– ಇದು ಬೇಲಿಯೇ ಎದ್ದು ಹೊಲ ಮೇಯ್ದ ಕಥೆ
– ಶನಿವಾರ ಪ್ರಶ್ನೆ ಪತ್ರಿಕೆ ಲೀಕ್
ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗದ ಕಚೇರಿಯಿಂದಲೇ ಪ್ರಥಮ ದರ್ಜೆ ಸಹಾಯಕ ಪರೀಕ್ಷೆಗಳ(ಎಫ್‌ಡಿಎ) ಪ್ರಶ್ನೆ ಪತ್ರಿಕೆ ಸೋರಿಕೆಯಾದ ವಿಚಾರ ಸಿಸಿಬಿಯ ಪ್ರಾಥಮಿಕ ತನಿಖೆಯ ವೇಳೆ ದೃಢಪಟ್ಟಿದೆ.
ಇಂದು ಎಫ್‌ಡಿಎ ಪರೀಕ್ಷೆ ನಡೆಯಬೇಕಿತ್ತು. ಆದರೆ ಪರೀಕ್ಷೆ ನಡೆಯುವ ಮುನ್ನವೆ ಪ್ರಶ್ನೆ ಪತ್ರಿಕೆ ಸೋರಿಕೆಯಾದ ಖಚಿತ ಮಾಹಿತಿ ಲಭ್ಯವಾದ ಹಿನ್ನೆಲೆಯಲ್ಲಿ ಸರ್ಕಾರ ಪರೀಕ್ಷೆಯನ್ನು ಮುಂದೂಡಿದೆ. ಸಿಸಿಬಿ ಪ್ರಕರಣದ ಸಂಬಂಧ 6 ಮಂದಿಯನ್ನು ಬಂಧಿಸಿದೆ.
Advertisement
Advertisement
ಸದ್ಯಕ್ಕೆ 6 ಮಂದಿ ಬಂಧನಕ್ಕೆ ಒಳಗಾಗಿದ್ದು ಹಲವರು ಪರಾರಿಯಾಗಿದ್ದಾರೆ. ರಾಚಪ್ಪ, ಚಂದ್ರು ಬಂಧಿತ ಪ್ರಮುಖ ಆರೋಪಿಗಳು. ಬಂಧಿತರಿಂದ 24 ಲಕ್ಷ ರೂ. ನಗದು, 3 ವಾಹನಗಳನ್ನು ಸಿಸಿಬಿ ಪೊಲೀಸರು ಜಪ್ತಿ ಮಾಡಿದ್ದಾರೆ.
Advertisement
Advertisement
ಕೆಪಿಎಸ್‍ಸಿಯಲ್ಲಿ ಕೆಲಸ ಮಾಡುತ್ತಿದ್ದ ಹಿರಿಯ ಅಧಿಕಾರಿಯಿಂದ ಪ್ರಶ್ನೆ ಪತ್ರಿಕೆ ಬಹಿರಂಗವಾಗಿತ್ತು. ಈ ಅಧಿಕಾರಿಗೆ ಕಮರ್ಷಿಯಲ್ ಟ್ಯಾಕ್ಸ್ ಇನ್ಸ್‌ಪೆಕ್ಟರ್ ಚಂದ್ರು ಸಾಥ್ ನೀಡಿದ್ದ. ಶನಿವಾರ ಸಂಜೆ ಪ್ರಶ್ನೆಪತ್ರಿಕೆಯನ್ನು ಉಲ್ಲಾಳದಲ್ಲಿರುವ ಫ್ಲ್ಯಾಟ್‌ಗೆ ತೆಗೆದುಕೊಂಡು ಹೋಗಿದ್ದ. ಇನ್ಸ್‌ಪೆಕ್ಟರ್ ಚಂದ್ರು ಪ್ರಶ್ನೆಪತ್ರಿಕೆಯನ್ನು ರಾಜ್ಯದ ವಿವಿಧೆಡೆ ಇರುವ ಮಧ್ಯವರ್ತಿಗಳಿಗೆ ಹಂಚಿಕೆ ಮಾಡಲು ಸಂಚು ರೂಪಿಸಿದ್ದ. ಪ್ರಾಥಮಿಕ ತನಿಖೆಯ ವೇಳೆ ಕೆಪಿಎಸ್‍ಸಿ ಅಧಿಕಾರಿ ಒಂದು ಪೇಪರ್‌ಗೆ 10 ಲಕ್ಷ ರೂ. ಡೀಲ್ ಮಾಡಿದ್ದ ವಿಚಾರ ಬೆಳಕಿಗೆ ಬಂದಿದೆ.
ಈ ಬಗ್ಗೆ ಮಾಹಿತಿ ನೀಡಿದ್ದ ಸಿಸಿಬಿಯ ಜಂಟಿ ಕಮಿಷನರ್ ಸಂದೀಪ್ ಪಾಟೀಲ್, ಕೆಪಿಎಸ್‌ಸಿ ನಡೆಸುವ ಎಫ್‌ಡಿಎ ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆಯಾದ ಬಗ್ಗೆ ಖಚಿತ ಮಾಹಿತಿ ಬಂದಿತ್ತು. ವಿಶೇಷ ತಂಡವೊಂದನ್ನು ರಚಿಸಿ ಕಾರ್ಯಾಚರಣೆ ನಡೆಸಿ, ಆರೋಪಿಗಳನ್ನು ಬಂಧಿಸಲಾಗಿದೆ. ಪ್ರಶ್ನೆಪತ್ರಿಕೆ ಹಂಚಲು ಬಳಕೆ ಮಾಡುತ್ತಿದ್ದ ಮೂರು ವಾಹನಗಳನ್ನೂ ಜಪ್ತಿ ಮಾಡಲಾಗಿದೆ. ಸೋರಿಕೆ ಎಲ್ಲಿಂದ ಆಯಿತು ಎಂಬುದು ಇನ್ನಷ್ಟೇ ತಿಳಿಯಬೇಕಿದೆ ಎಂದು ಹೇಳಿದ್ದರು.