ಮಂಡ್ಯ: ಜಿಲ್ಲೆಯಲ್ಲಿ ಅಕ್ರಮ ಗಣಿಗಾರಿಕೆ ನಿಷೇಧಕ್ಕೆ ಮತ್ತೊಂದು ಹೆಜ್ಜೆ ಮುಂದಿಟ್ಟ ಜಿಲ್ಲಾಡಳಿತಕ್ಕೆ ತಾಲೂಕು ಆಡಳಿತ ಕೂಡ ಸಾಥ್ ನೀಡಿದ್ದು, ಶ್ರೀರಂಗಪಟ್ಟಣ ತಾಲೂಕಿನಲ್ಲೂ ಅಕ್ರಮ ಗಣಿಗಾರಿಕೆಗೆ ಬ್ರೇಕ್ ಬಿದ್ದಿದೆ.
ಶ್ರೀರಂಗಪಟ್ಟಣ ತಾಲೂಕಿನ ಸುತ್ತಮುತ್ತಲ ಅಕ್ರಮ ಗಣಿಗಾರಿಕೆ ಪ್ರದೇಶದಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಶ್ರೀರಂಗಪಟ್ಟಣ ತಹಶೀಲ್ದಾರ್ ನಾಗೇಶ್ ಅವರು ನಿಷೇಧಾಜ್ಞೆ ಆದೇಶ ಹೊರಡಿಸಿದ್ದಾರೆ. ಸೆ. 09 ರಿಂದ ಅ. 08ರವರೆಗೆ ಅಂದರೆ ಒಂದು ತಿಂಗಳು ಅಕ್ರಮ ಗಣಿಗಾರಿಕೆ ನಡೆಯುವ ಪ್ರದೇಶದಲ್ಲಿ ನಿಷೇಧಾಜ್ಞೆ ಹೇರಲಾಗಿದೆ. ಕರಿಘಟ್ಟ ಅರಣ್ಯ ಪ್ರದೇಶದ ವ್ಯಾಪ್ತಿಯಲ್ಲಿ ಎಗ್ಗಿಲ್ಲದೆ ಅಕ್ರಮ ಗಣಿಗಾರಿಕೆ ನಡೆಯುತ್ತಿದ್ದು, ಈ ಅಕ್ರಮವನ್ನು ತಡೆಗಟ್ಟಲು ತಾಲೂಕು ಆಡಳಿತ ಈ ನಿರ್ಧಾರಕ್ಕೆ ಬಂದಿದೆ.
Advertisement
Advertisement
ಜಕ್ಕನಹಳ್ಳಿ, ಚನ್ನನಕೆರೆ, ಕಾಳೇನಹಳ್ಳಿ, ಗಣಂಗೂರು, ಸಿದ್ದಾಪುರ, ಮುಂಡುಗದೊರೆ, ಹಂಗರಹಳ್ಳಿ, ಗೌಡಹಳ್ಳಿ, ಟಿ.ಎಂ. ಹೊಸೂರು, ಕೋಡಿಶೆಟ್ಟಿಪುರ, ಶ್ರೀರಾಂಪುರ, ನೀಲನಕೊಪ್ಪಲು ಸೇರಿದಂತೆ ಹಲವು ಗ್ರಾಮಗಳಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.
Advertisement
ಈ ಪ್ರದೇಶಗಳಲ್ಲಿ ಹೆಚ್ಚಿನ ಅಕ್ರಮ ಗಣಿಗಾರಿಕೆ ನಡೆಯುತ್ತಿತ್ತು. ಇದರಿಂದ ಪರಿಸರ ನಾಶವಾಗುವುದರ ಜೊತೆಗೆ ಸಾರ್ವಜನಿಕರಿಗೂ ಸಾಕಷ್ಟು ತೊಂದರೆ ಆಗುತ್ತಿತ್ತು. ಅಕ್ರಮ ಗಣಿಗಾರಿಕೆಗೆ ಬೇಸತ್ತ ಜನರು ಮತ್ತು ಗಣಿ ಇಲಾಖೆ ಅಧಿಕಾರಿಗಳು ದೂರು ನೀಡಿದ್ದರು. ಆದ್ದರಿಂದ ಇಂತಹ ಅಕ್ರಮ ಗಣಿಗಾರಿಕೆ ನಡೆಯುವ ಪ್ರದೇಶಗಳಲ್ಲಿ ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ಈಗಾಗಲೇ ಪಾಂಡವಪುರ ತಾಲೂಕಿನಲ್ಲಿ ಜಿಲ್ಲಾಡಳಿತ ಅಕ್ರಮ ಗಣಿಗಾರಿಕೆ ನಿಷೇಧ ಮಾಡಿದೆ.