ವಿರೋಧ ಪಕ್ಷದ ನಾಲ್ವರು ಶಾಸಕರು ಸೇರಿ, 57 ಕೌನ್ಸಿಲರ್‌ಗಳು ಬಿಜೆಪಿ ಸೇರ್ಪಡೆ

Public TV
2 Min Read
bjp maharashtra

ಮುಂಬೈ: ನಿನ್ನೆಯಷ್ಟೇ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಎನ್‍ಸಿಪಿಯ ಮೂವರು ಹಾಗೂ ಕಾಂಗ್ರೆಸ್ ಒಬ್ಬ ಶಾಸಕ ಸೇರಿದಂತೆ 57 ಕೌನ್ಸಿಲರ್ ಗಳು ಇಂದು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರ ಉಪಸ್ಥಿತಿಯಲ್ಲಿ ಬಿಜೆಪಿ ಸೇರ್ಪಡೆಯಾಗಿದ್ದಾರೆ.

ನಿನ್ನೆಯಷ್ಟೇ ಎನ್‍ಸಿಪಿಯ ಮೂವರು ಹಾಗೂ ಕಾಂಗ್ರೆಸ್ಸಿನ ಓರ್ವ ಶಾಸಕರು ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು. ಇಂದು ಈ ಶಾಸಕರೂ ಸೇರಿದಂತೆ ನವ ಮುಂಬೈ ನಗರಸಭೆಯ 57 ಕೌನ್ಸಿಲರ್ ಗಳು ಹಾಗೂ ಎನ್‍ಸಿಪಿಯ ಕಾರ್ಯಕರ್ತರು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಹಾಗೂ ಜಲಸಂಪನ್ಮೂಲ ಸಚಿವ ಗಿರೀಶ್ ಮಹಾಜನ್ ಅವರ ನೇತೃತ್ವದಲ್ಲಿ ಬಿಜೆಪಿ ಸೇರ್ಪಡೆಯಾಗಿದ್ದಾರೆ.

ಇತ್ತೀಚೆಗಷ್ಟೇ ಎನ್‍ಸಿಪಿ ಮುಂಬೈ ವಿಭಾಗದ ಮುಖ್ಯಸ್ಥರೊಬ್ಬರು ಶಿವಸೇನೆ ಪಕ್ಷಕ್ಕೆ ಸೇರಿದ್ದರು. ಇದೀಗ ಮೂವರು ಎನ್‍ಸಿಪಿ ಶಾಸಕರು ಬಿಜೆಪಿ ಸೇರಿದ್ದಾರೆ. ಎನ್‍ಸಿಪಿ ಶಾಸಕರಾದ ಶಿವೇಂದ್ರಸಿನ್ಹಾರಾಜೆ ಭೋಸ್ಲೆ(ಸತಾರಾ), ವೈಭವ್ ಪಿಚದ್(ಅಕೋಲೆ), ಸಂದೀಪ್ ನಾಯ್ಕ್(ಐರೋಲಿ) ಹಾಗೂ ಕಾಂಗ್ರೆಸ್ ಶಾಸಕ ಕಲಿದಾಸ್ ಕೋಲಂಬ್ಕರ್(ನೈಗಾನ್) ರಾಜೀನಾಮೆಗಳನ್ನು ಪ್ರತ್ಯೇಕವಾಗಿ ಸ್ಪೀಕರ್ ಹರಿಭಾವ್ ಬಗಾಡೆ ಅವರಿಗೆ ನಿನ್ನೆಯಷ್ಟೇ ಸಲ್ಲಿಸಿದ್ದರು.

ಮುಂಬೈನಿಂದ ಏಳು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದ ಕೊಲಂಬ್ಕರ್ ಅವರನ್ನು ಶಿವೇಂದ್ರಸಿನ್ಹಾರಾಜೆ ಭೋಸ್ಲೆ ಅವರು 2014ರ ವಿಧಾನಸಭೆ ಚುನಾವಣೆಯಲ್ಲಿ 47,813 ಮತಗಳ ಅಂತರದಲ್ಲಿ ಸೋಲಿಸಿದ್ದರು.

ಎನ್‍ಸಿಪಿಯ ಮಾಜಿ ಸಚಿವ ಮಧುಕರ್ ಪಿಚಾದ್ ಅವರ ಪುತ್ರ, ಅಹ್ಮದ್‍ನಗರ ಜಿಲ್ಲೆಯ ಅಕೋಲೆ ಕ್ಷೇತ್ರದ ವೈಭವ್ ಪಿಚಾದ್ ಅವರ ವಿಧಾನಸಭಾ ಕ್ಷೇತ್ರವು ಕಾಂಗ್ರೆಸ್‍ನ ನೂತನ ರಾಜ್ಯಾಧ್ಯಕ್ಷ ಬಾಳಾಸಾಹೇಬ್ ಥೋರತ್ ಅವರ ಕ್ಷೇತ್ರದ ಪಕ್ಕದಲ್ಲೇ ಇದ್ದು, ಇವರನ್ನು ಅಲ್ಲಿಯ ಅಭ್ಯರ್ಥಿಯನ್ನಾಗಿ ಘೋಷಿಸಿದರೆ ಸುತ್ತಲಿನ ಕ್ಷೇತ್ರಗಳನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳಬಹುದು ಎಂದು ಬಿಜೆಪಿ ಲೆಕ್ಕಾಚಾರ ಹಾಕಿದೆ.

ncp bjp 1

ಮಹಾರಾಷ್ಟ್ರದ ಒಟ್ಟು 288 ವಿಧಾನಸಭಾ ಕ್ಷೇತ್ರಗಳ ಪೈಕಿ 220 ಸ್ಥಾನಗಳಲ್ಲಿ ಜಯಗಳಿಸಲು ಬಿಜೆಪಿ ಸಿದ್ಧತೆ ನಡೆಸುತ್ತಿದೆ. ಇದರ ಭಾಗವಾಗಿ ವಿರೋಧ ಪಕ್ಷಗಳ ಶಾಸಕರು ಬಿಜೆಪಿ ಸೇರ್ಪಡೆಯಾಗುತ್ತಿದ್ದಾರೆ.

ಇತ್ತೀಚೆಗೆ ಎನ್‍ಸಿಪಿ ಮುಂಬೈ ವಿಭಾಗದ ಮುಖ್ಯಸ್ಥ ಸಚಿನ್ ಅಹಿರ್ ಅವರು ಎನ್‍ಸಿಪಿ ಬಿಟ್ಟು ಶಿವಸೇನೆ ಸೇರಿದ್ದರು. ಅಲ್ಲದೆ, ಮೇ ತಿಂಗಳಲ್ಲಿ ಎನ್‍ಸಿಪಿ ನಾಯಕ ಹಾಗೂ ಮಾಜಿ ಸಚಿವ ಜಯ್‍ದತ್ ಕ್ಷೀರ್ ಸಾಗರ್ ಅವರು ಸಹ ಶಿವಸೇನೆ ಸೇರಿದ್ದರು.

ಭಾನುವಾರ ಮಾಧ್ಯಮಗಳ ಜೊತೆ ಮಾತನಾಡಿದ್ದ ಮಹಾರಾಷ್ಟ್ರ ಜಲಸಂಪನ್ಮೂಲ ಸಚಿವ ಗಿರೀಶ್, ಕಾಂಗ್ರೆಸ್ ಮತ್ತು ಎನ್‍ಸಿಪಿ 50 ಮಂದಿ ಶಾಸಕರು ನಮ್ಮ ಸಂಪರ್ಕದಲ್ಲಿದ್ದು, ಪಕ್ಷ ಬದಲಾಯಿಸುವ ಇಂಗಿತವನ್ನು ವ್ಯಕ್ತಪಡಿಸಿದ್ದಾರೆ ಎಂದು ತಿಳಿಸಿದ್ದರು.

Share This Article
Leave a Comment

Leave a Reply

Your email address will not be published. Required fields are marked *