ಶ್ರೀನಗರದಲ್ಲಿ ಉಗ್ರರ ಅಟ್ಟಹಾಸ – ಗ್ರೆನೇಡ್ ದಾಳಿಗೆ ಓರ್ವ ಸಾವು, 20ಕ್ಕೂ ಹೆಚ್ಚು ಮಂದಿಗೆ ಗಾಯ

Public TV
2 Min Read
Srinagar 1

ಶ್ರೀನಗರ: ಕಣಿವೆ ರಾಜ್ಯ ಜಮ್ಮು ಕಾಶ್ಮೀರದಲ್ಲಿ ಉಗ್ರರು ಅಟ್ಟಹಾಸ ಮೆರೆದಿದ್ದಾರೆ. ಹಾಡಹಗಲೇ ಶ್ರೀನಗರದ ಜನನಿಬಿಡ ಮಾರುಕಟ್ಟೆ ಪ್ರದೇಶದಲ್ಲಿ ಭಯೋತ್ಪಾದಕರು ಗ್ರೆನೇಡ್ ದಾಳಿ ನಡೆಸಿದ್ದು, ಓರ್ವ ವ್ಯಕ್ತಿ ಸಾವನ್ನಪ್ಪಿದ್ದಾನೆ ಮತ್ತು ಸುಮಾರು 20ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.

Srinagar

ಇಂದು ಭಾನುವಾರವಾದ ಕಾರಣ ಮಾರುಕಟ್ಟೆಯಲ್ಲಿ ಜನ ಜಂಗುಳಿ ಇರುತ್ತದೆ. ಇದನ್ನೇ ಗುರಿಯಾಗಿಟ್ಟುಕೊಂಡು ಉಗ್ರರು ದಾಳಿ ನಡೆಸಿದ್ದಾರೆ.ಸಂಜೆ 4:20ರ ಸುಮಾರಿಗೆ ಹರಿ ಸಿಂಗ್ ಹೈ ಸ್ಟ್ರೀಟ್‍ನಲ್ಲಿ ಪೊಲೀಸರು ಮತ್ತು ಭದ್ರತಾ ಪಡೆಗಳ ನಿಯೋಜನೆಯ ಮೇಲೆ ಉಗ್ರರು ಗ್ರೆನೇಡ್ ದಾಳಿ ನಡೆಸಿದ್ದು, ಘಟನೆಯಲ್ಲಿ ಮೊಹಮ್ಮದ್ ಅಸ್ಲಾಮ್ ಮಖ್ದೂಮಿ(71) ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.

ಉಳಿದ ಗಾಯಾಳುಗಳನ್ನು ಶ್ರೀ ಮಹಾರಾಜ ಹರಿ ಸಿಂಗ್ (ಎಸ್‍ಎಂಹೆಚ್‍ಎಸ್) ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದ್ದು, ಅವರಲ್ಲಿ ಕೆಲವರ ಸ್ಥಿತಿ ಗಂಭೀರವಾಗಿದೆ ಮತ್ತು ಘಟನೆಯಲ್ಲಿ ಗಾಯಗೊಂಡವರ ಪೈಕಿ ಪೊಲೀಸರೂ ಸಹ ಇದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿ ರಾಕೇಶ್ ಬಲ್ವಾಲ್ ಹೇಳಿದ್ದಾರೆ. ಇದನ್ನೂ ಓದಿ:  ಭಾರತ ಮಹಿಳಾ ಕ್ರಿಕೆಟ್ ತಂಡಕ್ಕೆ ಅನುಷ್ಕಾ ಶರ್ಮಾ ಶುಭ ಹಾರೈಕೆ

ಇದೀಗ ಘಟನಾ ಸ್ಥಳಕ್ಕೆ ಹಿರಿಯ ಅಧಿಕಾರಿಗಳು ಸೇರಿದಂತೆ ಭದ್ರತಾ ಪಡೆಗಳು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ. ದಾಳಿಕೋರ ಉಗ್ರನಿಗಾಗಿ ಭದ್ರತಾ ಪಡೆಗಳು ಕಾರ್ಯಾಚರಣೆ ಆರಂಭಿಸಿವೆ. ಅತಿ ಶೀಘ್ರದಲ್ಲೇ ಉಗ್ರನನ್ನು ಪತ್ತೆ ಹಚ್ಚಿ ಬಂಧಿಸುವುದಾಗಿ ಭದ್ರತಾ ಪಡೆಗಳು ತಿಳಿಸಿವೆ. ಈವರೆಗೆ ಯಾವುದೇ ಉಗ್ರ ಸಂಘಟನೆಯೂ ಈ ಘಟನೆಯ ಹೊಣೆಯನ್ನು ಹೊತ್ತುಕೊಂಡಿಲ್ಲ ಎಂದು ತಿಳಿದುಬಂದಿದೆ.

ಸದ್ಯ ಈ ಕುರಿತಂತೆ ಟ್ವೀಟ್ ಮಾಡಿರುವ ಎಂದು ಸಚಿವೆ ಮೆಹಬೂಬಾ ಮುಫ್ತಿ ಅವರು, ಈ ಭೀಕರ ದಾಳಿಯನ್ನು ಖಂಡಿಸುತ್ತೇನೆ. ಜಮ್ಮು ಮತ್ತು ಕಾಶ್ಮೀರದ ಜನರು ತಮ್ಮ ಪ್ರಾಣವನ್ನು ಕಳೆದುಕೊಳ್ಳುತ್ತಿದ್ದಾರೆ. ದುಃಖಕರ ವಿಚಾರವೆಂದರೆ ಭಾರತ ಅಥವಾ ಪಾಕಿಸ್ತಾನವು ಈ ಸಂಘರ್ಷವನ್ನು ಕೊನೆಗೊಳಿಸಲು ಮತ್ತು ಈ ರಕ್ತಪಾತವನ್ನು ನಿಲ್ಲಿಸಲು ಏನನ್ನೂ ಮಾಡುತ್ತಿಲ್ಲ. ದುಃಖದಲ್ಲಿರುವ ಕುಟುಂಬಸ್ಥರಿಗೆ ಮತ್ತು ಅವರ ಪ್ರೀತಿಪಾತ್ರರಿಗಾಗಿ ಪ್ರಾರ್ಥಿಸುತ್ತೇನೆ ಎಂದಿದ್ದಾರೆ. ಇದನ್ನೂ ಓದಿ: ಮಹಿಳಾ ವಿಶ್ವಕಪ್ 2022- ಪಾಕ್ ವಿರುದ್ಧ ಭಾರತಕ್ಕೆ ಭರ್ಜರಿ ಜಯ

Share This Article
Leave a Comment

Leave a Reply

Your email address will not be published. Required fields are marked *