ಚಿಕ್ಕಮಗಳೂರು: ಮಹಾ ಮಳೆಗೆ ಏಕಾಏಕಿ ಮನೆಯ ಮೇಲ್ಛಾವಣಿಗೆ ಕುಸಿದಿದ್ದು, ಒಂದು ವರ್ಷದ ಮಗು ಪ್ರಾಣಾಪಾಯದಿಂದ ಪಾರಾದ ಘಟನೆ ಚಿಕ್ಕಮಗಳೂರಿನ ಅರವಿಂದ ನಗರದಲ್ಲಿ ನಡೆದಿದೆ.
ಅರವಿಂದ ನಗರದ ಕುಸುಮ ಎಂಬವರ ಒಂದು ವರ್ಷದ ಮಗು ಪ್ರಾಣಾಪಾಯದಿಂದ ಪಾರಾಗಿದೆ. ಕುಸುಮ ಅವರ ಪತಿ ಬೆಳಗ್ಗೆ 6 ಗಂಟೆಗೆ ಕೂಲಿ ಕೆಲಸಕ್ಕೆ ಹೋಗಿದ್ದರು. ಬೆಳಗ್ಗೆಯಿಂದ ಚಿಕ್ಕಮಗಳೂರಿನಲ್ಲಿ ಮಳೆ ಆಗುತ್ತಿದ್ದು, ಈ ಸಂದರ್ಭದಲ್ಲಿ ಮನೆಯ ಮೇಲ್ಛಾವಣಿ ಕುಸಿದಿದೆ.
ಮನೆಯ ಮೇಲ್ಛಾವಣಿ ಕುಸಿದು ಬಿದ್ದ ತಕ್ಷಣ ಮಲಗಿದ್ದ ಕುಸುಮ ಎಚ್ಚರಗೊಂಡು ಜೋರಾಗಿ ಕಿರುಚಿಕೊಂಡಿದ್ದಾರೆ. ಮಹಿಳೆಯ ಕಿರುಚಾಟದ ಶಬ್ಧ ಕೇಳಿ ಅಕ್ಕಪಕ್ಕದ ಮನೆಯವರು ಸ್ಥಳಕ್ಕೆ ಬಂದು ಮನೆಯ ಹಂಚುಗಳನ್ನು ತೆಗೆದು ಮಗುವನ್ನು ರಕ್ಷಿಸಿದ್ದಾರೆ.
ಮಲೆನಾಡು ಭಾಗದಲ್ಲಿ ಕಳೆದು ನಾಲ್ಕು ದಿನಗಳಿಂದ ಧಾರಾಕಾರ ಮಳೆಯಾಗುತ್ತಿದ್ದು, ಚಿಕ್ಕಮಗಳೂರು ನಗರದಲ್ಲಿ ಕಳೆದ ಎರಡು ದಿನದಿಂದ ನಿರಂತರವಾಗಿ ಮಳೆ ಆಗುತ್ತಿದೆ. ಈ ಘಟನೆ ನಡೆದ ನಂತರ ಸ್ಥಳಕ್ಕೆ ಬಾರದ ಅಧಿಕಾರಿಗಳ ವಿರುದ್ಧ ಗ್ರಾಮಸ್ಥರು ಆಕ್ರೋಶ ಹೊರಹಾಕಿದ್ದಾರೆ.