– ತಡರಾತ್ರಿ 1.25 ಲಕ್ಷ ಕ್ಯೂಸೆಕ್ ನೀರು ಬಿಡುವ ಸಾಧ್ಯತೆ
ಬಳ್ಳಾರಿ: ತುಂಗಭದ್ರಾ ಜಲಾಶಯಕ್ಕೆ ಪೂಜೆ ಸಲ್ಲಿಸಿ ಶನಿವಾರ ಸಂಜೆ ಅಣೆಕಟ್ಟೆನಿಂದ ನದಿಗೆ 25 ಸಾವಿರ ಕ್ಯೂಸೆಕ್ ನೀರನ್ನು ಬಿಡುಗಡೆ ಮಾಡಲಾಗಿದ್ದು, ತಡರಾತ್ರಿ ಇಲ್ಲವೇ ಭಾನುವಾರ ಬೆಳಗ್ಗೆ 1.25 ಲಕ್ಷ ಕ್ಯೂಸೆಕ್ ನೀರು ಬಿಡುವ ಸಾಧ್ಯತೆ ಇದೆ.
ತುಂಗಭದ್ರಾ ಮಂಡಳಿ ಕಾರ್ಯದರ್ಶಿ ನಾಗಮೋಹನ್ ಅವರು ಡ್ಯಾಂಗೆ ಪೂಜೆ ಸಲ್ಲಿಸಿ, ನದಿಗೆ ಬಿಡುವುಕ್ಕೆ ಚಾಲನೆ ನೀಡಿದರು. ಜಲಾಶಯದ 10 ಕ್ರಸ್ಟ್ ಗೇಟ್‍ಗಳನ್ನು 1.5 ಅಡಿ ಎತ್ತರದಲ್ಲಿ ತೆರೆದು ಮೊದಲ ಹಂತದಲ್ಲಿ 25 ಸಾವಿರ ಕ್ಯೂಸೆಕ್ ನೀರನ್ನು ನದಿಗೆ ಹರಿಸಲಾಗಿದೆ.
Advertisement
ಈ ಕುರಿತು ಮಾಹಿತಿ ನೀಡಿದ ನಾಗಮೋಹನ್ ಅವರು, ತುಂಗಭದ್ರಾ ಜಲಾಶಯಕ್ಕೆ ಭಾರೀ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ. ಒಂದೇ ಬಾರಿಗೆ ಅಧಿಕ ನೀರನ್ನು ಬಿಟ್ಟರೆ ಪ್ರಾಣ, ಆಸ್ತಿ ಹಾನಿಯಾಗುವ ಸಂಭವವಿದೆ. ಹೀಗಾಗಿ ಪ್ರವಾಹ ಹಾಗೂ ಜನ-ಜಾನುವಾರುಗಳ ಸಮಸ್ಯೆಗಳ ಬಗ್ಗೆ ಗಮನದಲ್ಲಿಟ್ಟುಕೊಂಡು ಹಂತಹಂತವಾಗಿ ಅಧಿಕ ನೀರು ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ. ಈ ನಿಟ್ಟಿನಲ್ಲಿ ಮೊದಲಿಗೆ 25 ಸಾವಿರ ಕ್ಯೂಸೆಕ್ ಬಿಡಲಾಗುತ್ತಿದೆ ಎಂದು ತಿಳಿಸಿದರು.
Advertisement
Advertisement
ಪ್ರವಾಹ ಮನ್ಸೂಚನೆ:
ತುಂಗಭದ್ರಾ ಜಲಾಶಯದಲ್ಲಿ ಶನಿವಾರ ಬೆಳಿಗ್ಗೆ 8 ಗಂಟೆಗೆ ಜಲಾಶಯದ ಮಟ್ಟ 1626.08 ಅಡಿಗಳಷ್ಟು, ಸಾಮರ್ಥ್ಯ 76.377 ಟಿಎಂಸಿ, ಒಳಹರಿವು 1,84,012 ಕ್ಯೂಸೆಕ್ ಹಾಗೂ ಹೊರಹರಿವು 2,522 ಕ್ಯೂಸೆಕ್ ಇತ್ತು. ಅಣೆಕಟ್ಟೆಯ ಜಲಾನಯನ ಪ್ರದೇಶದಲ್ಲಿ ಅತಿ ಹೆಚ್ಚು ಮಳೆಯಾಗುತ್ತಿದೆ. ಹೀಗಾಗಿ ಕೇಂದ್ರ ಜಲ ಆಯೋಗ ನೀಡಿರುವ ಒಳಹರಿವಿನ ಗೇಜ್‍ನ ಪ್ರಮಾಣದಂತೆ ಹರಳಹಳ್ಳಿ ಗೇಜ್‍ನಿಂದ 1,69,512 ಕ್ಯೂಸೆಕ್ ಮತ್ತು ಮರೋಳು ಗೇಜ್‍ನಿಂದ 56,504 ಕ್ಯೂಸೆಕ್ ಸೇರಿದಂತೆ ಒಟ್ಟಾರೆ 2,26,016 ಕ್ಯೂಸೆಕ್ ಒಳಹರಿವು ಇದೆ ಎಂದು ಮಾಹಿತಿ ನೀಡಿದರು.
Advertisement
ತುಂಗಭದ್ರಾ ಜಲಾಶಯಕ್ಕೆ ಭಾರೀ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ. ಹೀಗಾಗಿ ಹೊರಹರಿವಿನ ಪ್ರಮಾಣ ಇನ್ನೂ ಹೆಚ್ಚಾಗುವ ಸಾಧ್ಯತೆ ಇರುವುದರಿಂದ, ತುಂಗಭದ್ರಾ ನದಿ ಪಾತ್ರದ ಗ್ರಾಮ, ಪಟ್ಟಣ ಹಾಗೂ ನಗರಗಳ ಜನರು ಅಗತ್ಯ ವಸ್ತು ಹಾಗೂ ಜಾನುವಾರುಗಳೊಂದಿಗೆ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರವಾಗಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ.
ಕೊಪ್ಪಳ ಸಂಸದ ಸಂಗಣ್ಣ ಕರಡಿ ಅವರು ತುಂಗಭದ್ರಾ ಜಲಾಶಯಕ್ಕೆ ಬಾಗೀನ ಅರ್ಪಿಸಿ ಮಾತನಾಡಿ, ಈ ವರ್ಷ ತುಂಗಭದ್ರಾ ಜಲಾಶಯ ತುಂಬುತ್ತದೆಯೋ ಇಲ್ಲವೋ ಎಂಬ ಆತಂಕ ಎದುರಾಗಿತ್ತು. ಜಲಾಶಯ ತುಂಬಿರುವುದು ಅತ್ಯಂತ ಸಂತಸ ತಂದಿದೆ. ಇದರಿಂದ ಮೂರು ಜಿಲ್ಲೆಗಳ ಕೃಷಿ ಚಟುವಟಿಕೆಗಳು ಚುರುಕುಗೊಳ್ಳಲಿವೆ ಎಂದು ಹೇಳಿದರು.
ತುಂಗಭದ್ರಾ ಜಲಾಶಯದಿಂದ ಶನಿವಾರ ತಡರಾತ್ರಿ ಅಥವಾ ಭಾನುವಾರ ಬೆಳಗ್ಗೆ 1.25ಲಕ್ಷ ಕ್ಯೂಸೆಕ್ ನೀರನ್ನು ನದಿಗೆ ಹರಿಬಿಡುವ ಸಾಧ್ಯತೆ ಇದೆ. ಇದರಿಂದ ಹೊಸಪೇಟೆ, ಕಂಪ್ಲ್ಲಿ, ಕುರುಗೋಡು ಮತ್ತು ಸಿರುಗುಪ್ಪ ತಾಲೂಕುಗಳು ಸೇರಿದಂತೆ ವಿವಿಧೆಡೆ ನದಿ ತೀರ ಬರುವ ಗ್ರಾಮಗಳಲ್ಲಿ ಪ್ರವಾಹ ಉಂಟಾಗುವ ಸಾಧ್ಯತೆ ಇದೆ. ಅದನ್ನು ಸಮರ್ಥವಾಗಿ ಎದುರಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತವು ಅಗತ್ಯ ಸಿದ್ಧತೆಗಳನ್ನು ಈಗಾಗಲೇ ಮಾಡಿಕೊಂಡಿದೆ. ನದಿ ಪಾತ್ರದಲ್ಲಿರುವ ಜನರು ತಮ್ಮ ಜಾನುವಾರುಗಳೊಂದಿಗೆ ಸುರಕ್ಷಿತ ಸ್ಥಳಾಂತರವಾಗಬೇಕು ಎಂದು ಜಿಲ್ಲಾಧಿಕಾರಿ ನಕುಲ್ ಕೋರಿಕೊಂಡಿದ್ದಾರೆ.
ಕ್ಯೂಸೆಕ್ ಟಿಎಂಸಿ ಎಂದರೆ ಎಷ್ಟು?
ಕ್ಯೂಸೆಕ್ ಎಂಬುದು cubic foot per second ಹೃಸ್ವರೂಪ. ಪ್ರತಿ ಸೆಕೆಂಡಿಗೆ ಒಂದು ಘನ ಅಡಿ ನೀರು ಹರಿದರೆ ಅದು ಒಂದು ಕ್ಯೂಸೆಕ್ ನೀರು ಎಂದು ಕರೆಯಲ್ಪಡುತ್ತದೆ. ಒಂದು ಘನ ಅಡಿ ನೀರನ್ನು ಲೀಟರುಗಳಿಗೆ ಪರಿವರ್ತಿಸಿದರೆ ಸುಮಾರು 28.317 ಲೀಟರುಗಳಾಗುತ್ತವೆ. 11,524 ಕ್ಯೂಸೆಕ್ ನೀರು 24 ಗಂಟೆಯ ಕಾಲ ನಿರಂತರ ಹರಿದರೆ ಒಂದು ಟಿಎಂಸಿ ಎಂದು ಕರೆಯಲಾಗುತ್ತದೆ. 10 ಸಾವಿರ ಕ್ಯೂಸೆಕ್ ನೀರು 24 ಗಂಟೆ ನಿರಂತರ ಹರಿದರೆ 0.864 ಟಿಎಂಸಿ ಅಡಿ ಆಗುತ್ತದೆ. 35.87 ಅಡಿ ಅಳದಷ್ಟು ನೀರನ್ನು ಒಂದು ಚದರ ಮೈಲಿ ಪ್ರದೇಶದಲ್ಲಿ ಸಂಗ್ರಹಿಸಿದರೆ ಒಂದು ಟಿಎಂಸಿ ಅಡಿ ಆಗುತ್ತದೆ.