ಹೈದಾರಬಾದ್: ಆಂಧ್ರಪ್ರದೇಶದ ಕರ್ನೂಲ್ ನಲ್ಲಿ ಗ್ರಾನೈಟ್ ಕಲ್ಲುಗಳ ಕ್ವಾರಿಯಲ್ಲಿ ಸ್ಫೋಟಗೊಂಡು 10 ಮಂದಿ ಮೃತಪಟ್ಟಿದ್ದಾರೆ.
ಈ ಅವಘಡ ಶುಕ್ರವಾರ ರಾತ್ರಿ ಕರ್ನೂಲ್‍ನ ಹಾಥಿ ನೆಲ್ಗಾಲ್ ನಲ್ಲಿ ಸಂಭವಿಸಿದ್ದು, ಸ್ಥಳದಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರಲ್ಲಿ ಐದಕ್ಕಿಂತ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಸದ್ಯ ಗಾಯಾಳುಗಳು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಕರ್ನೂಲ್‍ನ ಎಸ್ ಪಿ ಹೇಳಿದ್ದಾರೆ.
ಕಲ್ಲುಗಳು ಮುರಿದು ಬೀಳುತ್ತಿದ್ದಂತೆಯೇ ಬೆಂಕಿ ಸ್ಫೋಟಗೊಂಡಿದ್ದು, ಸುತ್ತಮುತ್ತ ಸ್ಥಳಗಳಿಗೂ ಬೆಂಕಿ ಆವರಿಸಿದೆ. ಅಷ್ಟೇ ಅಲ್ಲದೇ 3 ಟ್ರಾಕ್ಟರ್, 1 ಲಾರಿ ಮತ್ತು 2 ಶೆಡ್‍ಗಳು ಬೆಂಕಿಗೆ ಆಹುತಿಯಾಗಿವೆ. ಕೂಡಲೇ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ತೊಡಗಿದ್ದಾರೆ.
ಈ ಪ್ರಕರಣವನ್ನು ಯು/ಎಸ್ 304, ಭಾಗ-2 ರ ಸ್ಫೋಟಕಕಾರಿ ವಸ್ತುಗಳ ಕಾಯ್ದೆಯಡಿ ಐಪಿಸಿ ಸೆಕ್ಷನ್ 3 ಮತ್ತು 5 ರಲ್ಲಿ ದಾಖಲಿಸಿಕೊಂಡಿದ್ದು, ಘಟನೆ ಕುರಿತು ಪರಿಶೀಲನೆ ನಡೆಸುತ್ತೇವೆ ಎಂದು ಎಸ್‍ಪಿ ಹೇಳಿದ್ದಾರೆ.
ಆಂಧ್ರಪ್ರದೇಶದ ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡು ಅವಘದ ಬಗ್ಗೆ ಮರುಕ ವ್ಯಕ್ತಪಡಿಸಿದ್ದು, ಮೃತಪಟ್ಟ ಕುಟುಂಬಗಳಿಗೆ 5 ಲಕ್ಷ ರೂ. ಪರಿಹಾರ ನೀಡಿದರು. ಹಾಗೂ ಘಟನೆ ಬಗ್ಗೆ ತೀವ್ರ ಕಾರ್ಯಚರಣೆ ಕೈಗೊಳ್ಳುವಂತೆ ಆದೇಶ ನೀಡಿದರು.