ಮಾವಿನಹಣ್ಣು ವ್ಯಾಪಾರಿಗೆ ಕೊರೊನಾ ಸೋಂಕು ದೃಢ- ಹಾವೇರಿಯಲ್ಲಿ 3ನೇ ಪಾಸಿಟಿವ್ ಪ್ರಕರಣ

Public TV
2 Min Read
HVR CORONA

ಹಾವೇರಿ: ಗ್ರೀನ್‍ಝೋನ್‍ನಲ್ಲಿದ್ದ ಹಾವೇರಿ ಜಿಲ್ಲೆ ಮೇ4 ರಂದು ಮೊದಲ ಕೊರೊನಾ ಪಾಸಿಟಿವ್ ಕೇಸ್ ಪತ್ತೆಯಾಗುವ ಮೂಲಕ ಹಳದಿ ವಲಯಕ್ಕೆ ಸೇರಿತ್ತು. ಮರುದಿನ ಮೊದಲು ಕೊರೊನಾ ಪಾಸಿಟಿವ್ ಬಂದಿದ್ದ ರೋಗಿ ಪಿ-639 ಜೊತೆ ಸಂಪರ್ಕ ಹೊಂದಿದ್ದ ಪಿ-672ಗೂ ಕೊರೊನಾ ಸೋಂಕು ವಕ್ಕರಿಸಿತ್ತು. ಇದು ಜಿಲ್ಲೆಯ ಜನರು ಬೆಚ್ಚಿ ಬೀಳುವಂತೆ ಮಾಡಿತ್ತು. ಲಾಕ್‍ಡೌನ್‍ನಲ್ಲಿ ಸಡಿಲಿಕೆಯಾದರೂ ಎರಡು ಕೊರೊನಾ ಕೇಸ್‍ಗಳು ದೃಢಪಟ್ಟ ನಂತರ ಜನರು ಮನೆಯಿಂದ ಹೊರಬರಲು ಹಿಂಜರಿಯೋ ಸ್ಥಿತಿ ನಿರ್ಮಾಣ ಆಗಿತ್ತು.

ಮೊದಲ ಮತ್ತು 2ನೇ ಪ್ರಕರಣದ ರೋಗಿಗಳ ಜೊತೆ ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕ ಹೊಂದಿದ್ದವರ ಲ್ಯಾಬ್ ವರದಿ ನೆಗಟಿವ್ ಬಂದವು. ಇದಾದ ಮೇಲೆ ಜನರು ಮತ್ತೆ ಓಡಾಡೋಕೆ ಶುರು ಮಾಡಿದ್ದರು. ಆದರೆ ಇಂದು ಮತ್ತೆ ಜಿಲ್ಲೆಯ ಜನರಿಗೆ ಆಘಾತಕಾರಿ ಸುದ್ದಿ ಬಂದಿದ್ದು, ರೈತರ ಜಮೀನುಗಳಿಗೆ ಹೋಗಿ ಮಾವಿನ ಹಣ್ಣುಗಳನ್ನ ಖರೀದಿಸಿಕೊಂಡು ಮುಂಬೈ ಮಾರ್ಕೆಟ್‍ಗೆ ಹೋಗಿ ಮಾರಾಟ ಮಾಡಿ ಬಂದಿದ್ದ 25 ವರ್ಷದ ವಯಸ್ಸಿನ ಹಣ್ಣಿನ ವ್ಯಾಪಾರಿಗೆ ಕೊರೊನಾ ಸೋಂಕು ದೃಢಪಟ್ಟಿದೆ.

HVR a

ಇವತ್ತು ಸೋಂಕು ದೃಢಪಟ್ಟ ವ್ಯಾಪಾರಿ ಏಪ್ರಿಲ್ 23 ರಿಂದ ಮೂರು ಬಾರಿ ಮುಂಬೈನ ವಾಸಿಯಲ್ಲಿರುವ ಎಪಿಎಂಸಿ ಮಾರುಕಟ್ಟೆಗೆ ಹೋಗಿ ಮಾವಿನ ಹಣ್ಣುಗಳನ್ನ ಮಾರಾಟ ಮಾಡಿ ಬಂದಿದ್ದ. ಮುಂಬೈಗೆ ಹೋಗಿ ಬಂದಿರೋ ವಿಷಯ ತಿಳಿದ ಮೇಲೆ ಸ್ಥಳೀಯರ ಮಾಹಿತಿ ಆಧಾರಿಸಿ ಮೇ 7ರಂದು ವ್ಯಾಪಾರಿಯ ಗಂಟಲು ದ್ರವ ಸಂಗ್ರಹಿಸಿ ಬೆಂಗಳೂರು ಲ್ಯಾಬ್‍ಗೆ ಕಳಿಸಿದ್ದರು. ವ್ಯಾಪಾರಿಯ ಲ್ಯಾಬ್ ವರದಿ ಇಂದು ಬಂದಿದ್ದು, ವ್ಯಾಪಾರಿಗೆ ಕೊರೊನಾ ಸೋಂಕು ದೃಢಪಟ್ಟಿದೆ.

ಸೋಂಕಿತ ವ್ಯಾಪಾರಿ ಜಿಲ್ಲೆಯ ಶಿಗ್ಗಾಂವಿ ಮತ್ತು ಹಾನಗಲ್ ತಾಲೂಕಿನ ವಿವಿಧ ಗ್ರಾಮಗಳಿಗೆ ಹೋಗಿ ರೈತರ ತೋಟಗಳಲ್ಲಿ ಮಾವಿನ ಹಣ್ಣುಗಳನ್ನ ಖರೀದಿಸಿಕೊಂಡು ಹೋಗಿ ಮುಂಬೈನಲ್ಲಿ ಮಾರಾಟ ಮಾಡಿ ಬಂದಿದ್ದಾನೆ. ಹೀಗಾಗಿ ಸೋಂಕಿತ ವ್ಯಾಪಾರಿ ಪಿ-853 ಜೊತೆ ಪ್ರಾಥಮಿಕ ಸಂಪರ್ಕ ಹೊಂದಿದ್ದ 14 ಜನರನ್ನು ಸಾಂಸ್ಥಿಕ ಕ್ವಾರಂಟೈನ್ ಮತ್ತು ದ್ವಿತೀಯ ಸಂಪರ್ಕ ಹೊಂದಿದ್ದ 23 ಜನರನ್ನು ಹೋಂ ಕ್ವಾರಂಟೈನ್ ಮಾಡಲಾಗಿದೆ. ಸೋಂಕಿತ ವಾಸವಾಗಿದ್ದ ಗ್ರಾಮವನ್ನು ಸೀಲ್‍ಡೌನ್ ಮಾಡಲಾಗಿದೆ. ಸೋಂಕಿತ ವಾಸವಿದ್ದ ಪ್ರದೇಶದಿಂದ 7ಕಿ.ಮೀ ವ್ಯಾಪ್ತಿಯ ಪ್ರದೇಶವನ್ನು ಜಿಲ್ಲಾಡಳಿತ ಬಫರ್ ಝೋನ್ ಎಂದು ಗುರುತಿಸಿದ್ದಾರೆ. ಒಟ್ಟಿನಲ್ಲಿ ಈವರೆಗೆ ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಮೂರಕ್ಕೇರಿದೆ. ಇದು ಜನರಲ್ಲಿ ಮತ್ತಷ್ಟು ಆತಂಕವನ್ನ ಉಂಟು ಮಾಡಿದೆ.

Share This Article
Leave a Comment

Leave a Reply

Your email address will not be published. Required fields are marked *