– ‘ವಿಶ್ವ ಸಾಂಸ್ಕೃತಿಕ ಉತ್ಸವ’ದ ಮೊದಲ ದಿನದ ಕಾರ್ಯಕ್ರಮದಲ್ಲಿ 10 ಲಕ್ಷ ಮಂದಿ ಭಾಗಿ
ಬೆಂಗಳೂರು: ಅಮೆರಿಕದ ವಾಷಿಂಗ್ಟನ್ ಡಿಸಿಯಲ್ಲಿ ಆರ್ಟ್ ಆಫ್ ಲಿವಿಂಗ್ (The Art Of Living) ಸಂಸ್ಥೆ ಆಯೋಜಿಸಿರುವ 4ನೇ ವಿಶ್ವ ಸಾಂಸ್ಕೃತಿಕ ಉತ್ಸವದಲ್ಲಿ (World Culture Festival 2023) 10 ಲಕ್ಷಕ್ಕೂ ಹೆಚ್ಚು ಮಂದಿ ಪಾಲ್ಗೊಂಡಿದ್ದರು. 180 ದೇಶಗಳ ಲಕ್ಷಾಂತರ ಜನರು ಜಗತ್ತಿನ ಮಾನವೀಯತೆ, ಶಾಂತಿ ಮತ್ತು ಸಂಸ್ಕೃತಿಗಳ ಸಂಗಮದ ಹಬ್ಬವಾದ ‘ವಿಶ್ವ ಸಾಂಸ್ಕೃತಿ ಉತ್ಸವ’ದಲ್ಲಿ ಭಾಗಿಯಾಗಿ ಅದ್ಭುತಕ್ಕೆ ಸಾಕ್ಷಿಯಾದರು.
Advertisement
Advertisement
Advertisement
ಈ ಸಮಾರಂಭದಲ್ಲಿ ಜಾಗತಿಕ ಗಣ್ಯರಾದ ವಿಶ್ವಸಂಸ್ಥೆಯ 8ನೇ ಪ್ರಧಾನ ಕಾರ್ಯದರ್ಶಿ ಹೆಚ್.ಇ. ಬಾನ್ ಕಿ-ಮೂನ್, ವಾಷಿಂಗ್ಟನ್ ಡಿ.ಸಿಯ ಮೇಯರ್ ಮುರಿಯಲ್ ಬೌಸರ್, ಭಾರತದ ವಿದೇಶಾಂಗ ಸಚಿವ ಎಸ್. ಜೈಶಂಕರ್, ಬಿಷಪ್ ಎಮೆರಿಟ್ಸ್ ಮಾರ್ಸೆಲೊ ಸ್ಯಾಂಚೆಜ್ ಸೊರೊಂಡೋ, ಪಾಂಟಿಫಿಕಲ್ ಅಕಾಡೆಮಿ ಆಫ್ ಸೈನ್ಸಸ್‌ನ ಚಾನ್ಸೆಲರ್ ಎಮೆರಿಟಸ್ ಪಾಲ್ಗೊಂಡಿದ್ದರು. ವಸುದೈವ ಕುಟುಂಬಕಂ (ಇಡೀ ವಿಶ್ವವೇ ಒಂದು ಕುಟುಂಬ) ಎಂಬ ಧ್ಯೇಯವಾಕ್ಯದೊಂದಿಗೆ ಆರ್ಟ್ ಆಫ್ ಲಿವಿಂಗ್‌ನ ‘ವಿಶ್ವ ಸಾಂಸ್ಕೃತಿಕ ಉತ್ಸವವು ಸಂಗೀತ, ನೃತ್ಯಗಳ ಮೂಲಕ ಏಕತೆ, ಸಾಮರಸ್ಯದ ಜಾಗತಿಕ ಸಂದೇಶ ಸಾರಿತು.
Advertisement
ಜಾಗತಿಕ ಗಣ್ಯರು, ರೋಮಾಂಚನಗೊಳಿಸುವ ಸಂಗೀತ ಮತ್ತು ವರ್ಣರಂಜಿತ ನೃತ್ಯ ಪ್ರದರ್ಶನ ಕಲಾವಿದರು, ಗ್ರ್ಯಾಮಿ ಪ್ರಶಸ್ತಿ ವಿಜೇತರು, ಇತರೆ ಹೆಸರಾಂತ ಕಲಾವಿದರು ಬೃಹತ್ ಕಾರ್ಯಕ್ರಮದಲ್ಲಿ ಒಟ್ಟಾಗಿ ಪಾಲ್ಗೊಂಡಿದ್ದರು.
ಜಾಗತಿಕ ಮಾನವತಾವಾದಿ ಮತ್ತು ಶಾಂತಿದೂತರಾದ, ದಿ ಆರ್ಟ್ ಆಫ್ ಲಿವಿಂಗ್ ಸಂಸ್ಥಾಪಕ ಗುರುದೇವ ಶ್ರೀ ಶ್ರೀ ರವಿಶಂಕರ್ (Ravishankar Guruji) ಅವರು ಮಾತನಾಡಿ, ನಮ್ಮ ವೈವಿಧ್ಯತೆಯನ್ನು ಆಚರಿಸಲು ಇದು ಒಂದು ಸುಂದರ ಸಂದರ್ಭವಾಗಿದೆ. ನಮ್ಮ ಜಗತ್ತು ತುಂಬಾ ವೈವಿಧ್ಯಮಯವಾಗಿದೆ. ಆದರೂ ನಮ್ಮ ಮಾನವೀಯ ಮೌಲ್ಯಗಳಲ್ಲಿ ಏಕತೆ ಇದೆ. ಈ ಸಂದರ್ಭದಲ್ಲಿ ಸಮಾಜದಲ್ಲಿ ಹೆಚ್ಚಿನ ಸಂತೋಷವನ್ನು ತರಲು ನಾವು ಬದ್ಧರಾಗೋಣ. ಎಲ್ಲರ ಮುಖದಲ್ಲೂ ನಗು ಮೂಡಿಸೋಣ. ಅದೇ ಮಾನವೀಯತೆ. ಅದರಿಂದಲೇ ನಾವೆಲ್ಲರೂ ಮಾಡಲ್ಪಟ್ಟಿರುವುದು. ಜ್ಞಾನದ ಬೆಂಬಲವಿಲ್ಲದಿದ್ದರೆ ಯಾವುದೇ ಆಚರಣೆಯು ಸತ್ವವನ್ನು ಹೊಂದಿರುವುದಿಲ್ಲ. ಆ ಜ್ಞಾನವು ನಮ್ಮೆಲ್ಲರೊಳಗಿದೆ. ನಾವು ವಿಭಿನ್ನವಾಗಿದ್ದರೂ, ನಾವೆಲ್ಲರೂ ಒಂದೇ ಎಂದು ಗುರುತಿಸುವುದು ಜಾಣ್ಮೆಯಾಗಿದೆ. ನಾವೆಲ್ಲರೂ ಪರಸ್ಪರ ಒಬ್ಬರಿಗೊಬ್ಬರು ಸೇರಿದವರು. ನಾವೆಲ್ಲರೂ ವಿಶ್ವ ಕುಟುಂಬಕ್ಕೆ ಸೇರಿದವರು. ನಮ್ಮ ಜೀವನವನ್ನು ಸಂಭ್ರಮಿಸೋಣ. ಸವಾಲುಗಳನ್ನು ದಿಟ್ಟತನದಂದ ಸ್ವೀಕರಿಸಿ ಎದುರಿಸೋಣ. ಮುಂದಿನ ಪೀಳಿಗೆಯ ಉತ್ತಮ ಭವಿಷ್ಯಕ್ಕಾಗಿ ಕನಸನ್ನು ಕಾಣೋಣ ಎಂದು ಸಂದೇಶ ನೀಡಿದರು.
ಭಾರತದ ವಿದೇಶಾಂಗ ಸಚಿವ ಡಾ. ಎಸ್.ಜೈಶಂಕರ್ ಮಾತನಾಡಿ, ನಾವೆಲ್ಲರೂ ಸಮೃದ್ಧಿಯನ್ನು ಹೆಚ್ಚಿಸಲು ಮತ್ತು ನಮ್ಮ ಭೂಮಿಯ ಭವಿಷ್ಯವನ್ನು ಭದ್ರಪಡಿಸಿಕೊಳ್ಳಲು ಪ್ರಯತ್ನಿಸುತ್ತಿರುವಾಗ ಸವಾಲುಗಳನ್ನು ಎದುರಿಸುವುದು ಸಹಜ. ನೈಸರ್ಗಿಕ ವಿಕೋಪಗಳಾಗಲಿ, ಮಾನವ ನಿರ್ಮಿತವಾದವುಗಳಾಗಲಿ, ಘರ್ಷಣೆಗಳಾಗಲಿ ಅಥವಾ ಅಡೆತಡೆಗಳಾಗಲಿ ಪರಸ್ಪರ ಅವಲಂಬಿತ ಜಗತ್ತಿನಲ್ಲಿ ನಾವು ಯಾವಾಗಲೂ ಒಬ್ಬರಿಗೊಬ್ಬರು ಇರುತ್ತೇವೆ ಎಂಬುದು ಮುಖ್ಯವಾಗುತ್ತದೆ. ಈ ನಿಟ್ಟಿನಲ್ಲಿ ಆರ್ಟ್ ಆಫ್ ಲಿವಿಂಗ್ ಒಂದು ಸ್ಪೂರ್ತಿದಾಯಕ ಉದಾಹರಣೆಯಾಗಿದೆ. ಉಕ್ರೇನ್ ಸಂಘರ್ಷದ ಸಂದರ್ಭದಲ್ಲಿ ಅವರು ಇತ್ತೀಚೆಗೆ ಬೀರಿದ ಪ್ರಭಾವವನ್ನು ನಾನು ವೈಯಕ್ತಿಕವಾಗಿ ನೋಡಿದ್ದೇನೆ. ಇಂದು ಅವರ ಸಂದೇಶ, ನಿಮ್ಮ ಸಂದೇಶ, ನಮ್ಮ ಸಂದೇಶವು ಕಾಳಜಿ, ಹಂಚಿಕೊಳ್ಳುವಿಕೆ, ಔದಾರ್ಯ, ತಿಳುವಳಿಕೆಯ ಸದ್ಭಾವನೆ ಮತ್ತು ಸಹಕಾರವಾಗಿರಬೇಕು. ಇದುವೇ ನಮ್ಮೆಲ್ಲರನ್ನೂ ಇಲ್ಲಿ ಒಟ್ಟುಗೂಡಿಸಿರುವುದು ಎಂದು ಹೇಳಿದರು.
ವಿಶ್ವ ಸಾಂಸ್ಕೃತಿಕ ಉತ್ಸವದ ಮೊದಲ ದಿನದಂದು ವಿಶ್ವಸಂಸ್ಥೆಯ 8ನೇ ಪ್ರಧಾನ ಕಾರ್ಯದರ್ಶಿ ಹೆಚ್.ಇ. ಬಾನ್ ಕಿ-ಮೂನ್, ವಾಷಿಂಗ್ಟನ್ ಡಿ.ಸಿಯ ಮೇಯರ್ ಮುರಿಯಲ್ ಬೌಸರ್, ಮಿಚಿಗನ್ ಕಾಂಗ್ರೆಸಿಗ ಥಾನೆದರ್, ಜಪಾನಿನ ಶಿಕ್ಷಣ, ಸಂಸ್ಕೃತಿ, ಕ್ರೀಡೆ, ವಿಜ್ಞಾನ ಹಾಗೂ ತಂತ್ರಜ್ಞಾನದ ಮಾಜಿ ಸಚಿವ, ಸಂಸದ ಹಕುಬುನ್ ಶಿಮೊಮುರಾ, ಯುಎನ್‌ಇಪಿಯ ಮಾಜಿ ಉಪ ಪ್ರಧಾನ ಕಾರ್ಯದರ್ಶಿ ಮತ್ತು ಯುಎನ್‌ಇಪಿಯ ಕಾರ್ಯನಿರ್ವಾಹಕ ನಿರ್ದೇಶಕ ಎರಿಕ್ ಸೋಲ್‌ಹೈಮ್, ಮಾಜಿ ಅಂತಾರಾಷ್ಟ್ರೀಯ ಅಭಿವೃದ್ಧಿ ನಾರ್ವೆ ಸಚಿವರು ಮತ್ತು ಇತರ ಜಾಗತಿಕ ಗಣ್ಯರು, ಅನೇಕ ಜಾಗತಿಕ ಸವಾಲುಗಳನ್ನು ಎದುರಿಸುತ್ತಿರುವ ಸಂಘರ್ಷದ ಜಗತ್ತಿನಲ್ಲಿ ಏಕತೆ, ಶಾಂತಿ ಮತ್ತು ಸಾಮರಸ್ಯದ ಸಹಬಾಳ್ವೆ ಕುರಿತು ಮಾತನಾಡಿದರು.
ದಿ ರೆವರೆಂಡ್ ಬಿಷಪ್ ಎಮೆರಿಟ್ಸ್ ಮಾರ್ಸೆಲೊ ಸ್ಯಾಂಚೆಜ್ ಸೊರೊಂಡೋ ಅವರು, ವಿಶ್ವ ಶಾಂತಿ ಸಾಧಿಸಲು ನಮ್ಮಲ್ಲಿ ಆಂತರಿಕ ಶಾಂತಿಯಿರಬೇಕು. ಶಾಂತಿಯನ್ನು ಸಂವಹನ ಮಾಡಲು, ನಾವು ಶಾಂತಿಯಿಂದ ಬದುಕಬೇಕು. ಶಾಂತಿಯಿಂದ ಬದುಕಲು ನಮಗೆ ಆರ್ಟ್ ಆಫ್ ಲಿವಿಂಗ್ ಅಗತ್ಯವಿದೆ. ಶಾಂತಿಯಿಂದ ಬದುಕುವ ಕಲೆಯನ್ನು ಹೊಂದಲು ನಾವು ದೇವರೊಂದಿಗೆ ಸಂವಹನ ಸಾಧಿಸಬೇಕು. ದೇವರು ಮಾನವನಿಗೆ ಶತ್ರುವಲ್ಲ. ದೇವರು ಒಬ್ಬ ಸ್ನೇಹಿತ. ದೇವರು ಅಂದರೆ ಪ್ರೀತಿ. ದೇವರನ್ನು ಹೊಂದಲು ನಾವು ಧ್ಯಾನಕ್ಕೆ, ಪ್ರಾರ್ಥನೆಗೆ ಹಿಂತಿರುಗಬೇಕಾಗಿದೆ. ನಾವು ನಮ್ಮ ಮೂಲಕ್ಕೆ ಹಿಂತಿರುಗಬೇಕಾಗಿದೆ. ಆದ್ದರಿಂದ ಈ ಸೂಕ್ಷ್ಮ ಕ್ಷಣದಲ್ಲಿ ನಾವು ದೇವರನ್ನು ಪ್ರಾರ್ಥಿಸಬೇಕಾಗಿದೆ. ಪೋಪ್ ಫ್ರಾನ್ಸಿಸ್ ಅವರ ಹೆಸರಿನಲ್ಲಿ ನಾವು ಎಲ್ಲಾ ಮಾನವರ ಭ್ರಾತೃತ್ವದಲ್ಲಿ ನಾನು ನಿಮ್ಮನ್ನು ಆಶೀರ್ವದಿಸುತ್ತೇನೆ. ನಾನು ಈ ದೊಡ್ಡ ಸಭೆಯನ್ನು ಆಶೀರ್ವದಿಸುತ್ತೇನೆ. ಈ ಜೀವನ ಕ್ರಮವು ನಿಜವಾಗಿಯೂ ನಮ್ಮ ಮಾನವೀಯತೆಯ ಭವಿಷ್ಯವಾಗಿರಲಿದೆ ಎಂದು ನಾನು ಭಾವಿಸುತ್ತೇನೆ ಎಂದು ಹೇಳಿದರು.
ಗುರುದೇವ್ ಶ್ರೀ ಶ್ರೀ ರವಿಶಂಕರ್ ಅವರಿಂದ ಪ್ರೇರಿತರಾಗಿ ಮತ್ತು ಆರ್ಟ್ ಆಫ್ ಲಿವಿಂಗ್ ಸಂಸ್ಥೆಯು ಆಯೋಜಿಸಿದ ವಿಶ್ವ ಸಾಂಸ್ಕೃತಿಕ ಉತ್ಸವವು ಗಡಿಗಳನ್ನು ಮೀರಿದ್ದು, ಮಾನವೀಯತೆ ಮತ್ತು ಸಹೋದರತ್ವದ ಎಳೆಯಲ್ಲಿ ಒಟ್ಟಿಗೆ ಕಟ್ಟಿದ ಸಂಸ್ಕೃತಿಗಳ ಶ್ರೀಮಂತಿಕೆಯನ್ನು ಆಚರಿಸಿತು. ಸಂಗೀತ ಮತ್ತು ನೃತ್ಯದ ಮೂಲಕ ಸ್ಥಳೀಯ ಸಂಪ್ರದಾಯಗಳ ಸಂರಕ್ಷಣೆಗಾಗಿ ವಿಶ್ವ ಸಾಂಸ್ಕೃತಿಕ ಉತ್ಸವವು ವೇದಿಕೆ ಒದಗಿಸುತ್ತದೆ. ಹಾಗೆಯೇ ಪ್ರತಿಯೊಬ್ಬರೂ ಆನಂದಿಸಲು ಅವಕಾಶವನ್ನು ಒದಗಿಸುತ್ತದೆ. ಇದು ಪ್ರೀತಿ, ಸಹಾನುಭೂತಿ ಮತ್ತು ಸೌಹಾರ್ದತೆಯಂತಹ ಸಾರ್ವತ್ರಿಕ ಮಾನವೀಯ ಮೌಲ್ಯಗಳ ಪುನರುಜ್ಜೀವನದ ಆಂದೋಲನವಾಗಿದೆ ಎಂದು ಹೇಳಿಲಾಯಿತು.
ವಿಶ್ವಸಂಸ್ಥೆಯ 8ನೇ ಪ್ರಧಾನ ಕಾರ್ಯದರ್ಶಿ ಮಹಾಮಹಿಮರಾದ ಬಾನ್ ಕಿ-ಮೂನ್, ಸಂಸ್ಕೃತಿ ಸೇತುವೆಗಳನ್ನು ನಿರ್ಮಿಸುತ್ತದೆ, ಗೋಡೆಗಳನ್ನು ಒಡೆಯುತ್ತದೆ. ಮಾತುಕತೆ ಮತ್ತು ಪರಸ್ಪರ ತಿಳಿವಳಿಕೆಯ ಮೂಲಕ ಜಗತ್ತನ್ನು ಒಟ್ಟುಗೂಡಿಸುತ್ತದೆ. ಜನರು ಮತ್ತು ರಾಷ್ಟ್ರಗಳ ನಡುವೆ ಏಕತೆ ಮತ್ತು ಸಾಮರಸ್ಯವನ್ನು ಹೆಚ್ಚಿಸುತ್ತದೆ. ಸಂಸ್ಕೃತಿಯು ಎಲ್ಲಾ ಜಾಗತಿಕ ನಾಗರಿಕರ ನಡುವೆ ಪ್ರಬಲ ವಿನಿಮಯವನ್ನು ರಚಿಸಬಹುದು. ಇಂದು ಪ್ರಪಂಚದ ಎಲ್ಲಾ ಸಾಂಸ್ಕೃತಿಕ ಶ್ರೀಮಂತಿಕೆಯು ಯುನೈಟೆಡ್ ಸ್ಟೇಟ್ಸ್‌ನ ನ್ಯಾಷನಲ್ ಮಾಲ್‌ನಲ್ಲಿ ಒಟ್ಟುಗೂಡಿದೆ. ಗುರುದೇವ್ ಶ್ರೀ ಶ್ರೀ ರವಿಶಂಕರ್ ಅವರ ಏಕತೆ ಮತ್ತು ವೈವಿಧ್ಯತೆಯ ಸ್ಪೂರ್ತಿದಾಯಕ ದೃಷ್ಟಿಕೋನವನ್ನು ನಾನು ಪ್ರಶಂಸಿಸುತ್ತೇನೆ. ನಮಗೆ ಇಂತಹ ಹೆಚ್ಚು ಹೆಚ್ಚು ಆಚರಣೆಗಳು, ಹೆಚ್ಚು ಒಗ್ಗೂಡುವಿಕೆ, ಹೆಚ್ಚು ಶಾಂತಿ ಮತ್ತು ಹೆಚ್ಚಿನ ಸಹಕಾರ, ಐಕ್ಯಭಾವ ಮತ್ತು ಪಾಲುದಾರಿಕೆಯ ಅಗತ್ಯವಿದೆ. ನಾವು ಈಗ ಎದುರಿಸುತ್ತಿರುವ ದೊಡ್ಡ ಸವಾಲುಗಳ ಮೇಲೆ ನಾವು ಹೀಗೆಯೇ ಮುನ್ನುಗ್ಗಿ ಮುಂದುವರಿಯುತ್ತೇವೆ. ಇದೇ ರೀತಿ ನಾವು ಶಾಂತಿಯನ್ನು ನಿರ್ಮಿಸುತ್ತೇವೆ. ಸಂಘರ್ಷಗಳನ್ನು ಪರಿಹರಿಸುತ್ತೇವೆ. ಹಸಿವನ್ನು ಕೊನೆಗೊಳಿಸುತ್ತೇವೆ. ಆರೋಗ್ಯಕರ ಜೀವನವನ್ನು ಖಚಿತಪಡಿಸಿಕೊಳ್ಳುತ್ತೇವೆ. ಗುಣಮಟ್ಟದ ಶಿಕ್ಷಣವನ್ನು ಮುನ್ನಡೆಸುತ್ತೇವೆ. ಮಹಿಳೆಯರು ಮತ್ತು ಬಾಲಕಿಯರನ್ನು ಸಬಲೀಕರಣಗೊಳಿಸುತ್ತೇವೆ. ಹೀಗೆಯೇ ನಾವು ಯಾರೂ ಹಿಂದುಳಿಯದಂತೆ ಮುನ್ನಡೆಯಲಿರುವುದು ಎಂದು ತಿಳಿಸಿದರು.
ಸಾವಿರಾರು ರಾಷ್ಟ್ರಧ್ವಜಗಳು ಏಕತೆಯ ಉತ್ಸಾಹದಲ್ಲಿ ಗಾಳಿಯಲ್ಲಿ ಹಾರಾಡಿದವು. ಉತ್ಸವದಲ್ಲಿ ನೆರೆದಿದ್ದ ಜನರ ಉತ್ಸಾಹ ಮತ್ತು ಸಂತೋಷ ಇಮ್ಮಡಿಗೊಂಡಿತ್ತು. ಕಲಾವಿದರಲ್ಲಿ ಶಕ್ತಿಯ ಸಂಚಲನ ಮೂಡಿದಂತಿತ್ತು.
ಉತ್ಸವದ ಮಹತ್ವ ಕುರಿತು ಮಾತನಾಡಿದ ಮೋಹಿನಿಯಾಟ್ಟಂ ಪ್ರದರ್ಶನದ ನೃತ್ಯ ಸಂಯೋಜಕಿ ಬೀನಾ ಮೋಹನ್, ಈ ಪ್ರದರ್ಶನದ ಭಾಗವಾಗುವುದು ಒಂದು ಕನಸು. ಈ ಕಾರ್ಯವನ್ನು ಸಂಯೋಜಿಸುವುದು ನನಗೆ ಮತ್ತು ನನ್ನ ವಿದ್ಯಾರ್ಥಿಗಳಿಗೆ ನಂಬಲಾಗದ ಒಂದು ಅನುಭವವಾಗಿತ್ತು. ಪ್ರದರ್ಶನದ ನಂತರ ಇದು ನಮಗೆ ತರುವ ಆತ್ಮವಿಶ್ವಾಸ, ಸಂತೋಷ ಎಲ್ಲವೂ ಒಂದು ವಿಭಿನ್ನ ಭಾವನೆಯಾಗಿರಲಿದೆ ಎಂದು ಅವರು ಹೇಳಿದರು.
ವಿಶ್ವ ಸಾಂಸ್ಕೃತಿಕ ಉತ್ಸವದ ತಮ್ಮ ಭಾಷಣದಲ್ಲಿ ಮಿಚಿಗನ್ ಕಾಂಗ್ರೆಸಿಗರಾದ ಥಾನೇದಾರ್ ಮಾತನಾಡಿ, ಕರ್ನಾಟಕ ರಾಜ್ಯದೊಂದಿಗಿನ ತಮ್ಮ ಸಂಬಂಧದ ಬಗ್ಗೆ ಅನಿಸಿಕೆ ಹಂಚಿಕೊಂಡರು. ಎಂತಹ ಸುಂದರವಾದ ಸಂಜೆ. ಎಂತಹ ಸುಂದರ ಪ್ರದರ್ಶನಗಳು. ನಾವು ಸ್ವಲ್ಪ ಮಳೆಯನ್ನು ನೋಡಿದ್ದೇವೆ. ಅದು ವಿಶ್ವ ಶಾಂತಿ ಮತ್ತು ಹೊಸ ಆರಂಭವನ್ನು ತರುತ್ತದೆ. ಕರ್ನಾಟಕದ ಬೆಳಗಾವಿಯಲ್ಲಿ ಆರ್ಥಿಕವಾಗಿ ಸಂಕಷ್ಟದಲ್ಲಿದ್ದ ಮನೆಯಲ್ಲಿ ಬೆಳೆದು, ಆ ರಾಜ್ಯವನ್ನು ಗುರುದೇವರೊಂದಿಗೆ ಹಂಚಿಕೊಂಡಿದ್ದ ನನಗೆ ಇತ್ತೀಚೆಗೆ ಗುರುದೇವರೊಂದಿಗೆ ಕನ್ನಡದಲ್ಲಿ ಮಾತನಾಡಲು ಸಾಧ್ಯವಾಗಿದ್ದಕ್ಕೆ ತುಂಬಾ ಸಂತೋಷವಾಯಿತು ಎಂದರು.
ಗ್ರ್ಯಾಮಿ ಪ್ರಶಸ್ತಿ ವಿಜೇತೆ ಚಂದ್ರಿಕಾ ಟಂಡನ್ ಮತ್ತು 200 ಕಲಾವಿದರು ‘ಅಮೆರಿಕಾ ದಿ ಬ್ಯೂಟಿಫುಲ್ ಮತ್ತು ವಂದೇ ಮಾತರಂ’ ಗಾಯನ ಮಾಡಿದರು. 1,000 ಕಲಾವಿದರನ್ನು ಒಳಗೊಂಡ ಭಾರತೀಯ ಶಾಸ್ತ್ರೀಯ ನೃತ್ಯ ಮತ್ತು ಶಾಸ್ತ್ರೀಯ ಕಛೇರಿಯು ಪಂಚಭೂತಂ ಎಂಬ ಪ್ರದರ್ಶನ ನಡೆಸಿತು. ಗ್ರ್ಯಾಮಿ ಪ್ರಶಸ್ತಿ ವಿಜೇತ ಮಿಕ್ಕಿ ಫ್ರೀ ಅವರ ನೇತೃತ್ವದಲ್ಲಿ 1,000 ಗಿಟಾರ್‌ಗಳ ವಾದನವೂ ನಡೆಯಿತು. ಆಫ್ರಿಕಾ, ಜಪಾನ್ ಮತ್ತು ಮಧ್ಯಪ್ರಾಚ್ಯ ರಾಷ್ಟ್ರಗಳಿಂದ ಅನೇಕ ಪ್ರದರ್ಶನಗಳು ನಡೆದವು. ಅಂತಿಮವಾಗಿ ‘ಒನ್ ಲವ್’ ಆಚರಣೆಯೊಂದಿಗೆ ಸ್ಕಿಪ್ ಮಾರ್ಲೆಯವರ ರೆಗ್ಗೀ ರಿದಮ್ಸ್ ಪ್ರದರ್ಶನದೊಂದಿಗೆ ಮೊದಲ ದಿನದ ಕಾರ್ಯಕ್ರಮವು ಮುಕ್ತಾಯಗೊಂಡಿತು.
Web Stories