ಚೆನ್ನೈ: ಭಾರತ ತಂಡದ ನಾಯಕ, ರನ್ ಮಷಿನ್ ವಿರಾಟ್ ಕೊಹ್ಲಿ ನೂತನ ದಾಖಲೆಯತ್ತ ತಮ್ಮ ಚಿತ್ತ ನೆಟ್ಟಿದ್ದಾರೆ. ನಾಳೆಯಿಂದ ಬಹುನಿರೀಕ್ಷಿತ ಭಾರತ ಹಾಗೂ ಇಂಗ್ಲೆಂಡ್ ನಡುವಿನ ಟೆಸ್ಟ್ ಸರಣಿ ಆರಂಭವಾಗಲಿದ್ದು ಈ ಸರಣಿಯಲ್ಲಿ ಒಂದು ಶತಕ ಹೊಡೆದರೆ ವಿಶ್ವದಾಖಲೆಯನ್ನು ಬರೆಯುವ ಮೂಲಕ ಮತ್ತೆ ಕಿಂಗ್ ಕೊಹ್ಲಿ ಮಿಂಚಲಿದ್ದಾರೆ.
ಈಗಾಗಲೇ 41 ಶತಕ ಹೊಡೆಯುವ ಮೂಲಕ ನಾಯಕನಾಗಿ ಅತೀ ಹೆಚ್ಚು ಶತಕ ಗಳಿಸುವ ಪಟ್ಟಿಯಲ್ಲಿ ಜಂಟಿ ಅಗ್ರಸ್ಥಾನದಲ್ಲಿರುವ ಕೊಹ್ಲಿ ಇನ್ನು ಒಂದು ಶತಕ ಬಾರಿಸಿದರೆ ನಾಯಕನಾಗಿ 42 ಶತಕ ಗಳಿಸುವ ಮೂಲಕ ವಿಶ್ವದಾಖಲೆ ಬರೆಯಲಿದ್ದಾರೆ. ಪ್ರಸ್ತುತ 41 ಶತಕ ಗಳಿಸಿ ಆಸ್ಟ್ರೇಲಿಯಾದ ಮಾಜಿ ನಾಯಕ ರಿಕಿ ಪಾಂಟಿಂಗ್ ಜೊತೆಗೆ ಜಂಟಿ ಅಗ್ರಸ್ಥಾನ ಹಂಚಿಕೊಂಡಿದ್ದಾರೆ. ಈ ಪಟ್ಟಿಯಲ್ಲಿ ನಾಯಕನಾಗಿ 33 ಶತಕ ಬಾರಿಸಿರುವ ದ.ಆಫ್ರಿಕಾದ ಮಾಜಿ ನಾಯಕ ಗ್ರೇಮ್ ಸ್ಮಿತ್ 2ನೇ ಸ್ಥಾನದಲ್ಲಿದ್ದಾರೆ.
ಅಂತಾರಾಷ್ಟ್ರೀಯ ಕ್ರಿಕೆಟ್‍ನಲ್ಲಿ ಕೊಹ್ಲಿ ಒಟ್ಟು 70 ಶತಕ ಬಾರಿಸಿ ಶತಕ ಹೊಡೆದ ಆಟಗಾರರ ಪಟ್ಟಿಯಲ್ಲಿ 3ನೇ ಸ್ಥಾನದಲ್ಲಿದ್ದು, 100 ಶತಕ ಬಾರಿಸಿರುವ ಸಚಿನ್ ತೆಂಡುಲ್ಕರ್ ಮೊದಲ ಸ್ಥಾನದಲ್ಲಿದ್ದಾರೆ. ನಂತರದ ಸ್ಥಾನ ರಿಕಿ ಪಾಟಿಂಗ್ ಹೆಸರಿನಲ್ಲಿದೆ.
ಅಂಕಿ ಅಂಶಗಳ ಪ್ರಕಾರ ಕೊಹ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‍ನಲ್ಲಿ ಶತಕ ಬಾರಿಸಿ 14 ತಿಂಗಳು ಕಳೆದಿದೆ. ಇವೆಲ್ಲವುಗಳನ್ನು ಗಮನಿಸಿರುವ ಕಿಂಗ್ ಕೊಹ್ಲಿ ನಾಳೆಯಿಂದ ಆರಂಭವಾಗಲಿರುವ ಭಾರತ ಹಾಗೂ ಇಂಗ್ಲೆಂಡ್ ನಡುವಿನ ಟೆಸ್ಟ್ ಕ್ರಿಕೆಟ್‍ನಲ್ಲಿ ತಮ್ಮ ಲಯವನ್ನು ಕಂಡುಕೊಂಡು ನೂತನ ಕ್ರಿಕೆಟ್ ಋತುವನ್ನು ಅವಿಸ್ಮರಣೀಯವಾಗಿಸಲು ತುದಿಗಾಲಲ್ಲಿ ನಿಂತಿದ್ದಾರೆ.