Connect with us

Latest

ಎನ್‍ಟಿಪಿಸಿ ಘಟಕದಲ್ಲಿ ಬಾಯ್ಲರ್ ಸ್ಫೋಟ: 10 ಸಾವು, 100 ಮಂದಿಗೆ ಗಾಯ

Published

on

ನವದೆಹಲಿ: 30 ವರ್ಷ ಹಳೆಯ ರಾಷ್ಟ್ರೀಯ ಶಾಖೋತ್ಪನ್ನ ವಿದ್ಯುತ್ ನಿಗಮದ(ಎನ್‍ಟಿಪಿಸಿ) ಬಾಯ್ಲರ್ ಸ್ಫೋಟಗೊಂಡ ಪರಿಣಾಮ 10 ಮಂದಿ ಮೃತಪಟ್ಟು 100ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವ ಘಟನೆ ಉತ್ತರ ಪ್ರದೇಶದ ರಾಯ್‍ಬರೇಲಿಯಲ್ಲಿ ನಡೆದಿದೆ.

ಉಚಾಹಾರ್ ಘಟಕದಲ್ಲಿ ಈ ದುರಂತ ಸಂಭವಿಸಿದ್ದು, ಬಾಯ್ಲರ್ ಪೈಪ್ ಒಡೆದು ಈ ದುರ್ಘಟನೆ ಸಂಭವಿಸಿದೆ ಎಂದು ವರದಿಗಳು ತಿಳಿಸಿವೆ.

ಹಿರಿಯ ಅಧಿಕಾರಿಯೊಬ್ಬರು ಪ್ರತಿಕ್ರಿಯಿಸಿ, ಗಾಯಗೊಂಡವರ ಪೈಕಿ ಹಲವರ ಸ್ಥಿತಿ ಗಂಭೀರವಾಗಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆಯಿದೆ. ಗಾಯಗೊಂಡವರ ಪೈಕಿ ಹಲವರ ದೇಹ ಸುಟ್ಟು ಹೋಗಿದೆ ಎಂದು ತಿಳಿಸಿದ್ದಾರೆ.

ಗಾಯಗೊಂಡವರನ್ನು ಎನ್‍ಟಿಪಿಸಿ ಕ್ಯಾಂಪಸ್ ನಲ್ಲಿರುವ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಗಂಭೀರವಾಗಿ ಗಾಯಗೊಂಡವರನ್ನು ಲಕ್ನೋ ಆಸ್ಪತ್ರೆಗೆ ದಾಖಲಿಸಲಾಗಿದೆ.

ಬಾಯ್ಲರ್ ಪೈಪ್ ಒಡೆದ ಬಳಿಕ ಘಟಕವನ್ನು ಈಗ ಮುಚ್ಚಲಾಗಿದೆ. 210 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದನೆ ಮಾಡುವ ಸಾಮರ್ಥ್ಯ ಹೊದಿರುವ 5 ಘಟಕ 1988ರಲ್ಲಿ ಆರಂಭಗೊಂಡಿತ್ತು. 500 ಮೆಗಾ ವ್ಯಾಟ್ ಸಾಮರ್ಥ್ಯದ  6ನೇ ಘಟಕ ಈ ವರ್ಷವೇ ಆರಂಭಗೊಳ್ಳಬೇಕಿತ್ತು.

ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಈ ಘಟನೆಯಲ್ಲಿ ಮೃತಪಟ್ಟ ವ್ಯಕ್ತಿಗಳ ಕುಟುಂಬಕ್ಕೆ 2 ಲಕ್ಷ ರೂ. ಪರಿಹಾರ ಧನ, ಗಾಯಗೊಂಡವರಿಗೆ 50 ಸಾವಿರ ರೂ. ಪರಿಹಾರ ನೀಡುವುದಾಗಿ ಘೋಷಿಸಿದ್ದಾರೆ.

Click to comment

Leave a Reply

Your email address will not be published. Required fields are marked *