ಕೋಲ್ಕತ್ತಾ: ಪಶ್ಚಿಮ ಬಂಗಾಳದ ಕೂಚ್ ಬೆಹಾರ್ ಜಿಲ್ಲೆಯಲ್ಲಿ ಜಲ್ಪೇಶ್‍ಗೆ ಪ್ರಯಾಣಿಕರನ್ನು ಕೊಂಡೊಯ್ಯುತ್ತಿದ್ದ ಪಿಕಪ್ ವಾಹನಕ್ಕೆ ವಿದ್ಯುತ್ ಪ್ರವಹಿಸಿ 10 ಮಂದಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ದು, 16 ಮಂದಿ ಗಾಯಗೊಂಡಿದ್ದಾರೆ ಎಂದು ಎಂದು ಭಾನುವಾರ ತಡರಾತ್ರಿ ಪೊಲೀಸರು ತಿಳಿಸಿದ್ದಾರೆ.
ಘಟನೆಯಲ್ಲಿ ಗಾಯಗೊಂಡಿರುವ 16 ಮಂದಿಯನ್ನು ಚಿಕಿತ್ಸೆಗಾಗಿ ಜಲ್‍ಪೈಗುರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ವಾಹನದಲ್ಲಿದ್ದ ಡಿಜೆ ಸಿಸ್ಟಂನ ಜನರೇಟರ್‌ನ ವೈರಿಂಗ್‍ನಿಂದ ಈ ಘಟನೆ ನಡೆದಿರಬಹುದು ಎಂದು ಶಂಕಿಸಲಾಗಿದೆ. ಇದನ್ನೂ ಓದಿ: ನಾಡದೇವಿ ಚಾಮುಂಡೇಶ್ವರಿ ಹಬ್ಬಕ್ಕೆ ದಿನಗಣನೆ – ಮೈಸೂರು ದಸರಾಕ್ಕೆ ಬಹಿಷ್ಕಾರ ಹಾಕಿದ ಮಾವುತ ಕಾವಾಡಿಗಳು
ಮಧ್ಯರಾತ್ರಿ 12 ಗಂಟೆ ಸುಮಾರಿಗೆ ಮೆಖ್ಲಿಗಂಜ್ ಪೊಲೀಸ್ ಠಾಣೆ ವ್ಯಾಪ್ತಿಯ ಧಾರ್ಲಾ ಸೇತುವೆಯ ಬಳಿ ಈ ಘಟನೆ ನಡೆದಿದೆ. ಜಲ್ಪೇಶ್‍ಗೆ ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಪಿಕ್‍ಅಪ್ ವ್ಯಾನ್‍ಗೆ ವಿದ್ಯುತ್ ಪ್ರವಹಿಸಿದೆ. ವಾಹನದ ಹಿಂಭಾಗದಲ್ಲಿ ಅಳವಡಿಸಲಾಗಿದ್ದ ಡಿಜೆ ಸಿಸ್ಟಂನ ಜನರೇಟರ್‌ನ ವೈರಿಂಗ್‍ನಿಂದ ಈ ಘಟನೆ ಸಂಭವಿಸಿದೆ ಎಂದು ಮತಭಂಗ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಅಮಿತ್ ವರ್ಮಾ ಹೇಳಿದ್ದಾರೆ.
ಗಾಯಾಳುಗಳನ್ನು ತಕ್ಷಣವೇ ಚಂದ್ರಬಂಧಾ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆತರಲಾಯಿತು. ಪ್ರಾಥಮಿಕ ಚಿಕಿತ್ಸೆ ಕೊಟ್ಟ ಸ್ಥಾನಿಕ ವೈದ್ಯಾಧಿಕಾರಿಯು ಅವರನ್ನು ಜಲ್‍ಪೈಗುರಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸುವಂತೆ ಶಿಫಾರಸು ಮಾಡಿದರು. ಅದರಂತೆ ಆಸ್ಪತ್ರೆಗೆ ಕರೆತರುವ ಮಾರ್ಗದಲ್ಲಿಯೇ 10 ಮಂದಿ ಮೃತಪಟ್ಟಿದ್ದಾರೆ. ಇದನ್ನೂ ಓದಿ: ನಾಲ್ಕು ದಿನ ಗಾಳಿ, ಮಳೆಗೆ ಬೆಟ್ಟದ ಪೊದೆಯಲ್ಲಿ ಸಿಲುಕಿದ ವೃದ್ಧೆ ರಕ್ಷಣೆ
ಇದೀಗ ಘಟನೆಗೆ ಕಾರಣವಾದ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ. ಆದರೆ ಚಾಲಕ ಪರಾರಿಯಾಗಿದ್ದಾನೆ. ಎಲ್ಲಾ ಪ್ರಯಾಣಿಕರು ಸಿತಾಲ್ಕುಚಿ ಪೊಲೀಸ್ ಠಾಣಾ ವ್ಯಾಪ್ತಿಗೆ ಸೇರಿದವರಾಗಿದ್ದು, ಘಟನೆ ಕುರಿತಂತೆ ಅವರ ಕುಟುಂಬಗಳಿಗೆ ಮಾಹಿತಿ ನೀಡಲಾಗಿದೆ ಎಂದು ಅವರು ತಿಳಿಸಲಾಗಿದೆ. ಘಟನೆ ಕುರಿತಂತೆ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ ಎಂದು ತೆಳಿಸಿದ್ದಾರೆ.