ಹಸ್ತಲಾಘವ, ಅಪ್ಪುಗೆ, ಆತ್ಮೀಯತೆ- ನೀವು ನಿದ್ದೆಯಲ್ಲಿದ್ದಾಗ ಮೋದಿ ಟ್ರಂಪ್ ಭೇಟಿ ವೇಳೆ ನಡೆದಿದ್ದೇನು?

Public TV
2 Min Read
donald trump narendra modi 2

ವಾಷಿಂಗ್ಟನ್: ಪ್ರಧಾನಿ ಮೋದಿ ಹಾಗೂ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೋಮವಾರದಂದು ವೈಟ್ ಹೌಸ್‍ನಲ್ಲಿ ಭೇಟಿ ಮಾಡಿದ್ರು. ಅವರು ವೈಟ್‍ಹೌಸ್‍ನಲ್ಲಿ ಭೇಟಿಯಾಗುತ್ತಿರುವುದು ಇದೇ ಮೊದಲ ಬಾರಿಯಾಗಿದ್ರೂ ಇಬ್ಬರ ನಡುವೆ ಇದ್ದ ಆತ್ಮೀಯತೆಯ ಬಗ್ಗೆ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಯಾಗ್ತಿದೆ.

ಪೋರ್ಚುಗಲ್, ಅಮೆರಿಕ ಹಾಗೂ ನೆದರ್ಲೆಂಡ್ಸ್ ದೇಶಗಳ ಪ್ರವಾಸದ ಭಾಗವಾಗಿ ಮೋದಿ ಟ್ರಂಪ್ ಅವರನ್ನ ವೈಟ್‍ಹೌಸ್‍ನಲ್ಲಿ ಭೇಟಿ ಮಾಡಿದ್ರು. ಟ್ರಂಪ್ ಹಾಗೂ ಅಮೆರಿಕದ ಫಸ್ಟ್ ಲೇಡಿ ಮೆಲಾನಿಯಾ ಟ್ರಂಪ್ ಮೋದಿಯವರನ್ನ ಸ್ವಾಗತಿಸಿ ವೈಟ್‍ಹೌಸ್‍ಗೆ ಬರಮಾಡಿಕೊಂಡ್ರು.

ಮೋದಿ ಮೆಲಾನಿಯಾ ಟ್ರಂಪ್‍ಗೆ ಕಾಶ್ಮೀರಿ ಶಾಲ್, ಕಾಂಗ್ರಾ ಕಣಿವೆಯ ಟೀ, ಜೇನುತುಪ್ಪ, ಹಾಗೂ ಬೆಳ್ಳಿಯ ಬ್ರೇಸ್‍ಲೆಟ್ ಉಡುಗೊರೆಯಾಗಿ ನೀಡಿದ್ದಾರೆ. ಇನ್ನು ಟ್ರಂಪ್ ಅವರಿಗಾಗಿ ಪಂಜಾಬ್‍ನ ಹೊಶಿಯಾರ್‍ಪುರ್‍ನ ವಿಶೇಷತೆಯಾದ ಸುಂದರವಾದ ಕೆತ್ತನೆಯುಳ್ಳ ಮರದ ಪೆಟ್ಟಿಗೆಯನ್ನ ಉಡುಗೊರೆಯಾಗಿ ನೀಡಿದ್ದಾರೆ. ಇದರೊಂದಿಗೆ ಅಬ್ರಹಂ ಲಿಂಕನ್ ಅವರ ಸ್ಮರಣೆಗಾಗಿ 1965ರಲ್ಲಿ ವಿತರಿಸಲಾಗಿದ್ದ ಪೋಸ್ಟಲ್ ಸ್ಟ್ಯಾಂಪ್ ಕೂಡ ಉಡುಗೊರೆಯಾಗಿ ನೀಡಿದ್ದಾರೆ.

ನಂತರ ಮೋದಿ ಹಾಗೂ ಟ್ರಂಪ್ ಉನ್ನತ ಮಟ್ಟದ ಮಾತುಕತೆಗಾಗಿ ಕ್ಯಾಬಿನೆಟ್ ರೂಮಿಗೆ ಹೋಗಿ ಚರ್ಚೆ ನಡೆಸಿದ್ರು. ಈ ವೇಳೆ ಟ್ರಂಪ್ ಅಮೆರಿಕದಿಂದ ಭಾರತ ಸೇನಾ ಸಲಕರಣೆಗಳನ್ನ ಕೊಳ್ಳುತ್ತಿರುವುದಕ್ಕೆ ಧನ್ಯವಾದ ತಿಳಿಸಿದ್ರು. ಇತ್ತೀಚೆಗೆ ಟಾಟಾ ಹಾಗೂ ಲಾಕ್‍ಹೀಡ್ ಮಾಟಿರ್ನ್ ನಡುವೆ ಭಾರತದಲ್ಲಿ ಎಫ್-16 ಫೈಟರ್ ಜೆಟ್‍ಗಳ ಉತ್ಪಾದನೆಗೆ ಒಪ್ಪಂದವಾಗಿತ್ತು.

ನಂತರ ಮೋದಿ ಟ್ರಂಪ್ ಜೋಡಿ ಮಾಧ್ಯಮಗಳನ್ನ ಉದ್ದೇಶಿಸಿ ಮಾತನಾಡಿದ್ರು. ವೈಟ್‍ಹೌಸ್‍ನಲ್ಲಿ ಭಾರತಕ್ಕೆ ನಿಜವಾದ ಸ್ನೇಹಿತನಿದ್ದಾನೆ ಎಂದು ಟ್ರಂಪ್ ಪುನರುಚ್ಛರಿಸಿದ್ರು. ಟ್ರಂಪ್ ಹೇಳಿಕೆಯ ಕೊನೆಯಲ್ಲಿ ಮೋದಿ ಟ್ರಂಪ್ ಅವರನ್ನ ತಬ್ಬಿಕೊಂಡು ಹಸ್ತಲಾಘವ ಮಾಡಿದ್ರು. ಸಾಮಾನ್ಯವಾಗಿ ಟ್ರಂಪ್ ವಿವಿಧ ದೇಶಗಳ ನಾಯಕರೊಂದಿಗೆ ಹಸ್ತಲಾಘವ ಮಾಡುವಾಗ ವಿಚಿತ್ರವಾಗಿ ಮಾಡುತ್ತಾರೆ ಎಂದು ಸಾಕಷ್ಟು ಬಾರಿ ಮಾಧ್ಯಮಗಳಲ್ಲಿ ವರದಿಯಾಗಿದೆ. ಹೀಗಾಗಿ ಮೋದಿ ತಬ್ಬಿಕೊಂಡಿದ್ದು ಒಂದು ಮಾಸ್ಟರ್‍ಸ್ಟ್ರೋಕ್ ಅಂತ ಮಾಧ್ಯಮಗಳು ವರದಿ ಮಾಡಿವೆ.

ನಂತರ ಮೋದಿ ಮಾತನಾಡಿ ಭಯೋತ್ಪಾದನೆಯ ವಿರುದ್ಧದ ಹೋರಾಟವೇ ಮೊದಲ ಆದ್ಯತೆ ಅಂದ್ರು. ಕೊನೆಗೆ ಟ್ರಂಪ್ ಅವರಿಗೆ ಕುಟುಂಬದೊಂದಿಗೆ ಭಾರತಕ್ಕೆ ಭೇಟಿ ನೀಡಿ ಎಂದು ಆಹ್ವಾನಿಸಿದ್ರು.

ಇನ್ನು ವೈಟ್‍ಹೌಸ್‍ನಲ್ಲಿ ಮೋದಿಗೆ ಔತಣ ಕೂಟ ಏರ್ಪಡಿಸಲಾಗಿತ್ತು. ಈ ಮೂಲಕ ಮೋದಿ ವೈಟ್‍ಹೌಸ್‍ನಲ್ಲಿ ಟ್ರಂಪ್‍ರಿಂದ ಔತಣ ಕೂಟ ಪಡೆದ ಮೊದಲ ವಿದೇಶಿ ಗಣ್ಯರೆನಿಸಿಕೊಂಡ್ರು.

donald trump narendra modi

ಇನ್ನು ಮೋದಿ ವೈಟ್‍ಹೌಸ್‍ನಿಂದ ಹೊರಡುವಾಗ ಮತ್ತೊಮ್ಮೆ ಟ್ರಂಪ್‍ರನ್ನ ತಬ್ಬಿಕೊಂಡ್ರು.

donald trump narendra modi 1

donald trump narendra modi 3

Share This Article
Leave a Comment

Leave a Reply

Your email address will not be published. Required fields are marked *