ಶಾಲೆ ಆವರಣದಲ್ಲಿ ಕಾಲುಜಾರಿ ಬಿದ್ದು 10 ವರ್ಷದ ಬಾಲಕ ಸಾವು!

Public TV
2 Min Read
ARMAN

ಘಜಿಯಾಬಾದ್: ಇಲ್ಲಿನ ಇಂದಿರಾಪುರಂ ಶಾಲೆಯ ಎರಡನೇ ಮಹಡಿಯ ಆವರಣದಲ್ಲಿ 10 ವರ್ಷದ ಬಾಲಕನೊಬ್ಬ ಕಾಲು ಜಾರಿ ಬಿದ್ದು ಮೃತಪಟ್ಟ ಘಟನೆ ಮಂಗಳವಾರ ಬೆಳಗ್ಗೆ ನಡೆದಿದೆ.

ಅರ್ಮನ್ ಸೆಹಗಲ್ ಮೃತ ದುರ್ದೈವಿ ಬಾಲಕ. ಈತ ಇಂದಿರಾಪುರಂ ಜಿ ಜಿ ಗೊಯೆಂಕಾ ಪಬ್ಲಿಕ್ ಸ್ಕೂಲ್ ನಲ್ಲಿ 4 ನೇ ತರಗತಿ ಓದುತ್ತಿದ್ದನು.

ಏನಿದು ಘಟನೆ?: ತಂದೆ ಗುಲ್ಶನ್ ಸೆಹಗಲ್ ಮಗ ಅರ್ಮನ್ ನನ್ನು ಮಂಗಳವಾರ ಬೆಳಗ್ಗೆ 7.30ರ ವೇಳೆಗೆ ಶಾಲೆಗೆ ಬಿಟ್ಟು ಬಂದಿದ್ದರು. ಅಂದು ಅರ್ಮನ್ ಗೆ ವಾರದ ಪರೀಕ್ಷೆ ನಡೆಯುವುದಿತ್ತು. ಹೀಗಾಗಿ ಮಗನನ್ನು ತಂದೆ ಬೇಗನೆ ಶಾಲೆಗೆ ಬಿಟ್ಟು ಬಂದಿದ್ದರು. ಗುಲ್ಶನ್ ಮನೆಗೆ ಹಿಂದಿರುಗುತ್ತಿದ್ದಂತೆಯೇ ಅರ್ಮನ್ ಶಾಲೆಯ ಆವರಣದಲ್ಲಿ ಕಾಲು ಜಾರಿ ಬಿದ್ದಿದ್ದಾನೆ. ಹೀಗಾಗಿ ಆತನನ್ನು ಕೂಡಲೇ ನಗರದ ಶಾಂತಿ ಗೋಪಾಲ್ ಆಸ್ಪತ್ರೆಗೆ ದಾಖಲಿಸಿರುವುದಾಗಿ ಶಾಲೆಯಿಂದ ಕರೆ ಬಂದಿದೆ. ಅಂತೆಯೇ ಅರ್ಮನ್ ಪೋಷಕರು ಆಸ್ಪತ್ರೆಗೆ ಕೂಡಲೇ ತೆರಳಿದ್ರು. ಆದ್ರೆ ಅದಾಗಲೇ ವೈದ್ಯರು ಆತ ಮೃತಪಟ್ಟಿದ್ದಾನೆ ಅಂತ ಹೇಳಿದ್ದಾರೆ. ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ತಲೆಗೆ ತೀವ್ರ ಗಾಯಗಳಾಗಿರುವುದರಿಂದ ಬಾಲಕ ಮೃತಪಟ್ಟಿದ್ದಾನೆ ಅಂತ ಹೇಳಲಾಗಿದೆ.

ARMAN 2

ಹೆತ್ತವರ ಆರೋಪವೇನು?: ಶಾಲೆಯ ಶಿಕ್ಷಕರ ನಿರ್ಲಕ್ಷ್ಯಕ್ಕೆ ನನ್ನ ಮಗ ಬಲಿಯಾಗಿದ್ದಾನೆ ಅಂತ ಆರೋಪಿಸುತ್ತಿದ್ದಾರೆ. ಮಗ ಶಾಲೆಯಲ್ಲಿ ಬಿದ್ದ ಕೂಡಲೇ ಯಾರೊಬ್ಬರು ನಮಗೆ ಮಾಹಿತಿ ನೀಡಿಲ್ಲ. ಆತನನ್ನು ಆಸ್ಪತ್ರೆಗೆ ದಾಖಲಿಸಿದ ಬಳಿಕ ನಮಗೆ ಕರೆ ಮಾಡಿದ್ದಾರೆ ಅಂತ ಅರ್ಮನ್ ತಾಯಿ ಸ್ವಾತಿ ಸೆಹಗಲ್ ತಿಳಿಸಿದ್ದಾರೆ.

ಅರ್ಮನ್ ಕಾಲು ಜಾರಿ ಬಿದ್ದ ಕೂಡಲೇ ಅಲ್ಲೇ ಮೂತ್ರ ವಿಸರ್ಜನೆ ಮಾಡಿಕೊಂಡಿದ್ದಾನೆ ಅಂತ ಶಾಲೆಯವರು ಹೇಳುತ್ತಾರೆ. ಆದ್ರೆ ಇದು ಸುಳ್ಳು. ಶಾಲೆಯ ಆವರಣದಲ್ಲಿ ನೀರು ಇದ್ದುದರಿಂದ ಆತ ಕಾಲು ಜಾರಿ ಬಿದ್ದಿದ್ದಾನೆ. ಇಲ್ಲಿ ನಿಜ ವಿಚಾರವನ್ನು ಶಾಲೆಯ ಆಡಳಿತ ಮಂಡಳಿ ಮುಚ್ಚಿಡುತ್ತಿದೆ. ನನ್ನ ಎದುರೇ ಅರ್ಮನ್ ಕಾಲು ಜಾರಿ ಬಿದ್ದಿದ್ದಾನೆ ಅಂತ ಆತನ ಕ್ಲಾಸ್ ಟೀಚರ್ ಹೇಳುತ್ತಿದ್ದಾರೆ. ಆದ್ರೆ ಇದನ್ನು ನಾನು ನಂಬಲ್ಲ. ನನ್ನ ಮಗ ಅಷ್ಟೊಂದು ದುರ್ಬಲನಲ್ಲ. ಹೀಗಾಗಿ ಆವರಣದಲ್ಲಿ ನೀರಿದ್ದ ಕಾರಣವೇ ಆತ ಕಾಲು ಜಾರಿ ಬಿದ್ದಿದ್ದಾನೆ. ಯಾಕಂದ್ರೆ ನಾನು ಆತನ ದೇಹವನ್ನು ಪರಿಶೀಲಿಸಿದಾಗ ಬಟ್ಟೆ ಒದ್ದೆಯಾಗಿತ್ತು ಅಂತ ಸ್ವಾತಿ ಆರೋಪಿಸಿದ್ದಾರೆ.

ಆದ್ರೆ ಸ್ವಾತಿ ಅವರ ಆರೋಪಗಳನ್ನು ಶಾಲೆಯ ಪ್ರಾಂಶುಪಾಲೆ ಡಾ. ಕವಿತಾ ಶರ್ಮಾ ತಳ್ಳಿ ಹಾಕಿದ್ದಾರೆ. ಶಾಲೆಯಲ್ಲಿ ಆ ದಿನ ಪರೀಕ್ಷೆ ನಡೆಯುತ್ತಿತ್ತು. ಹೀಗಾಗಿ ಅರ್ಮನ್ ಪೆನ್ಸಿಲ್ ತರಲೆಂದು ಎಕ್ಸಾಂ ಹಾಲ್ ನಿಂದ ಹೊರಗಡೆ ಹೋಗಿದ್ದನು. ಈ ವೇಳೆ ಶಾಲೆಯ ಕಾರಿಡಾರ್ ನಲ್ಲಿ ಆತ ಕಾಲು ಜಾರಿ ಬಿದ್ದಿದ್ದಾನೆ ಅಂತ ಹೇಳಿದ್ದಾರೆ.

ಇದೊಂದು ದುರದೃಷ್ಟಕರ ಘಟನೆಯಾಗಿದೆ. ಆತ ಇನ್ನೊಂದು ಕ್ಲಾಸಿಗೆ ನಡೆದುಕೊಂಡು ಹೋಗುತ್ತಿದ್ದಾಗ ಕಾಲು ಜಾರಿ ಬಿದ್ದಿದ್ದಾನೆ. ಕೂಡಲೇ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆದ್ರೆ ಆತನನ್ನು ಉಳಿಸಿಕೊಳ್ಳಲಾಗುತ್ತಿಲ್ಲ. ಆತ ಬಿದ್ದ ಜಾಗ ಅಥವಾ ಸುತ್ತಲೂ ನೀರು ಇರಲಿಲ್ಲ. ಪ್ರಕರಣದ ಕುರಿತಂತೆ ಪೊಲಿಸರು ತನಿಖೆ ಮುಂದುವರೆಸಿದ್ದಾರೆ ಅಂತ ಹೇಳಿದ್ರು.

ಅರ್ಮನ್ ಕಾಲು ಜಾರಿ ಬಿದ್ದ ಜಾಗದ ಸುತ್ತಮುತ್ತ ಸಿಸಿಟಿವಿ ಅಳವಡಿಸಿಲ್ಲ ಅಂತ ಶಾಲೆಯ ಅಧಿಕಾರಿಗಳು ಹೇಳಿದ್ದಾರೆ. ಒಟ್ಟಿನಲ್ಲಿ ಬಾಲಕ ಪೋಷಕರ ಆರೋಪದ ಮೇರೆಗೆ ಇದೀಗ ಶಾಲೆಯ ಪ್ರಾಂಶುಪಾಲೆ ಹಾಗೂ ಆಡಳಿತ ಮಂಡಳಿ ವಿರುದ್ಧ ಎಫ್‍ಐಆರ್ ದಾಖಲಾಗಿದೆ.

ARMAN 3

ARMAN 1

 

Share This Article
Leave a Comment

Leave a Reply

Your email address will not be published. Required fields are marked *