ಮಂಗಳೂರು: ಕೋವಿಡ್ ನ ಈ ಸಂಧಿಗ್ದ ಪರಿಸ್ಥಿತಿಯಲ್ಲಿ ವಾರಿಯರ್ ಗಳಾಗಿ ಸೇವೆ ನೀಡುವುದು ಸುಲಭದ ಮಾತಲ್ಲ. ಕೋವಿಡ್‍ನಿಂದ ಮೃತಪಟ್ಟವರ ಮೃತದೇಹಗಳನ್ನು ಮುಟ್ಟಲು ಹೆದರುವ ಹಾಗೂ ಅಂತ್ಯ ಸಂಸ್ಕಾರ ನಡೆಸಲು ಹಿಂಜರಿಯುತ್ತಿರುವ ಬಗ್ಗೆ ಸುದ್ದಿಗಳು ನಮ್ಮ ನಡುವೆ ಹರಿದಾಡುತ್ತಿದೆ. ಈ ಎಲ್ಲದರ ಮಧ್ಯೆ ಹ್ಯುಮಾನಿಟೇರಿಯಂ ರಿಲೀಫ್ ಸೊಸೈಟಿ(ಎಚ್‍ಆರ್‍ಎಸ್) ಯ ದಕ್ಷಿಣ ಕನ್ನಡದ ಜಿಲ್ಲೆಯ ಮಹಿಳಾ ವಿಭಾಗದ ಕಾರ್ಯಕರ್ತೆಯರು ಕೋವಿಡ್ ನಿಂದ ಮೃತಪಟ್ಟ ಮಹಿಳೆಯರ ಅಂತ್ಯಕ್ರಿಯೆಯನ್ನು ಸದ್ದಿಲ್ಲದೇ ನಡೆಸುತ್ತಿದ್ದಾರೆ.
Advertisement
ಕಳೆದ ಒಂದು ವಾರಗಳಲ್ಲಿ ಮಂಗಳೂರಿನ ವಿವಿಧ ಆಸ್ಪತ್ರೆಗಳಲ್ಲಿ ಕೋವಿಡ್ ಹಾಗೂ ಇತರೆ ಸಮಸ್ಯೆಯಿಂದ ಮೃತಪಟ್ಟ 9 ಮಹಿಳೆಯರ ಅಂತ್ಯಕ್ರಿಯೆಯ ಕರ್ಮಗಳನ್ನು ನಡೆಸುವ ಮೂಲಕ ಸೇವೆ ಸಲ್ಲಿಸುತ್ತಿದ್ದಾರೆ. ಹ್ಯುಮಾನಿಟೇರಿಯಂ ರಿಲೀಫ್ ಸೊಸೈಟಿ(ಎಚ್‍ಆರ್‍ಎಸ್) ಯ ಮಹಿಳಾ ವಿಭಾಗದ ಕಾರ್ಯಕರ್ತೆಯರು ಕಳೆದ ಒಂದು ವಾರದಲ್ಲಿ 9 ಮೃತ ದೇಹಗಳ ಅಂತ್ಯಕ್ರಿಯೆಯನ್ನು ನಡೆಸಿದ್ದು, ಅದರಲ್ಲಿ 5 ಕೊರೊನಾ ರೋಗದಿಂದ ಮೃತಪಟ್ಟ ಮಹಿಳೆಯರಾಗಿದ್ದಾರೆ.
Advertisement
Advertisement
ಪಿಪಿಇ ಕಿಟ್ ಧರಿಸಿ ನಡೆಸುತ್ತಿರುವ ಈ ಸೇವೆಗೆ ಎಚ್‍ಆರ್‍ಎಸ್ ನ ದಕ್ಷಿಣ ಕನ್ನಡ ಜಿಲ್ಲಾ ಸಂಯೋಜಕಿ ಸುಮಯ್ಯ ಹಮೀದುಲ್ಲಾಹ್ ನೇತೃತ್ವ ವಹಿಸಿದ್ದಾರೆ. ಕಾರ್ಯಕರ್ತೆಯರಾದ ರಹ್ಮತ್ ಮನ್ಸೂರ್, ಶಂಶಾದ್ ಕುದ್ರೋಳಿ, ಶಹನಾಜ್ ಬೆಂಗರೆ, ಅಬಿದಾ ಕುದ್ರೋಳಿ, ಸಲೀಮಾ ಪಾಣೆಮಂಗಳೂರು, ಆಮಿನಾ ಕಾರಾಜೆ, ಫರ್ಝಾನ ಪಾಣೆಮಂಗಳೂರು, ಆರಿಫ ಬೋಳಂಗಡಿ, ಝೊಹರಾ ಬೋಳಂಗಡಿ, ನೂರುನ್ನೀಸಾ, ಮರ್ಯಮ್ ಶಹೀರ, ಹಫ್ಸಾ ಕೃಷ್ಣಾಪುರ, ಯಾಸ್ಮಿನ್ ಕೃಷ್ಣಾಪುರ ಸಹಕಾರ ನೀಡುತ್ತಿದ್ದಾರೆ.