ನವದೆಹಲಿ: ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ ಒಂದು ರೂಪಾಯಿ ದಂಡ ವಿಧಿಸಿರುವ ಸುಪ್ರೀಂಕೋರ್ಟ್ ಆದೇಶವನ್ನು ಗೌರವಿಸಿ ದಂಡ ಪಾವತಿಸುತ್ತೇನೆ. ಜೊತೆಗೆ ಈ ಆದೇಶವನ್ನು ಪ್ರಶ್ನಿಸಿ ಮರುಪರಿಶೀಲನಾ ಅರ್ಜಿ ಸಲ್ಲಿಸುವುದಾಗಿ ಹಿರಿಯ ವಕೀಲ ಪ್ರಶಾಂತ್ ಭೂಷಣ್ ಹೇಳಿದ್ದಾರೆ.
ಇಂದು ಸುಪ್ರೀಂಕೋರ್ಟ್ ಆದೇಶದ ಬಳಿಕ ದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ತಮ್ಮ ಮುಂದಿನ ನಿಲುವು ಸ್ಪಷ್ಟಪಡಿಸಿದರು. ನಾನು ಮಾಡಿದ ಟ್ವೀಟ್ಗಳು ಸುಪ್ರೀಂಕೋರ್ಟ್ನ್ನು ಅಗೌರವಕ್ಕೆ ಒಳಪಡಿಸುವ ಉದ್ದೇಶ ಹೊಂದಿರಲಿಲ್ಲ ಎಂದು ಮತ್ತೆ ಸಮರ್ಥಿಸಿಕೊಂಡರು.
Advertisement
Advertisement
ನ್ಯಾಯಾಲಯಗಳು ದುರ್ಬಲಗೊಂಡರೆ, ಅದು ಪ್ರಜಾಪ್ರಭುತ್ವವನ್ನು ದುರ್ಬಲಗೊಳಿಸುತ್ತದೆ ಮತ್ತು ಪ್ರತಿಯೊಬ್ಬ ನಾಗರಿಕನಿಗೂ ಹಾನಿ ಮಾಡುತ್ತದೆ. ಹೀಗಾಗಿ ಕಾನೂನು ವ್ಯವಸ್ಥೆ ಬಲಿಷ್ಠವಾಗಿರಬೇಕು. ಸುಪ್ರೀಂ ಕೋರ್ಟ್ ಗೆದ್ದಾಗಲೆಲ್ಲಾ ಪ್ರತಿಯೊಬ್ಬ ಭಾರತೀಯನೂ ಗೆಲ್ಲುತ್ತಾನೆ. ಸತ್ಯವು ಹೆಚ್ಚು ಮೇಲುಗೈ ಸಾಧಿಸಿದೆ ಎಂದು ನನಗೆ ಈಗ ವಿಶ್ವಾಸ ಮೂಡಿಸಿದೆ. ಈ ಪ್ರಕರಣದಲ್ಲಿ ವಾಕ್ ಸ್ವಾತಂತ್ರ್ಯಕ್ಕೆ ನ್ಯಾಯ ಸಿಕ್ಕಿದೆ. ಅನ್ಯಾಯದ ವಿರುದ್ಧ ಸಮಾಜದಲ್ಲಿ ಅನೇಕರು ಧ್ವನಿ ಎತ್ತಲು ಇದು ಪ್ರೇರಣೆಯಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
Advertisement
Advertisement
ಸುಪ್ರೀಂಕೋರ್ಟ್ ಮತ್ತು ನ್ಯಾಯಾಧೀಶರ ವಿರುದ್ಧ ಆಕ್ಷೇಪಾರ್ಯ ಟ್ವೀಟ್ ಹಿನ್ನೆಲೆ ನ್ಯಾಯಾಂಗ ನಿಂದನೆ ಆದೇಶ ನೀಡಿದ್ದ ಸುಪ್ರೀಂಕೋರ್ಟ್, ಇಂದು ಒಂದು ರೂಪಾಯಿ ದಂಡ ಅಥವಾ ಮೂರು ತಿಂಗಳು ಜೈಲು ಮತ್ತು ಕಲಾಪದಿಂದ ನಿರ್ಬಂಧಿಸುವ ಆದೇಶ ನೀಡಿತ್ತು. ಕೋರ್ಟ್ ಆದೇಶದ ಬಳಿಕ ಪ್ರಶಾಂತ್ ಭೂಷಣ್ ಅವರು ತಮ್ಮ ವಕೀಲ ರಾಜೀವ್ ಧವನ್ ಭೇಟಿ ಮಾಡಿ ಅವರಿಗೆ ದಂಡದ ಮೊತ್ತಕ್ಕೆ ಒಂದು ರೂಪಾಯಿ ನೀಡಿ ಟ್ವೀಟ್ ಮಾಡಿದ್ದರು. ಇದು ಕೆಲವೇ ನಿಮಿಷಗಳಲ್ಲಿ ವೈರಲ್ ಆಗಿತ್ತು.
ಟ್ವೀಟ್ನಲ್ಲಿ ಏನಿತ್ತು?
ಮೊದಲ ಟ್ವೀಟ್ ಭಾರತದಲ್ಲಿ ತುರ್ತು ಪರಿಸ್ಥಿತಿಯನ್ನು ಹೇರದೇ ಕಳೆದ 6 ವರ್ಷದಲ್ಲಿ ಪ್ರಜಾಪ್ರಭುತ್ವವನ್ನು ಯಾವ ರೀತಿ ನಾಶ ಮಾಡಲಾಗಿದೆ ಎಂಬುದನ್ನು ಇತಿಹಾಸಕಾರರು ಹಿಂದಿರುಗಿ ನೋಡಿದರೆ, ಈ ನಾಶದಲ್ಲಿ ಸುಪ್ರೀಂ ಕೋರ್ಟ್ ಪಾತ್ರವನ್ನು ನೋಡಬಹುದು. ಅದರಲ್ಲೂ ವಿಶೇಷವಾಗಿ ಕಳೆದ 4 ಜಡ್ಜ್ ಗಳ ಪಾತ್ರವನ್ನು ಸ್ಪಷ್ಟವಾಗಿ ಗಮನಿಸಬಹುದು.
ಎರಡನೇ ಟ್ವೀಟ್: ನಾಗ್ಪುರದಲ್ಲಿ ರಾಜಭವನದಲ್ಲಿ ಬಿಜೆಪಿ ನಾಯಕನಿಗೆ ಸೇರಿದ 50 ಲಕ್ಷದ ಬೈಕ್ನಲ್ಲಿ ಸುಪ್ರೀಂ ಕೋರ್ಟ್ ನ ಮುಖ್ಯ ನ್ಯಾಯಮೂರ್ತಿ ಎಸ್ಎ ಬೊಬ್ಡೆ ಮಾಸ್ಕ್ ಮತ್ತು ಹೆಲ್ಮೆಟ್ ಧರಿಸದೆ ಸವಾರಿ ಮಾಡಿದ್ದಾರೆ. ಸುಪ್ರೀಂ ಕೋರ್ಟ್ ನ ಕಾರ್ಯಕಲಾಪಕ್ಕೆ ಕೊರೊನಾ ಲಾಕ್ಡೌನ್ ಎಂದು ರಜೆ ಹಾಕಿ ದೇಶದ ನಾಗರಿಕರ ಮೂಲಭೂತ ಹಕ್ಕಾದ ನ್ಯಾಯ ಸಿಗದ ಸಮಯದಲ್ಲಿ ಬೈಕ್ ಸವಾರಿ ಮಾಡಿದ್ದಾರೆ.
ಈ ಎರಡು ಟ್ವೀಟ್ ಅಲ್ಲದೇ 2009ರಲ್ಲಿ ತೆಹಲ್ಕಾ ಮ್ಯಾಗಜಿನ್ಗೆ ಹಿಂದಿನ ಮುಖ್ಯ ನ್ಯಾಯಮೂರ್ತಿಗಳು ಭ್ರಷ್ಟರಾಗಿದ್ದರು ಎಂದು ಸಂದರ್ಶನ ನೀಡಿದ್ದ ಪ್ರಶಾಂತ್ ಭೂಷಣ್ ಹೇಳಿಕೆ ಸಂಬಂಧ ಸುಪ್ರೀಂ ಕೋರ್ಟ್ ಅವರ ವಿರುದ್ಧ ಸ್ವಯಂಪ್ರೇರಿತ ನ್ಯಾಯಾಂಗ ನಿಂದನೆ ಕೇಸ್ ದಾಖಲಿಸಿತ್ತು.