ಚಿಕ್ಕಮಗಳೂರು: ಕೆರೆಯ ದಡದ ಬಳಿ ನೀರಲ್ಲಿ ಆಟವಾಡುತ್ತಿದ್ದ ಕೆರೆ ಹಾವನ್ನು ಅರ್ಧ ನುಂಗಿ ದಡದಲ್ಲೇ ಒದ್ದಾಟ ನಡೆಸಿ ಬಿದ್ದಿದ್ದ 10 ಅಡಿ ಉದ್ದದ ಕಾಳಿಂಗ ಸರ್ಪವನ್ನ ರಕ್ಷಿಸಿ ಕಾಡಿಗೆ ಬಿಟ್ಟಿರುವ ಘಟನೆ ಚಿಕ್ಕಮಗಳೂರು ಜಿಲ್ಲೆ ಕೊಪ್ಪ ತಾಲೂಕಿನ ಮಹಲ್ ಗೋಡು ಗ್ರಾಮದಲ್ಲಿ ನಡೆದಿದೆ.
ಕೊಪ್ಪ ತಾಲೂಕಿನ ಮಹಲ್ ಗೋಡು ಗ್ರಾಮದ ಕೆರೆಯ ದಡದಲ್ಲಿದ್ದ ಸುಮಾರು 10 ಅಡಿ ಕಾಳಿಂಗನನ್ನ ರಕ್ಷಿಸಿರೋ ಉರಗ ತಜ್ಞ ಹರೀಂದ್ರ ಕಾಳಿಂಗನನ್ನ ಪುನಃ ಕಾಡಿಗೆ ಬಿಟ್ಟಿದ್ದಾರೆ. ಬರೋಬ್ಬರಿ 10 ಅಡಿ ಉದ್ದದ ಹಾವನ್ನ ಕಂಡು ಸ್ಥಳಿಯರು ಆಶ್ಚರ್ಯಗೊಂಡಿದ್ದರು. ಬಳಿಕ ಅರಣ್ಯ ಇಲಾಖೆ ಅಧಿಕಾರಿಗಳ ಸಹಾಯ ಪಡೆದು ಕಾಳಿಂಗನನ್ನ ರಕ್ಷಿಸಿ ಸಮೀಪದ ಅರಣ್ಯಕ್ಕೆ ಬಿಟ್ಟಿದ್ದಾರೆ.
Advertisement
Advertisement
ಮುಂಗಾರು ಮಳೆ ಆರಂಭವಾಗುತ್ತಿದಂತೆ ಹುತ್ತ, ದೊಡ್ಡ ಮರದ ಪೊಟರೆಗಳಲ್ಲಿ ವಾಸಿಸುವ ಕಾಳಿಂಗ ಸರ್ಪಗಳು ಆಹಾರಕ್ಕಾಗಿ ನೀರಲ್ಲಿನ ಮೀನು, ಹಾವು, ಕಪ್ಪೆಗಳನ್ನ ತಿನ್ನಲು ಹೊರ ಬರುತ್ತದೆ. ಈ ವೇಳೆ ಕಾಳಿಂಗ ಸರ್ಪ ಕೆರೆ ಹಾವನ್ನು ಬೇಟೆಯಾಡಿದ್ದು ನುಂಗಲು ಯತ್ನಿಸಿದೆ. ಈ ವೇಳೆ ಇದನ್ನು ಕಂಡ ಗ್ರಾಮಸ್ಥರು ಅತಂಕಗೊಂಡು ಉರಗ ತಜ್ಞರಿಗೆ ಮಾಹಿತಿ ನೀಡಿದ್ದಾರೆ. ಕಳೆದ ಎರಡು ತಿಂಗಳಲ್ಲಿ ಕಾಫಿನಾಡಿನ ವಿವಿಧ ಭಾಗದಲ್ಲಿ 10 ಕ್ಕೂ ಹೆಚ್ಚು ಬೃಹತ್ ಕಾಳಿಂಗ ಸರ್ಪಗಳನ್ನು ರಕ್ಷಿಸಿರುವ ಸ್ಥಳೀಯ ಉರಗ ತಜ್ಞರು ಅರಣ್ಯ ಇಲಾಖೆಯ ನೇತೃತ್ವದಲ್ಲಿ ಪುನಃ ಕಾಡಿಗೆ ಬಿಟ್ಟಿದ್ದಾರೆ.