ಲಕ್ನೋ: ಉತ್ತರ ಪ್ರದೇಶದ ಸಹರಾನ್ಪುರ ಜಿಲ್ಲೆಯ ಚಂದ್ರಪುರ ಗ್ರಾಮದಲ್ಲಿ ಜಾತಿ ಘರ್ಷಣೆ ನಡೆದು ಓರ್ವ ವ್ಯಕ್ತಿ ಸಾವನ್ನಪ್ಪಿದ್ದು, 12 ಮಂದಿ ಗಾಯಗೊಂಡಿರುವ ಹಿನ್ನೆಲೆಯಲ್ಲಿ ಸ್ಥಳಕ್ಕೆ 4 ಹಿರಿಯ ಅಧಿಕಾರಿಗಳನ್ನ ಕಳಿಸಲಾಗಿದ್ದು, ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.
ವರದಿಗಳ ಪ್ರಕಾರ ಬಿಎಸ್‍ಪಿ ನಾಯಕಿ ಮಾಯಾವತಿಯವರ ಕಾರ್ಯಕ್ರಮಕ್ಕೂ ಮುನ್ನ ದಲಿತರ ಗುಂಪೊಂದು ಶಬ್ಬಿರ್‍ಪುರದ ಕೆಲ ರಜಪೂತರ ಮನೆಗಳ ಮೇಲೆ ಕಲ್ಲು ತೂರಿದ ಕಾರಣ ಎರಡು ಸಮುದಾಯಗಳ ನಡುವೆ ಘರ್ಷಣೆ ಉಂಟಾಗಿದೆ. ಈ ಸಂದರ್ಭದಲ್ಲಿ ಹಿರಿಯ ಅಧಿಕಾರಿಗಳು ಮಧ್ಯಪ್ರವೇಶಿಸಿ ಪರಿಸ್ಥಿತಿ ನಿಯಂತ್ರಿಸಿದ್ದಾರೆ. ಆದ್ರೆ ಅನಂತರ ಆ ಕಾರ್ಯಕ್ರಮದಿಂದ ಹಳ್ಳಿಗೆ ಹಿಂದಿರುಗುತ್ತಿದ್ದ ದಲಿತರಿದ್ದ ಟ್ರಕ್ ಮೇಲೆ ಈ ಪ್ರದೇಶದ ಠಕೂರ್‍ಗಳು ದಾಳಿ ಮಾಡಿದ್ದಾರೆ ಎನ್ನಲಾಗಿದ್ದು, ಘರ್ಷಣೆಯಲ್ಲಿ ಓರ್ವ ದಲಿತ ವ್ಯಕ್ತಿ ಮೃತಪಟ್ಟು ಇಬ್ಬರಿಗೆ ಗಂಭಿರವಾಗಿ ಗಾಯವಾಗಿದೆ.
ಮಂಗಳವಾರ ನಡೆದ ಹಿಂಸಾಚಾರಕ್ಕೆ ಮಾಜಿ ಮುಖ್ಯಮಂತ್ರಿ ಮತ್ತು ಬಹುಜನ ಸಮಾಜವಾದಿ ಪಕ್ಷದ ನಾಯಕಿ ಮಾಯಾವತಿಯ ಭೇಟಿಯೇ ಕಾರಣವೆಂದು ಉತ್ತರಪ್ರದೇಶ ಸರ್ಕಾರ ಆರೋಪಿಸಿದೆ. ಇದೇ ತಿಂಗಳಲ್ಲಿ ಶಬ್ಬಿರ್‍ಪುರದಲ್ಲಿ ದಲಿತರು ಹಾಕೂ ಠಾಕೂರ್‍ಗಳ ಮಧ್ಯೆ ಘರ್ಷಣೆಯಾಗಿ ದಲಿತ ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದ ಹಿನ್ನೆಲೆಯಲ್ಲಿ ಗ್ರಾಮಕ್ಕೆ ಮಾಯಾವತಿ ಭೇಟಿ ನೀಡಿದ್ದರು.
ಭಾನುವಾರದಂದು ಉತ್ತರಪ್ರದೇಶದ ಭೀಮ್ ಆರ್ಮಿ ಎಂಬ ಗುಂಪಿನ ನೇತೃತ್ವದಲ್ಲಿ ಸಾವಿರಾರು ದಲಿತ ಬಲಪಂತೀಯರು ದೆಹಲಿಯ ಜಂತರ್ ಮಂತರ್ ಬಳಿ ಸೇರಿ ಸಹರಾನ್‍ಪುರದಲ್ಲಿನ ಜಾತಿ ಆಧಾರಿತ ಹಿಂಸಾಚಾರದ ವಿರುದ್ಧ ಪ್ರತಿಭಟಿಸಿದ್ದರು. ದೆಹಲಿ ಪೊಲೀಸರು ಅನುಮತಿ ನಿರಾಕರಿಸಿದ್ದರೂ ಕೂಡ ಸುಮಾರು 5 ಸಾವಿರ ಮಂದಿ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು.