– ರೈಲ್ವೇ ನಿಲ್ದಾಣದಲ್ಲಿ ಜನದಟ್ಟಣೆ ನಿಯಂತ್ರಣಕ್ಕೆ ಕ್ರಮ
ಮುಂಬೈ: ಮಹಾರಾಷ್ಟ್ರದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಏರಿಕೆಯಾದ ಹಿನ್ನೆಲೆ ಮುಂಬೈ ಮಹಾನಗರ ವಿಭಾಗ ಕೆಲವು ನಿರ್ಧಾರಗಳನ್ನ ತೆಗೆದುಕೊಂಡಿದೆ. ನಗರದ ಪ್ರಮುಖ ರೈಲ್ವೇ ನಿಲ್ದಾಣಗಳಲ್ಲಿ ಪ್ಲಾಟ್‍ಫಾರಂ ಟಿಕೆಟ್ ದರವನ್ನು 10 ರೂ. ಯಿಂದ 50 ರೂ.ವರೆಗೆ ಏರಿಕೆ ಮಾಡಲಾಗಿದೆ.
ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್, ದಾದರ್, ಲೋಕಮಾನ್ಯ ತಿಲಕ್ ಟರ್ಮಿನಸ್, ಥಾಣೆ, ಕಲ್ಯಾಣ್, ಪನ್ವೇಲ್ ಮತ್ತು ಭಿವಂಡಿ ನಿಲ್ದಾಣಗಳಲ್ಲಿ ಹೊಸ ದರ ಅನ್ವಯಾಗಲಿದೆ. ಜೂನ್ 15ರವರೆಗೆ ಈ ಹೊಸ ದರ ಇರಲಿದೆ ಎಂದು ಮಧ್ಯೆ ರೈಲ್ವೇಯ ಜನಸಂಪರ್ಕ ಅಧಿಕಾರಿ ಶಿವಾಜಿ ಸುತಾರ್ ಹೇಳಿದ್ದಾರೆ.
ಕೆಲ ದಿನಗಳ ಹಿಂದೆ ರೈಲ್ವೇ ಸಚಿವಾಲಯ ಸಹ ಅಲ್ಪದೂರದ ಪ್ರಯಾಣಿಕರ ನಿಯಂತ್ರಣಕ್ಕಾಗಿ ದರ ಏರಿಕೆಯ ಮೊರೆ ಹೋಗಿದೆ. ಲೋಕಲ್ ಪ್ಯಾಸೆಂಜರ್ ರೈಲುಗಳ ಅಲ್ಪದೂರದ ಟಿಕೆಟ್ ದರ ಸಹ ಹೆಚ್ಚಿಸಲಾಗಿದೆ.
ಸೋಮವಾರ 6,397 ಹೊಸ ಕೊರೊನಾ ಪ್ರಕರಣಗಳು ಮಹಾರಾಷ್ಟ್ರದಲ್ಲಿ ವರದಿಯಾಗಿದ್ದು, 78,825 ಸೋಂಕಿತರು ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಕಳೆದ 24 ಗಂಟೆಯಲ್ಲಿ 30 ಸೋಂಕಿತರು ಮಹಾಮಾರಿಗೆ ಪ್ರಾಣ ಕಳೆದುಕೊಂಡಿದ್ದು, ಇದುವರೆಗೂ 52,184 ಜನರು ಸಾವನ್ನಪ್ಪಿದ್ದಾರೆ.