ಬೆಂಗಳೂರು: ಹ್ಯಾಕರ್ ಶ್ರೀಕೃಷ್ಣ ಅಲಿಯಾಸ್ ಶ್ರೀಕಿಯಿಂದ ಕೋಟ್ಯಂತರ ಮೌಲ್ಯದ ಬಿಟ್ ಕಾಯಿನ್ ಅನ್ನು ಸಿಸಿಬಿ ಪೊಲೀಸರು ಜಪ್ತಿ ಮಾಡಿದ್ದಾರೆ.
ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತನಾಗಿರುವ ಶ್ರೀಕಿ ಸಿಸಿಬಿ ವಿಚಾರಣೆಯ ವೇಳೆ ಸ್ಫೋಟಕ ವಿಚಾರಗಳನ್ನು ಬಾಯ್ಬಿಟ್ಟಿದ್ದಾನೆ. ವಿದೇಶಿ ಆ್ಯಪ್ ಸೇರಿದಂತೆ ಸರ್ಕಾರಿ ಆ್ಯಪ್ ಸಹ ಶ್ರೀಕಿ ಕ್ಯಾಕ್ ಮಾಡ್ತಿದ್ದನು.
ಪ್ರಕರಣ ಸಂಬಂಧ ಸಿಸಿಬಿ ಪೊಲೀಸರು ತನಿಖೆ ನಡೆಸಿದಾಗ ಪೋಕರ್ ಗೇಮ್ ಸೈಟ್, ಬಿಟ್ ಕಾಯಿನ್, ವೈಎಫ್‍ಐ, ಇಥೆರಿಯಂ ಖಾತೆಗಳು ಹೀಗೆ ಹಲವು ವೆಬ್ ಸೈಟ್ ಗಳ ಹ್ಯಾಕ್ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದನು. ಇದೀಗ ಸಿಸಿಬಿ ಪೊಲೀಸರು ಆತನ ಬಳಿಯಿಂದ ಸುಮಾರು 9 ಕೋಟಿ ಮೌಲ್ಯದ 31 ಬಿಟ್ ಕಾಯಿನ್ ವಶಕ್ಕೆ ಪಡೆದಿದ್ದಾರೆ.
ಈತ ತನ್ನ ಸಹಚರರಾದ ಸುನೀಷ್ ಹೆಗ್ಡೆ, ಸುಜಯ್, ಹೇಮಂತ್, ರಾಬಿನ್ ಖಂಡೇಲ್ವಾಲ್ ಮೂಲಕವೂ ಹ್ಯಾಕ್ ಮಾಡುತ್ತಿದ್ದ. ಬಳಿಕ ಬಿಟ್ ಕಾಯಿನ್ ಟ್ರೇಡರ್ಸ್ ಗೆ ಮಾರಾಟ ಮಾಡುತ್ತಿದ್ದರು. ಇದರಿಂದ ಬಂದ ಹಣ ಹಾಗೂ ಹವಾಲ ಹಣ ಪಡೆದು ವಿದೇಶದಿಂದ ಗಾಂಜಾ ತರಿಸಿಕೊಂಡು ಐಷಾರಾಮಿ ಜೀವನ ನಡೆಸುತ್ತಿದ್ದರು.
ದೇಶ ವಿದೇಶಗಳ ಪೋಕರ್ ಗೇಮ್ ವೆಬ್ ಗಳನ್ನ ಹ್ಯಾಕ್ ಮಾಡಿ ಡೇಟಾ ಕಳವು ಮಾಡುತ್ತಿದ್ದ. ಸಿಸಿಬಿ ತನಿಖೆಯಿಂದ ಶ್ರೀಕೃಷ್ಣ ಹ್ಯಾಕಿಂಗ್ ಜಾಲ ಕಂಪ್ಲೀಟ್ ಬಯಲಾಗಿದೆ. 3 ಬಿಟ್ ಕಾಯಿನ್ ಎಕ್ಸ್ ಚೇಂಜ್, 10 ಪೋಕರ್ ವೆಬ್ ಸೈಟ್, 4 ಹ್ಯಾಕಿಂಗ್ ವೆಬ್ ಸೈಟ್, 3 ಮಲ್ವಾರ್ಸ್ ಎಕ್ಸ್‍ಪ್ಲೋಟೇಡ್ ಹ್ಯಾಕ್ ಮಾಡಿರುವುದು ಬೆಳಕಿಗೆ ಬಂದಿದೆ. ವೆಬ್ ಸೈಟ್ ಹ್ಯಾಕಿಂಗ್ ಬಗ್ಗೆ ಇಂಟರ್ ಪೋಲ್ ಮೂಲಕ ಸಂಬಂಧಪಟ್ಟ ಕಂಪನಿಗಳಿಗೆ ಮಾಹಿತಿ ನೀಡಲು ಸಿಸಿಬಿ ಸಿದ್ಧತೆ ನಡೆಸುತ್ತಿದೆ.