ನವದೆಹಲಿ: ಈಶಾನ್ಯ ದೆಹಲಿಯ (Delhi) ಕಬೀರ್ ನಗರದಲ್ಲಿ ಮೂವರು ಸ್ನೇಹಿತರ ಮೇಲೆ ಅಪ್ರಾಪ್ತರು ನಡೆಸಿದ ಗುಂಡಿನ ದಾಳಿಯಲ್ಲಿ (Delhi Shootout) ಓರ್ವ ವ್ಯಕ್ತಿ ಸಾವನ್ನಪ್ಪಿದ್ದಾನೆ ಎಂದು ಪೊಲೀಸರು (Police) ತಿಳಿಸಿದ್ದಾರೆ.
ನದೀಮ್ ಮತ್ತು ಆತನ ಇಬ್ಬರು ಸ್ನೇಹಿತರು ಊಟಕ್ಕೆ ಹೊರಟಿದ್ದರು ಈ ವೇಳೆ ಮೂವರು ಅಪ್ರಾಪ್ತರು ಬೈಕ್‌ನಲ್ಲಿ ಬಂದು 13 ಸುತ್ತು ಗುಂಡಿನ ದಾಳಿ ನಡೆಸಿದ್ದಾರೆ. ದಾಳಿಯಲ್ಲಿ ನದೀಮ್ ಮತ್ತು ಆತನ ಸ್ನೇಹಿತರು ಗಂಭೀರ ಗಾಯಗೊಂಡಿದ್ದರು. ಈ ವೇಳೆ ಸ್ಥಳೀಯರು ಸ್ಥಳಕ್ಕೆ ಆಗಮಿಸಿ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ನದೀಮ್ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾನೆ. ಇನ್ನಿಬ್ಬರು ಸ್ನೇಹಿತರ ಸ್ಥಿತಿ ಗಂಭೀರವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಮೂವರು ಅಪ್ರಾಪ್ತರನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತ ಮೂವರು ಅಪ್ರಾಪ್ತರಲ್ಲಿ ಒಬ್ಬ ನದೀಮ್‌ನಿಂದ ಸಾಲ ಪಡೆದಿದ್ದ. ಮರುಪಾವತಿಗೆ ಒತ್ತಡ ಹೇರಿದ್ದಕ್ಕೆ ಈ ಕೃತ್ಯ ಎಸಗಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಬಂಧಿತರು ದೆಹಲಿಯ ಜ್ಯೋತಿ ನಗರದಲ್ಲಿ ನಡೆದ ಗುಂಡಿನ ದಾಳಿಗೂ ಸಂಬಂಧ ಹೊಂದಿದ್ದಾರೆ. ಬಂಧಿತರಿಂದ ಮೂರು ಕಂಟ್ರಿ ಪಿಸ್ತೂಲ್‌ಗಳೊಂದಿಗೆ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.