ಬಾಗಲಕೋಟೆ: ಪುಟಾಣಿ ಬಾಲಕನೊಬ್ಬ ಶಿಕ್ಷಕನ ಮುಂದೆ ಮಾತನಾಡಿದ ವಿಡಿಯೋವೊಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ ಭಾರೀ ಚರ್ಚೆಗೆ ಗ್ರಾಸವಾಗಿದೆ.
ಬಾಗಲಕೋಟೆ ಜಿಲ್ಲೆಯ ಬನಹಟ್ಟಿ ಪಟ್ಟಣದ ಬಸವೇಶ್ವರ ಖಾಸಗಿ ಪ್ರಾಥಮಿಕ ಶಾಲೆಯ ಒಂದನೇ ತರಗತಿಯ ಸ್ವರೂಪ್ ಎಂಬ ಬಾಲಕನ ವಿಡಿಯೋ ಇದಾಗಿದ್ದು, ಪುಸ್ತಕ ಹರಿದ ವಿಚಾರಕ್ಕೆ ಎಂ.ಎಸ್ ತೇಲಿ ಎಂಬ ಶಿಕ್ಷಕರು ಬೆದರಿಸಲು ಮುಂದಾಗಿದ್ದಾರೆ.
Advertisement
ವಿಡಿಯೋದಲ್ಲೇನಿದೆ?:
ಕೈಯಲ್ಲಿ ಸ್ಟೆಪ್ಲರ್ ಹಿಡಿದು ಪುಸ್ತಕ ಹರಿಯುತ್ತಿಯಾ? ಹಲ್ಲು ಕೀಳಬೇಕೇನು ಎಂದು ಶಿಕ್ಷಕ ಬೆದರಿಸಿದ್ದಾರೆ. ಈ ವೇಳೆ ಬಾಲಕ ಉತ್ತರ ಕರ್ನಾಟಕ ಶೈಲಿಯಲ್ಲಿ ತೊದಲುತ್ತಾ ಅಳು ಮಿಶ್ರಿತವಾಗಿ ಮಾತಾಡಿದ್ದು, ಎಲ್ಲರಿಗೂ ಇಷ್ಟವಾಗಿದೆ. ಇಲ್ರಿ ಇನ್ನು ಮೇಲೆ ಪುಸ್ತಕ ಹರಿಯಂಗಿಲ್ರಿ, ಚೆಂದಗಿ ಬರಿತಿನ್ರಿ, ಇನ್ನೊಮ್ಮೆ ಹರಿಯಂಗಿಲ್ರಿ ಅಂತ ಅಳುತ್ತಾ ಉತ್ತರಿಸಿದ್ದಾನೆ. ಆದರೂ ಶಿಕ್ಷಕರು ಇಲ್ಲ ನಿನ್ನ ಎರಡು ಹಲ್ಲು ಕೀಳುತ್ತೇನೆ ಎಂದು ಬೆದರಿಸಿದ್ದಾರೆ.
Advertisement
ಇದೇ ವೇಳೆ ನಿನ್ನ ಹೆಸರೇನು ಎಂದು ಕೇಳಿದಾಗ ಸ್ವರೂಪ್, ತಂದೆ ಹೆಸರು ಉಮೇಶ್, ಮನೆ ಹೆಸರು ಮೊಸಳಿ ಎಂದು ಅಳುತ್ತಲೇ ಉತ್ತರಿಸಿದ್ದಾನೆ. ಊರು ಬನಹಟ್ಟಿ, ತಾಲೂಕು ಜಮಖಂಡಿ, ಜಿಲ್ಲೆ ಬಾಗಲಕೋಟೆ ಅಂತಾನೂ ಹೇಳಿದ್ದಾನೆ. ಆದರೆ ರಾಜ್ಯ ಅಂದಾಗ ಕರ್ನಾಟಕ ಅನ್ನುವ ಬದಲು ಕರ್ನಾಟಕ ಮುಖ್ಯಮಂತ್ರಿ ಎಂದು ತಗಲಾಕಿಕೊಂಡಿದ್ದಾನೆ.
Advertisement
Advertisement
ಈ ಸಂದರ್ಭದಲ್ಲಿ ಶಿಕ್ಷಕರು ಕರ್ನಾಟಕ ಮುಖ್ಯಮಂತ್ರಿ ಯಾರು ಅಂದಾಗ ಬಾಲಕ ಸಿದ್ದರಾಮಯ್ಯ ಎಂದು ಉತ್ತರಿಸಿದ್ದಾನೆ. ಆಗ ಶಿಕ್ಷಕರು ಸಿದ್ದರಾಮಯ್ಯ ಮನೆಗೆ ಹೋಗಿದ್ದಾನೆ ಅಂತಾರೆ. ಅಲ್ಲಂದ್ರ ಮೋದಿ ಅಂತಾನೆ ಬಾಲಕ. ಶಿಕ್ಷಕರು ನರೇಂದ್ರ ಮೋದಿ ಭಾರತದ ಪ್ರಧಾನಿ ಅಂತಾರೆ. ಆದರೂ ಬಾಲಕ ಕರ್ನಾಟಕ ಮುಖ್ಯಮಂತ್ರಿ ಮೋದಿ ಎನ್ನುತ್ತಾನೆ. ಬಳಿಕ ನನಗೆ ಗೊತ್ತಿಲ್ರಿ, ಸಿದ್ದರಾಮಯ್ಯ ಗೊತ್ತಿಲ್ಲ ಎಂದಿದ್ದಾನೆ.
ಶಿಕ್ಷಕರು ಯಾಕೆ ಸಿದ್ದರಾಮಯ್ಯ ನಿಮ್ಮ ಮನೆಗೆ ಬಂದಿಲ್ಲೇನು ಅಂತ ಕೇಳಿದಾಗ ಬಾಲಕ ಹೇಳಿದ ಉತ್ತರ ಸಾಕಷ್ಟು ನಗೆಗಡಲಲ್ಲಿ ತೇಲುವಂತೆ ಮಾಡಿದೆ. ಸಿದ್ದರಾಮಯ್ಯ ನಮ್ಮ ಮನೆಗೆ ಬಂದಿದ್ದ, ಬಂದು ಊಟ ತಿಂದು ಹೋಗ್ಯಾನರಿ. ಮೋದಿನೂ ನಮ್ಮ ಮನೆಗೆ ಬಂದಿದ್ದರು. ಮೊನ್ನೆ ಜಾತ್ರಿ ಇದ್ದಾಗ ನಮ್ಮ ಮನಿಗೆ ಬಂದಿದ್ದರು. ಇಷ್ಟೇ ಅಲ್ಲದೆ ಮೊನ್ನೆ ನಾನು ಸಿದ್ದರಾಮಯ್ಯ ಮತ್ತು ಮೋದಿ ಮನೆಗೆ ಹೋಗಿದ್ದೆ. ನನಗೆ ಕೇಕ್ ಅನ್ನ(ಮಮ್ಮು) ಸಾರು, ರೊಟ್ಟಿ ಎಲ್ಲಾ ಕೊಟ್ರು ಅಂತಾನೆ. ನೀ ಏನು ಕೊಟ್ಟೆ ಅಂದಾಗ ರೊಟ್ಟಿ ಸಾರು ಮಮ್ಮು(ಅನ್ನ) ಕೊಟ್ಟೆ ಎಂದಿದ್ದಾನೆ. ನಂತರ ಇನ್ನೊಮ್ಮೆ ಹುಡುಗರನ್ನು ಬಡಿಯಂಗಿಲ್ಲ, ಇನ್ನೊಮ್ಮೆ ತಪ್ಪು ಮಾಡಂಗಿಲ್ಲ ಎಂದು ಹೇಳಿದ್ದಾನೆ.
ಬಾಲಕನ ಈ ವಿಡಿಯೋ ಈಗ ಎಲ್ಲರ ಮೊಬೈಲ್ ನಲ್ಲಿ ಹರಿದಾಡುತ್ತಿದೆ. ಆತನ ತೊದಲುನುಡಿ ಉತ್ತರ ಕರ್ನಾಟಕ ಶೈಲಿ ಮಾತುಗಳು ಸಾಕಷ್ಟು ಇಷ್ಟವಾಗಿದ್ದು, ನೋಡುಗರು ನಕ್ಕು ನಲಿಯುವಂತೆ ಮಾಡಿವೆ. ಆದರೆ ಕೆಲವರು ಶಿಕ್ಷಕನ ವರ್ತನೆ ಬಗ್ಗೆ ಖಂಡನೆ ವ್ಯಕ್ತಪಡಿಸುತ್ತಿದ್ದಾರೆ. ಬಾಲಕನಿಗೆ ಸ್ಟೆಪ್ಲರ್ ಹಿಡಿದು ಬೆದರಿಸಿದ್ದು, ಹಲ್ಲು ಕೀಳುತ್ತೇನೆ ಎಂದು ಗದರಿಸೋದು ಸರಿಯಲ್ಲ ಎನ್ನುತ್ತಿದ್ದಾರೆ. ಒಟ್ಟಿನಲ್ಲಿ ಬಾಲಕನ ವಿಡಿಯೋ ಮಾತ್ರ ಈಗ ಸಾಕಷ್ಟು ವೈರಲ್ ಆಗಿ ಮನರಂಜನೆ ನೀಡುತ್ತಿರೋದಂತು ಸತ್ಯ.
https://www.youtube.com/watch?v=jltWstnr1nk