– ಬಳ್ಳಾರಿ – ಗಂಗಾವತಿ ಸಂಪರ್ಕ ಕಡಿತ
ಬಳ್ಳಾರಿ: ತುಂಗಭದ್ರಾ ಜಲಾಶಯಕ್ಕೆ (Tungabhadra Dam) ಒಳ ಹರಿವು ಹೆಚ್ಚಳವಾಗಿದ್ದರಿಂದ ಜಲಾಶಯದಿಂದ ನದಿಗೆ 1,17,057 ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗಿದೆ.
ತುಂಗಭದ್ರಾ ನದಿ ಪಾತ್ರದಲ್ಲಿ ಪ್ರವಾಹದ ಭೀತಿ ಎದುರಾಗಿದೆ. ಸದ್ಯ ತುಂಗಭದ್ರಾ ಜಲಾಶಯಕ್ಕೆ 1,15,722 ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಅಪಾರ ಪ್ರಮಾಣದ ನೀರು ಹರಿದು ಬರ್ತಿರೋದ್ರಿಂದ ಜಲಾಶಯದಿಂದ ನದಿಗೆ 1,17,057 ಕ್ಯೂಸೆಕ್ ನೀರು ರಿಲೀಸ್ ಮಾಡಲಾಗಿದೆ.
ಲಕ್ಷಕ್ಕೂ ಅಧಿಕ ಕ್ಯೂಸೆಕ್ ನೀರು ರಿಲೀಸ್ ಮಾಡಿರುವುದರಿಂದ ಬಳ್ಳಾರಿ-ಗಂಗಾವತಿ ಸಂಪರ್ಕ ಕಲ್ಪಿಸುವ ಕಂಪ್ಲಿ ಸೇತುವೆ ಮುಳುಗಡೆಯಾಗಿದ್ದು, ಬಳ್ಳಾರಿ-ಗಂಗಾವತಿ ಸಂಪರ್ಕ ಕಡಿತಗೊಂಡಿದೆ. ಮತ್ತೊಂದೆಡೆ ಕಂಪ್ಲಿ ಪಟ್ಟಣದ ನದಿ ತೀರದ ಮೀನುಗಾರರ ಮನೆಗಳಿಗೆ ನೀರು ನುಗ್ಗುವ ಭೀತಿ ಎದುರಾಗಿದೆ. ಮುಂಜಾಗ್ರತಾ ಕ್ರಮವಾಗಿ ಎರಡೂ ಬದಿಯಲ್ಲಿ ಬ್ಯಾರಿಕೇಡ್ ಹಾಕಿ ಪೊಲೀಸರ ನಿಯೋಜನೆ ಮಾಡಲಾಗಿದ್ದು, ನದಿ ಪಾತ್ರದ ಜನ, ಜಾನುವಾರು ನದಿ ತೀರಕ್ಕೆ ತೆರಳದಂತೆ ಟಿಬಿ ಬೋರ್ಡ್ ಎಚ್ಚರಿಕೆ ನೀಡಿದೆ.