– ಆರಂಭದಲ್ಲಿ 30 ಬಳಿಕ 15 ಸಾವಿರಕ್ಕೆ ವ್ಯವಹಾರ ಕುದುರಿಸಿದ್ರು
– ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ಆರೋಪಿಗಳ ಬಂಧನ
ಮುಂಬೈ: ನಾಲ್ವರು ಸೇರಿ ಒಂದು ವರ್ಷದ ಹೆಣ್ಣು ಮಗುವನ್ನು ಅಪಹರಿಸಿ, ದಂಪತಿಗೆ 15 ಸಾವಿರ ರೂ.ಗೆ ಮಾರಾಟ ಮಾಡಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ.
ಮಹಾರಾಷ್ಟ್ರದ ಚಾರ್ಪೋಕ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಮಾಹಿತಿ ನೀಡಿದ ಕೇವಲ 2 ಗಂಟೆಯಲ್ಲಿ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಕಾಣೆಯಾಗಿರುವ ಕುರಿತು ಮಗುವಿನ ತಾಯಿ ಸುನಿತಾ ಗೌರವ್ ದೂರು ನೀಡಿದ್ದು, ಗೌರವ್ ಹಾಗೂ ಅವರ ಕುಟುಂಬದವರು ಭೂಮಿ ಪಾರ್ಕ್ ಸೊಸೈಟಿ ಫುಟ್‍ಪಾತ್‍ನಲ್ಲಿ ಮಲಗಿದ್ದಾಗ ಘಟನೆ ಸಂಭವಿಸಿದೆ.
Advertisement
Advertisement
ಪ್ರಕರಣ ಬೇಧಿಸಿದ್ದು ಹೇಗೆ?
ಬೆಳಗ್ಗಿನ ಜಾವ ಸುಮಾರು 3ಗಂಟೆ ಹೊತ್ತಿಗೆ ಸುನಿತಾ ಗೌರವ್ ಅವರಿಗೆ ಎಚ್ಚರವಾಗಿದ್ದು, ಈ ವೇಳೆ ಮಗು ಕಾಣೆಯಾಗಿರುವುದನ್ನು ಗಮನಿಸಿದ್ದಾರೆ. ಬೆಳಗ್ಗೆ 11ಗಂಟೆ ಹೊತ್ತಿಗೆ ಅವರು ಆರ್ಪೋಕ್ ಪೊಲೀಸ್ ಠಾಣೆಗೆ ತೆರಳಿ ಘಟನೆ ಕುರಿತು ವಿವರಿಸಿದ್ದಾರೆ. ತಕ್ಷಣವೇ ಪೊಲೀಸರು ಕಾರ್ಯಪ್ರವೃತ್ತರಾಗಿದ್ದು, ಆ ಪ್ರದೇಶದ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿದ್ದಾರೆ.
Advertisement
Advertisement
ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿ ಆರೋಪಿಗಳನ್ನು ಪತ್ತೆ ಹಚ್ಚಲು ಮೂರು ತಂಡಗಳನ್ನು ರಚಿಸಿದ್ದು, ಈ ವೇಳೆ ರಶ್ಮಿ ನಾಯ್ಕ್ ಅಲಿಯಾಸ್ ರಶ್ಮಿ ಪವಾರ್ ಹಾಗೂ ರಾಜು ಪವಾರ್ ಇಬ್ಬರು ಆರೋಪಿಗಳನ್ನು ಗುರುತಿಸಲಾಗಿದೆ. ಬಳಿಕ ಆರೋಪಿಗಳ ಮೊಬೈಲ್ ನಂಬರ್‍ಗಳನ್ನು ಸಂಗ್ರಹಿಸಿ, ಅವರ ಕಾಲ್ ರೆಕಾರ್ಡ್ ಹಾಗೂ ಲೊಕೇಶನ್ ಪರಿಶೀಲಿಸಿದ್ದಾರೆ. ಟ್ರೇಸ್ ಮಾಡಿ ಆರೋಪಿಗಳನ್ನು ಬಂಧಿಸಿದ್ದಾರೆ. ಬಳಿಕ ವಿಚಾರಣೆ ನಡೆಸಲಾಗಿದ್ದು, ಈ ವೇಳೆ ಆರೋಪಿಗಳು ಬಾಲಕಿಯನ್ನು ಅಪಹರಿಸಿ ಮಾರಾಟ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ. ಮಗುವನ್ನು ಕೊಂಡ ದಂಪತಿ ಖಾರ್‍ನಲ್ಲಿ ಬ್ಯೂಟಿ ಪಾರ್ಲರ್ ನಡೆಸುತ್ತಿದ್ದಾರೆ ಎಂದು ತಿಳಿಸಿದ್ದಾರೆ.
15 ಸಾವಿರಕ್ಕೆ ಮಗು ಮಾರಾಟ
ಪೊಲೀಸರು ಬ್ಯೂಟಿ ಪಾರ್ಲರ್‍ಗೆ ತೆರಳಿ ಸಚಿನ್ ಯೆಳ್ವೆ ಹಾಗೂ ಸುಪ್ರಿಯಾ ಯೆಳ್ವೆ ದಂಪತಿಯನ್ನು ಬಂಧಿಸಿದ್ದಾರೆ. ಸುಪ್ರಿಯಾ ಗರ್ಭಿಣಿಯಾಗಲು ಸಾಧ್ಯವಾಗದ ಕಾರಣ ಅವರು ರಶ್ಮಿಯನ್ನು ಸಂಪರ್ಕಿಸಿದರು. ಅಲ್ಲದೆ ಆರಂಭದಲ್ಲಿ ರಶ್ಮಿ 30 ಸಾವಿರ ರೂ. ಡಿಮ್ಯಾಂಡ್ ಮಾಡಿದ್ದಾಳೆ. ಬಳಿಕ 15 ಸಾವಿರ ರೂ.ಗೆ ವ್ಯವಹಾರ ಕುದುರಿಸಿದ್ದಾರೆ.
ಘಟನೆ ಬಗ್ಗೆ ಝೋನ್-11ರ ಡಿಸಿಪಿ ವಿಶಾಲ್ ಠಾಕೋರ್ ಈ ಕುರಿತು ಮಾಹಿತಿ ನೀಡಿದ್ದು, ನಾವು ಮಗುವನ್ನು ರಕ್ಷಿಸಿದ್ದೇವೆ. ಅಲ್ಲದೆ ನಾಲ್ವರು ಆರೋಪಿಗಳನ್ನು ಬಂಧಿಸಿದ್ದೇವೆ. ಈ ಹಿಂದೆ ಆರೋಪಿಗಳು ಇತರ ಮಕ್ಕಳನ್ನು ಕದ್ದಿದ್ದಾರೆಯೇ ಎಂಬ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ವಿವರಿಸಿದ್ದಾರೆ.