾ ಚುನಾವಣೆ, ಭಾರತದಲ್ಲಿ ಪ್ರಜಾಪ್ರಭುತ್ವ, ಮುಕ್ತ ಪತ್ರಿಕಾ ಸ್ವಾತಂತ್ರ್ಯ, ಮೂಲಸೌಕರ್ಯ ಅಭಿವೃದ್ಧಿ, ಪರಿಸರ ಸಂರಕ್ಷಣೆ, ಡಿಜಿಟಲ್ ಕೇತ್ರದಲ್ಲಿನ ಭಾರತದ ಸಾಧನೆ ಮೊದಲಾದ ವಿಷಯಗಳ ಕುರಿತು ಮುಕ್ತವಾಗಿ ಮಾತನಾಡಿದ್ದಾರೆ.
ಪ್ರಸ್ತುತ ಚುನಾವಣೆಯಲ್ಲಿ 3ನೇ ಬಾರಿಗೆ ಅಧಿಕಾರದ ಗದ್ದುಗೆ ಹಿಡಿಯಲೇಬೇಕೆಂದು ಪಣ ತೊಟ್ಟಿರುವ ಪ್ರಧಾನಿ ಮೋದಿ, 3ನೇ ಅತಿದೊಡ್ಡ ಆರ್ಥಿಕ ದೇಶವಾಗಿ ಮಾಡುವ ಗುರಿ ಹೊಂದಿರುವುದಾಗಿ ಮಹತ್ವದ ಗ್ಯಾರಂಟಿ ನೀಡಿದ್ದಾರೆ. ಹಾಗಾದ್ರೆ ಕಳೆದ 10 ವರ್ಷಗಳಲ್ಲಿ ಅಧಿಕಾರಕ್ಕೆ ಬಂದ ನಂತರ ರಾಷ್ಟ್ರದಲ್ಲಿ ಏನೇನು ಬೆಳವಣಿಯಾಗಿದೆ ಎಂಬುದನ್ನು ತಿಳಿಯುವ ಕುತೂಹಲ ನಿಮಗಿದ್ದರೆ ಮುಂದೆ ಓದಿ…
ಸಂವಿಧಾನದ 370ನೇ ವಿಧಿ ರದ್ದು:
ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ ಸಂವಿಧಾನದ 370ನೇ ವಿಧಿಯನ್ನು ರದ್ದುಗೊಳಿಸಿತು. ಭಾರತದ ಸಂವಿಧಾನದ 370ನೇ ವಿಧಿಯು ಉತ್ತರ ಭಾರತದಲ್ಲಿ ವಿವಾದಿತ ಪ್ರದೇಶವಾದ ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸಿಕೊಟ್ಟಿತ್ತು. ಇದು ಜಮ್ಮು ಮತ್ತು ಕಾಶ್ಮೀರಕ್ಕೆ ಪ್ರತ್ಯೇಕ ಸಂವಿಧಾನ, ರಾಜ್ಯಧ್ವಜ ಮತ್ತು ಆಂತರಿಕ ಆಡಳಿತ ಸ್ವಾಯತತ್ತೆಯನ್ನು ಒದಗಿಸಿತ್ತು. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಈ ವಿಧಿಯನ್ನ ರದ್ದುಗೊಳಿಸಿತು. 370ನೇ ವಿಧಿ ರದ್ದತಿಯ ನಂತರ ಆ ಪ್ರದೇಶ ಜಾಗತಿಕ ಕಾರ್ಯಕ್ರಮಗಳ ತಾಣವಾಗಿ ಬದಲಾಗುತ್ತಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಅಲ್ಲದೇ ಇತ್ತೀಚೆಗೆ ಪ್ರಮುಖ ಹೂಡಿಕೆಗಾದರರೂ ಜಮ್ಮು ಮತ್ತು ಕಾಶ್ಮೀರದಂತಹ ಪ್ರದೇಶಗಳಲ್ಲಿ ಹೂಡಿಕೆಗೆ ಮನಸ್ಸು ಮಾಡುತ್ತಿರುವುದು ಗಮನಾರ್ಹ.
ಮಹಿಳೆಯರಿಗೆ ಮೀಸಲಾತಿ:
ಕೇಂದ್ರ ಸರ್ಕಾರ ಹೊಸ ಸಂಸತ್ ಕಟ್ಟಡದ ಮೊದಲ ವಿಶೇಷ ಅಧಿವೇಶನ ಸಮಯದಲ್ಲಿ ಲೋಕಸಭೆ ಮತ್ತು ರಾಜ್ಯಗಳ ವಿಧಾನಸಭೆಯಲ್ಲಿ ಮಹಿಳೆಯರಿಗೆ 33% ಮೀಸಲಾತಿ (Women Reservation) ನೀಡುವ ಮಸೂದೆಯನ್ನು ಪಾಸ್ ಮಾಡಿದೆ. 1989 ರಿಂದ ಈ ವಿಚಾರ ಸಂಸತ್ತಿನಲ್ಲಿ ಚರ್ಚೆ ಆಗುತ್ತಲೇ ಇತ್ತು. ಆದರೆ 2023ರ ಸೆಪ್ಟೆಂಬರ್‌ನಲ್ಲಿ ಮಸೂದೆಯನ್ನು ಪಾಸ್ ಮಾಡಲಾಗಿದೆ. ಅಲ್ಲದೇ ಸಶಸ್ತ್ರ ಮೀಸಲು ಪಡೆಗಳು ಸೇರಿದಂತೆ ಎಲ್ಲ ಕ್ಷೇತ್ರಗಲ್ಲಿಯೂ ಮಹಿಳೆಯರ ಪಾಲ್ಗೊಳ್ಳುವಿಕೆ ಹೆಚ್ಚುತ್ತಿದೆ. ಅಲ್ಲದೇ ಮಹಿಳೆಯರಿಗಾಗಿ ನಮೋ ಡ್ರೋನ್ ದೀದಿ, ಲಕ್‌ಪತಿ ದೀದಿ, ಸ್ವಸಹಾಯ ಸಂಘಗಳಿಗೆ ಆರ್ಥಿಕ ಸಹಾಯ ನೀಡುವ ಮೂಲಕ ನಾರಿ ಶಕ್ತಿಯ ಬಲ ಹೆಚ್ಚಿಸಿದೆ ಎಂದು ಮೋದಿ ಹೇಳಿಕೊಂಡಿದ್ದಾರೆ.
ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಗೆ:
ಕಳೆದ ಮಾರ್ಚ್ ತಿಂಗಳಿನಲ್ಲಿ ಕೇಂದ್ರ ಸರ್ಕಾರ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಅನುಷ್ಠಾನಗೊಳಿಸಿತು.. 2014ರ ಡಿಸೆಂಬರ್ 31ಕ್ಕೂ ಮುನ್ನ ಪಾಕಿಸ್ತಾನ, ಅಫ್ಘಾನಿಸ್ತಾನ, ಬಾಂಗ್ಲಾದೇಶಲ್ಲಿ ಧಾರ್ಮಿಕ ಅಲ್ಪಸಂಖ್ಯಾತರಾದ ಕಾರಣಕ್ಕೆ ಅಲ್ಲಿ ಕಿರುಕುಳ ಅನುಭವಿಸಿ, ಬದುಕಲಾಗದೆ 31 ಡಿಸೆಂಬರ್ 2014ಕ್ಕಿಂತ ಮುಂಚೆ ಭಾರತದೊಳಗೆ ಓಡಿಬಂದ ಹಿಂದೂ, ಜೈನ, ಭೌದ್ಧ, ಕ್ರಿಶ್ಚಿಯನ್, ಪಾರ್ಸಿ ಮತ್ತು ಸಿಖ್ಖರನ್ನು ಭಾರತೀಯ ನಾಗರಿಕರು ಎಂದು ಪರಿಗಣಿಸಿ ಅವರಿಗೆ ಈ ಕಾಯ್ದೆಯ ಅಡಿ ಪೌರತ್ವ ನೀಡಲಾಗುತ್ತದೆ.
ತ್ರಿವಳಿ ತಲಾಖ್ ನಿಷೇಧ:
2019ರ ಜುಲೈ 30 ರಂದು ಭಾರತದ ಸಂಸತ್ತು ತ್ರಿವಳಿ ತಲಾಖ್ ಪದ್ದತಿಯನ್ನು ಕಾನೂನುಬಾಹಿರ ಮತ್ತು ಅಸಾಂವಿಧಾನಿಕ ಎಂದು ಘೋಷಣೆ ಮಾಡಿತು. ಆನಂತರ 2019ರ ಆಗಸ್ಟ್ 1 ರಂದು ಮುಸ್ಲಿಂ ಮಹಿಳೆಯರ ವಿಹಾಹದ ಮೇಲಿನ ಹಕ್ಕುಗಳ ಸಂರಕ್ಷಣೆ ಕಾಯ್ದೆ 2019 ಹೆಸರಿನಲ್ಲಿ ಶಿಕ್ಷಾರ್ಹ ಕಾಯ್ದೆಯನ್ನು ಅನುಷ್ಟಾನಗೊಳಿಸಲಾಯಿತು. ಈ ನಿಯಮ ಉಲ್ಲಂಘಿಸಿದರೆ ಕನಿಷ್ಠ 3 ವರ್ಷ ಜೈಲು ಶಿಕ್ಷಗೆ ವ್ಯಕ್ತಿ ಗುರಿಯಾಗಬಹುದು ಜೊತೆಗೆ ದಂಡ ವಿಧಿಸಲಾಗುತ್ತದೆ. ಅಲ್ಲದೇ ತ್ರಿವಳಿ ತಲಾಖ್ ಪಡೆದ ಸಂತ್ರಸ್ತೆಯು ಪತಿಯಿಂದ ಜೀವನಾಂಶ ಪಡೆಯಲು ಅರ್ಹಳಾಗಿರುತ್ತಾಳೆ, ಜೊತೆಗೆ ಮಕ್ಕಳನ್ನು ತನ್ನ ಸುಪರ್ದಿಗೆ ಪಡೆಯುವ ಅವಕಾಶವೂ ಮಹಿಳೆಗೆ ಇರುತ್ತದೆ ಎಂಬುದು ಗಮನಾರ್ಹ.
ಹೆದ್ದಾರಿಗಳ ಸಂಖ್ಯೆಯಲ್ಲಿ ಹೆಚ್ಚಳ:
ಕಳೆದ 10 ವರ್ಷಗಳಲ್ಲಿ ತಮ್ಮ ಸರ್ಕಾರದ ಅವಧಿಯಲ್ಲಿ ರಾಷ್ಟ್ರೀಯ ಹೆದ್ದಾರಿಗಳ ಸಂಖ್ಯೆ ಶೇ.60 ರಷ್ಟು ಹೆಚ್ಚಳವಾಗಿದೆ. 91,287 ಕಿಮೀ ಗಳಿಂದ 1,46,145 ಕಿಮೀಗಳಿಗೆ ಹೆಚ್ಚಿಸಿದ್ದೇವೆ. ದೇಶಾದ್ಯಂತ ವಿಮಾನ ನಿಲ್ದಾಣಗಳ ಸಂಖ್ಯೆ ದ್ವಿಗುಣಗೊಂಡಿದೆ. 1 ಕೋಟಿ ಮನೆಗಳಿಗೆ ಸೌರ ವಿದ್ಯುತ್ ಕಲ್ಪಿಸಲಾಗಿದೆ. ಅಲ್ಲದೇ ಕಳೆದ 1 ದಶಕದಲ್ಲಿ ಸೌರಶಕ್ತಿ ಬಳಕೆಯಲ್ಲೂ ಗಣನೀಯ ಏರಿಕೆ ಕಂಡಿದೆ ಎಂಬುದಾಗಿ ಪ್ರಧಾನಿ ಹೇಳಿದ್ದಾರೆ. ದೇಶದಲ್ಲಿ ಸೌರಶಕ್ತಿ ಸಾಮರ್ಥ್ಯವೂ 2014 ರಿಂದ 2024ರ ಅವಧಿಗೆ 2,820 ಮೆಗಾವ್ಯಾಟ್‌ನಿಂದ 72,000 ಮೆಗಾವ್ಯಾಟ್‌ಗೆ ತಲುಪಿದೆ. ಭಾರತ ಕೈಗೊಂಡಿರುವ ಭವಿಷ್ಯದ ಯೋಜನೆಗಳೂ ಸಹ ಹವಾಮಾನ ಸುಧಾರಣೆಯ ವಿಚಾರದಲ್ಲಿ ಭದ್ರತೆ ಹೊಂದಿರುವುದಾಗಿ ಹೇಳಿದ್ದಾರೆ. ಅಲ್ಲದೇ 12,349 ಕಿಮೀ ರಾಷ್ಟ್ರೀಯ ಹೆದ್ದಾರಿಯನ್ನು 2023-24ರ ಅವಧಿಯಲ್ಲಿ ನಿರ್ಮಾಣ ಮಾಡಲಾಗಿದೆ.
ಪ್ರಮುಖ ಬೆಳವಣಿಗೆ ಮುಖ್ಯಾಂಶಗಳು:
- ಹೆಚ್‌ಎಎಲ್ 2026ರ ವೇಳೆ 2 ಲಕ್ಷ ಕೋಟಿ ರೂ. ವಹಿವಾಟು ನಡೆಸುವ ಗುರಿ ಹೊಂದಿದೆ.
- ಭಾರತದ ಅಧ್ಯಕ್ಷತೆಯಲ್ಲಿ ಜಿ20 ಶೃಂಗ ಸಭೆ ಆಯೋಜನೆ
- ಅತಿದೊಡ್ಡ ಆರ್ಥಿಕತೆ ಹೊಂದಿದ ದೇಶಗಳ ಪಟ್ಟಿಯಲ್ಲಿ 11ನೇ ಸ್ಥಾನದಲ್ಲಿದ್ದ ಭಾರತ 5ನೇ ಸ್ಥಾನಕ್ಕೆ ಜಿಗಿದಿದೆ.
- ಸೆನ್ಸೆಕ್ಸ್ ಸಾರ್ವಕಾಲಿಕ ದಾಖಲೆ. 2014ರಲ್ಲಿ 25,000 ಸಾವಿರ ದಷ್ಟಿದ್ದ ಷೇರುಪೇಟೆ ಸೂಚ್ಯಂಕ 2024ರಲ್ಲಿ 75000 ಅಂಕಗಳನ್ನು ದಾಟಿದೆ.
- 3ನೇ ಅತಿದೊಡ್ಡ ಸ್ಟಾರ್ಟ್‌ಅಪ್ ಪರಿಸರ ವ್ಯವಸ್ಥೆ ಹೊಂದಿದ ದೇಶವಾಗಿ ಭಾರತ ಗುರುತಿಸಿಕೊಂಡಿದೆ ಎಂಬುದಾಗಿಯೂ ಪ್ರಧಾನಿ ಮೋದಿ ತಿಳಿಸಿದ್ದಾರೆ.