– ಪೈಪೋಟಿಗೆ ಬಿದ್ದು ಫ್ಯಾನ್ಸಿ ನಂಬರ್ ಖರೀದಿಸಿದ ಮಾಲೀಕರು
ಬೆಂಗಳೂರು: ವ್ಯಕ್ತಿಯೊಬ್ಬರು ‘0001ʼ ಫ್ಯಾನ್ಸಿ ಸಂಖ್ಯೆಯ ನಂಬರನ್ನು ಬರೋಬ್ಬರಿ 10.75 ಲಕ್ಷ ರೂ.ಗೆ ಬಿಡ್ ಮಾಡಿ ಖರೀದಿಸಿದ್ದಾರೆ.
ಶಾಂತಿನಗರದಲ್ಲಿನ ಸಾರಿಗೆ ಇಲಾಖೆಯ ಕೇಂದ್ರ ಕಚೇರಿಯಲ್ಲಿ ಕೋರಮಂಗಲ ಪ್ರಾದೇಶಿಕ ಸಾರಿಗೆ ಕಚೇರಿ ವ್ಯಾಪ್ತಿಯ ಲಘು ಮೋಟಾರು ವಾಹನಗಳಿಗೆ ಪ್ರಾರಂಭಿಸಿರುವ ‘ಕೆಎ-01 ಎಂವಿʼ ಮುಂಗಡ ಶ್ರೇಣಿಯ ಫ್ಯಾನ್ಸಿ ನಂಬರ್‌ಗಳ ಹರಾಜು ನಡೆಯಿತು.
Advertisement
ಈ ಹರಾಜಿನಲ್ಲಿ ಕಾರು ಮಾಲೀಕರು ಪೈಪೋಟಿಗೆ ಬಿದ್ದು ತಮ್ಮ ಅದೃಷ್ಟದ ಫ್ಯಾನ್ಸಿ ನಂಬರ್‌ಗಳನ್ನು ಖರೀದಿ ಮಾಡಿದ್ದಾರೆ.
Advertisement
Advertisement
ನಗರ ಗುಮಾಲ್ ಮುಸ್ತಾಪ ಎಂಬವರು ತಮ್ಮ ಹೊಸ ಬೆಂಜ್ ಕಾರಿಗೆ 0001 ಸಂಖ್ಯೆಯನ್ನು 10.75 ಲಕ್ಷ ರೂ.ಗೆ ಬಿಡ್ ಮಾಡಿ ಖರೀದಿಸಿದ್ದಾರೆ. ಸಾರಿಗೆ ಇಲಾಖೆಯ ಇತಿಹಾಸದಲ್ಲಿ ಇಷ್ಟೊಂದು ದುಬಾರಿ ಬಿಡ್‌ಗೆ ಒಂದು ನಂಬರ್ ಹರಾಜು ಆಗಿರುವುದು ಇದೇ ಮೊದಲು.
Advertisement
ಒಟ್ಟು 50 ಫ್ಯಾನ್ಸಿ ನಂಬರ್‌ಗಳ ಪೈಕಿ 15 ಸಂಖ್ಯೆಗಳನ್ನು ಸಾರಿಗೆ ಇಲಾಖೆ ಬಹಿರಂಗ ಹರಾಜಿಗೆ ಇರಿಸಿತ್ತು. ನಿಗದಿತ ಶುಲ್ಕದಿಂದ 11.25 ಲಕ್ಷ ರೂ. ಮತ್ತು ಹರಾಜಿನಿಂದ 18.30 ಲಕ್ಷ ರೂ. ಸೇರಿ ಒಟ್ಟು 29.55 ಲಕ್ಷ ರೂ. ಆದಾಯ ಬಂದಿದೆ ಎಂದು ಅಪರ ಸಾರಿಗೆ ಆಯುಕ್ತ ಎನ್ ನರೇಂದ್ರ ಹೋಳ್ಕರ್ ತಿಳಿಸಿದ್ದಾರೆ.
ಪ್ರಕ್ರಿಯೆ ಹೇಗೆ?
ಸಾಧಾರಣವಾಗಿ ಸಿನಿಮಾ ಕಲಾವಿದರು, ರಾಜಕಾರಣಿಗಳು, ರಿಯಲ್ ಎಸ್ಟೇಟ್ ಉದ್ಯಮಿಗಳು ಫ್ಯಾನ್ಸಿ ನಂಬರ್ ಹೆಚ್ಚು ಖರೀದಿ ಮಾಡುತ್ತಾರೆ. ಕರ್ನಾಟಕ ಸಾರಿಗೆ ಇಲಾಖೆ 2015 ರಿಂದ 0001 ರಿಂದ 9999 ವರೆಗಿನ ಸಂಖ್ಯೆಯನ್ನು ಹರಾಜು ಹಾಕುತ್ತಿದೆ. ತಮ್ಮ ಇಷ್ಟವಾದ ಸಂಖ್ಯೆ ಬೇಕಾದಲ್ಲಿ ಮರುಪಾವತಿಸಲಾಗದ 20 ಸಾವಿರ ರೂ. ಠೇವಣಿ ಇಡಬೇಕಾಗುತ್ತದೆ. ಅಷ್ಟೇ ಅಲ್ಲದೇ ಮುಂಗಡವಾಗಿ 75 ಸಾವಿರ ರೂ. ಹಣವನ್ನು ಪಾವತಿಸಬೇಕಾಗುತ್ತದೆ. ಒಂದು ವೇಳೆ ಆ ಸಂಖ್ಯೆಗೆ ಹಲವು ಮಾಲೀಕರು ಅರ್ಜಿ ಹಾಕಿದರೆ ಬಹಿರಂಗ ಹರಾಜು ಹಾಕಿ ಮಾರಾಟ ಮಾಡಲಾಗುತ್ತದೆ.
ಸಾರಿಗೆ ಇಲಾಖೆ ಆನ್‌ಲೈನ್ ಮೂಲಕ ಫ್ಯಾನ್ಸಿ ನಂಬರ್ ಹರಾಜು ಹಾಕಲು ಮುಂದಾಗಿದ್ದರೂ ಈ ಪ್ರಸ್ತಾಪ ಇನ್ನೂ ಕಾರ್ಯಗತವಾಗಿಲ್ಲ. ಈಗಾಗಲೇ ಆಂಧ್ರ ಪ್ರದೇಶ, ಹರ್ಯಾಣ, ಪಂಜಾಬ್ ಸರ್ಕಾರ ಈಗಾಗಲೇ ಆನ್‌ಲೈನ್ ಮೂಲಕ ಫ್ಯಾನ್ಸಿ ನಂಬರ್‌ಗಳನ್ನು ಹರಾಜು ಹಾಕುತ್ತಿದೆ.
ಯಾವ ಸಂಖ್ಯೆಗೆ ಎಷ್ಟು ಹಣ?
0001 ಸಂಖ್ಯೆ 10.75 ಲಕ್ಷ ರೂ.
9999 ಸಂಖ್ಯೆ 4.15 ಲಕ್ಷ ರೂ.
0009 ಸಂಖ್ಯೆ 3.75 ಲಕ್ಷ ರೂ.
0999 ಸಂಖ್ಯೆ 2.05 ಲಕ್ಷ ರೂ.
0555 ಸಂಖ್ಯೆ 1.16 ಲಕ್ಷ ರೂ.
0011 ಸಂಖ್ಯೆ 85 ಸಾವಿರ ರೂ.
0005, 5555, 1989, 1111, 3333, 0003, 1459, 0777, 0099ಗೆ ತಲಾ 76 ಸಾವಿರ ರೂ.