ಬೆಂಗಳೂರು: ಚಿತ್ರ ಮಂದಿರಗಳಲ್ಲಿ ಶೇ.100ರಷ್ಟು ಸೀಟ್ ಭರ್ತಿಗೆ ಸರ್ಕಾರ ಅನುಮತಿ ನೀಡಿದ್ದು, ಚಿತ್ರಮಂದಿರಗಳಲ್ಲಿ ಕೊರೊನಾ ನಿಯಮಗಳನ್ನು ಕಟ್ಟುನಿಟಾಗಿ ಪಾಲಿಸಬೇಕು. ಪ್ರೇಕ್ಷಕರು ಸಹ ಇದಕ್ಕೆ ಸಹಕರಿಸಬೇಕು ಎಂದು ನಟ ಶಿವರಾಜ್ ಕುಮಾರ್ ಕರೆ ನೀಡಿದ್ದಾರೆ.
ಆರೋಗ್ಯ ಸಚಿವ ಸುಧಾಕರ್ ಜೊತೆ ನಡೆದ ಸಭೆ ಬಳಿಕ ಮಾತನಾಡಿದ ಅವರು, ಸಲಹಾ ಸಮಿತಿ ಸಲಹೆ ಮೇರೆಗೆ ವಾದ ವಿವಾದ ನಡೆಯಿತು. ನಮ್ಮ ಮನವಿ ಅವರ ಕಿವಿ, ಹೃದಯಕ್ಕೆ ಮುಟ್ಟಿದೆ. ಇದು ಇಂಡಸ್ಟ್ರಿಗೆ ಪಾಠವಾಗಿದೆ. ಚಿತ್ರ ಮಂದಿರಗಳಲ್ಲಿ ಸ್ವಚ್ಛತೆ ಇರಬೇಕು. ಎಸಿ ತಾಪಮಾನವನ್ನು ಸರಿಯಾಗಿ ಇಟ್ಟುಕೊಳ್ಳಬೇಕು. ಇದಕ್ಕೆ ಪ್ರೇಕ್ಷಕರು ಸಹಕರಿಸಬೇಕು. ಸಿಎಂ ಸೇರಿದಂತೆ ಎಲ್ಲರಿಗೂ ಧನ್ಯವಾದಗಳು ಎಂದು ತಿಳಿಸಿದ್ದಾರೆ.
Advertisement
Advertisement
ಸಭೆಯಲ್ಲಿ ಮಾತನಾಡಿದ ಶಿವರಾಜ್ ಕುಮಾರ್, ನಮ್ಮ ಜೊತೆ ಕುಳಿತು ಚರ್ಚಿಸಿ ನಿರ್ಧಾರ ಕೈಗೊಳ್ಳಬಹುದಿತ್ತು. ಏಕಾ ಏಕಿ ನಿರ್ಧಾರ ಕೈಗೊಂಡಿರೋದು ಕಷ್ಟವಾಗಿದೆ. ಎಲ್ಲ ರೀತಿಯ ಮುನ್ನೆಚ್ಚರಿಗೆ ಕ್ರಮ ಕೈಗೊಳ್ಳುತ್ತೇವೆ. ಏನೇ ನಿಯಮ ಹಾಕಿ ಶೇ.100 ರಷ್ಟಕ್ಕೆ ಅನುಮತಿ ನೀಡಿ ಎಂದು ಸಚಿವರಿಗೆ ಮನವಿ ಮಾಡಿದರು.
Advertisement
Advertisement
ಕೊರೊನಾ ಬಂದಾಗಿನಿಂದಲೂ ಚಿತ್ರರಂಗ ಸಂಕಷ್ಟದಲ್ಲಿದೆ. ಎಲ್ಲವನ್ನೂ ಎದುರಿಸಿ ಮುನ್ನುಗ್ಗಬೇಕು. ಎಲ್ಲ ಕಳೆದು ಒಳ್ಳೆಯ ಕಾಲ ಬರುವ ಸೂಚನೆಗಳು ಬಂದಿತ್ತು. ಕೇಂದ್ರ ಸರ್ಕಾರ ಶೇ.100ರಷ್ಟು ಭರ್ತಿಗೆ ಅವಕಾಶ ಮಾಡಿಕೊಟ್ಟಿತ್ತು. ಆದರೆ ಈಗ ರಾಜ್ಯ ಸರ್ಕಾರ ಮಾಡಿರುವ ನಿಯಮ ಮತ್ತೆ ಚಿತ್ರ ರಂಗಕ್ಕೆ ಸಂಕಷ್ಟ ತಂದಿದೆ. ಶೇ.50ರಷ್ಟು ನೀಡಿದರೆ ಬದುಕೋಕೆ ಆಗುತ್ತಾ? ಸಾಮಾಜಿಕ ಅಂತರ ಎಲ್ಲಿದೆ ಹೇಳಿ. ಸಿನಿಮಾ ರಂಗಕ್ಕೆ ಮಾತ್ರ ಈ ಬೇಧ ಏಕೆ? ಬೇರೆ ರಾಜ್ಯಗಳಲ್ಲಿ ಈ ರೀತಿ ಮಾಡಿಲ್ಲ. ಈ ನಿರ್ಧಾರ ಮನಸಿಗೆ ನೋವು ತಂದಿದೆ. ರಾಜ್ಯ ಸರ್ಕಾರಕ್ಕೆ ಈಗಾಗಲೇ ಸಾಕಷ್ಟು ಬಾರಿ ಮನವಿ ಮಾಡಿದ್ದೇವೆ. ಈಗಲೂ ಮನವಿ ಮಾಡುತ್ತೇವೆ ಎಂದು ಶಿವರಾಜ್ ಕುಮಾರ್ ಹೇಳಿದರು.
ಅಧಿಕಾರಿಗಳು ಸರಿಯಾದ ಮಾಹಿತಿ ನೀಡಿಲ್ಲ. ನನಗೂ ನೀಡಿಲ್ಲ, ಸಿಎಂಗೂ ಮಾರ್ಗ ಸೂಚಿಯ ಬಗ್ಗೆ ಮಾಹಿತಿ ನೀಡಿಲ್ಲ. ಹೀಗಾಗಿ ಈ ರೀತಿಯ ತೊಂದರೆ ಆಗಿದೆ. ಅಲ್ಲದೆ ಫೆಬ್ರವರಿಯಲ್ಲಿ ಎರಡನೇ ಅಲೆ ಬರುತ್ತದೆ ಎಂದು ಹೇಳಲಾಗುತ್ತಿದೆ. ಹೀಗಾಗಿ ಈ ರೀತಿಯ ಕ್ರಮ ಕೈಗೊಂಡಿದ್ದೇವೆ ಎಂದು ಸಚಿವ ಸುಧಾಕರ್ ಇದೇ ವೇಳೆ ಮಾಹಿತಿ ನೀಡಿದರು.
ಸಾ.ರಾ.ಗೋವಿಂದು ಮಾತನಾಡಿ, ನಮ್ಮ ಜನ ಹೊಟ್ಟೆ ತುಂಬ ಊಟ ಮಾಡಿ ತುಂಬಾ ದಿನ ಆಗಿದೆ. ಬೇರೆ 5 ರಾಜ್ಯಗಳ ಸಿನಿಮಾಗಳು ನಮ್ಮ ಕನ್ನಡ ಚಿತ್ರರಂಗವನ್ನು ನಿರ್ನಾಮ ಮಾಡುತ್ತಿವೆ. ಕಲ್ಯಾಣ ಮಂಟಪದಲ್ಲಿ 250 ಜನಕ್ಕೆ ಅನುಮತಿ ಕೊಟ್ಟಿದ್ದಾರೆ ಆದರೆ ಅಲ್ಲಿ 2,500 ಜನ ಇದ್ದಾರೆ. ದಯವಿಟ್ಟು ಗಮನ ಕೊಟ್ಟು ಶೇ.100 ಮಾಡಿ, ಇಲ್ಲವಾದಲ್ಲಿ ಒಂದು ವರ್ಷ ಹಿಂದೆ ಹೋಗುತ್ತೇವೆ ಎಂದು ತಿಳಿಸಿದರು.
ಇದಕ್ಕೂ ಮುನ್ನ ಕೊರೊನಾ ತಾಂತ್ರಿಕ ಸಲಹಾ ಸಮಿತಿಯ ಸದಸ್ಯ ಡಾ.ಸುದರ್ಶನ್ ಮಾಹಿತಿ ನೀಡಿ, ಕೊರೊನಾ ರಾಜ್ಯಕ್ಕೆ ಯಾವಾಗ ಬಂತು ಎನ್ನುವುದನ್ನು ಗಮನಿಸಿದ್ದೇವೆ. ಯಾವ ಮಟ್ಟದಲ್ಲಿ ನಿಯಂತ್ರಿಸಿದ್ದೇವೆ ಎನ್ನುವುದು ಎಲ್ಲರಿಗೂ ಗೊತ್ತು. ಕಳೆದ 5 ತಿಂಗಳಿಂದ ಕೊರೊನಾ ತಡೆಯಲು ಎಷ್ಟು ಕಷ್ಟ ಪಟ್ಟಿದ್ದೇವೆ ಎಂದು ನಮಗೆ ಗೊತ್ತಿದೆ. ಕೇರಳಕ್ಕೆ ಹೋಲಿಸಿಕೊಂಡರೆ ನಮ್ಮ ರಾಜ್ಯ ಎರಡು ಪಟ್ಟು ದೊಡ್ಡದಿದೆ. ಈಗ ಕೆರಳದಲ್ಲಿ ಪ್ರಕರಣ ಹೆಚ್ಚಾಗುತ್ತಿವೆ. ನಾವು ಎಲ್ಲ ಸರಳೀಕರಣ ಮಾಡಿದರೆ ಕಷ್ಟವಾಗುತ್ತೆ ಎಂದು ತಿಳಿಸಿದರು.
ವಿಧಾನಸೌಧದಲ್ಲಿ ನಡೆದ ಸಭೆಯಲ್ಲಿ ಫಿಲಂ ಚೇಂಬರ್ ಅಧ್ಯಕ್ಷ ಜಯರಾಜ್, ಸಾರಾ ಗೋವಿಂದ್, ನಟಿ ತಾರಾ,ಕೆಪಿ ಶ್ರೀಕಾಂತ್, ಉಮೇಶ್ ಬಣಕಾರ್, ನಿರ್ಮಾಪಕ ಸಂಘದ ಅಧ್ಯಕ್ಷ ಪ್ರವೀಣ್, ಕೆ ಮಂಜು, ನಟ ದೊಡ್ಡಣ್ಣ, ಸುರೇಶ್ ಸೇರಿದಂತೆ ಹಲವರು ಭಾಗವಹಿಸಿದ್ದರು.