ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಕೋವಿಡ್ ಪಾಸಿಟಿವ್ ಪ್ರಕರಣಗಳು ನಿರೀಕ್ಷೆಗೂ ಮೀರಿ ಹೆಚ್ಚಳವಾಗುತ್ತಿವೆ. ಹೀಗಾಗಿ ಕೊಡಗಿನಲ್ಲಿ ಉಲ್ಬಣಿಸಲಿರುವ ಕೋವಿಡ್ ಪ್ರಕರಣಗಳನ್ನು ನಿಯಂತ್ರಿಸಲು ಕೊಡಗು ಉಸ್ತುವಾರಿ ಸಚಿವ ವಿ.ಸೋಮಣ್ಣ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲು ನಿರ್ಧರಿಸಲಾಗಿದೆ.
ಈಗಾಗಲೇ ಜಿಲ್ಲೆಯಲ್ಲಿ ನಿತ್ಯ 250 ಕ್ಕೂ ಹೆಚ್ಚು ಪಾಸಿಟಿವ್ ಪ್ರಕರಣಗಳು ದಾಖಲಾಗುತ್ತಿವೆ. ಜಿಲ್ಲೆಯಲ್ಲಿ ಸಾವಿರ ಸಕ್ರಿಯ ಪ್ರಕರಣಗಳಿದ್ದು, ಅವುಗಳಲ್ಲಿ 80 ಜನರನ್ನು ಮಾತ್ರ ಕೋವಿಡ್ ಆಸ್ಪತ್ರೆಗೆ ದಾಖಲಿಸಿಕೊಳ್ಳಲಾಗಿದೆ. ಉಳಿದ ಎಲ್ಲರನ್ನೂ ಹೋಮ್ ಐಸೋಲೇಷನ್ ಮಾಡಲಾಗಿದೆ. ಆದರೆ ಹೋಮ್ ಐಸೋಷನ್ ನಲ್ಲಿ ಇರುವ ಕೋವಿಡ್ ರೋಗಿಗಳ ಆರೋಗ್ಯದ ಬಗ್ಗೆ ಸರಿಯಾದ ಮೇಲ್ವಿಚಾರಣೆ ಆಗುತ್ತಿಲ್ಲ ಎಂಬ ಬಗ್ಗೆ ದೂರುಗಳು ಕೇಳಿಬಂದಿದ್ದು, ಅಂತಹ ಪ್ರತಿಯೊಬ್ಬರ ಆರೋಗ್ಯದ ಸ್ಥಿತಿ ಹೇಗಿದೆ ಎನ್ನುವ ಕುರಿತು ಮಾಹಿತಿ ನೀಡುವಂತೆ ಸಚಿವ ಸೋಮಣ್ಣ ಸಭೆಯಲ್ಲೇ ಸೂಚಿಸಿದರು.
ಸರಿಯಾದ ಮಾಹಿತಿ ಸಿಗದಿದ್ದಾಗ, ಜಿಲ್ಲೆಯ ಐದು ತಾಲೂಕಿನ ತಹಶೀಲ್ದಾರ್ ಗಳ ನೇತೃತ್ವದಲ್ಲಿ ಹೆಲ್ಪ್ ಲೈನ್ ತೆರೆದು ತಕ್ಷಣವೇ ಕೋವಿಡ್ ಸೋಂಕಿತರ ಆರೋಗ್ಯ ಮತ್ತು ಅವರ ಚಲನವಲನಗಳ ಮೇಲೆ ನಿಗಾ ವಹಿಸಬೇಕು. ಅಲ್ಲದೆ ಜಿಲ್ಲೆಯಲ್ಲಿರುವ ಆಕ್ಸಿಜನ್ ಪೂರೈಕೆ ಮತ್ತು ಆಕ್ಸಿಜನ್ ಬೆಡ್‍ಗಳು ಎಷ್ಟಿವೆ ಎಂಬ ಮಾಹಿತಿಯನ್ನು ಸಚಿವ ಸೋಮಣ್ಣ ಕೇಳಿದರು. ತಾಲೂಕು, ಜಿಲ್ಲಾಸ್ಪತ್ರೆ ಸೇರಿದಂತೆ ವಿವಿಧೆಡೆ ಸಿದ್ಧತೆ ಮಾಡಿಕೊಳ್ಳುತ್ತಿರುವ ಕೇರ್ ಸೆಂಟರ್ ಗಳಲ್ಲೂ 300 ಆಕ್ಸಿಜನ್ ಬೆಡ್ ಗಳ ವ್ಯವಸ್ಥೆ ಮಾಡಿಕೊಳ್ಳಲಾಗುತ್ತಿದೆ. 24 ವೆಂಟಿಲೇಟರ್ ಸಿದ್ಧ ಇವೆ ಎಂದು ಕೊಡಗು ಡಿಎಚ್‍ಓ ಮಾಹಿತಿ ನೀಡಿದರು.
ಪಾಸಿಟಿವ್ ಬಂದ ವ್ಯಕ್ತಿಯ ಪ್ರಾಥಮಿಕ ಸಂಪರ್ಕದಲ್ಲಿರುವ ಎಲ್ಲರಿಗೂ ಪಾಸಿಟಿವ್ ಬರುತ್ತಿದೆ. ಹೀಗಾಗಿ ಜಿಲ್ಲೆಯಲ್ಲಿ ಪ್ರಕರಣಗಳ ಸಂಖ್ಯೆ ಹೆಚ್ಚಳವಾಗುತ್ತಿದೆ. ಪ್ರಕರಣಗಳ ಸಂಖ್ಯೆ ಇನ್ನೂ ಹೆಚ್ಚಳವಾಗಲಿವೆ ಎಂದು ಮಾಹಿತಿ ನೀಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಸೋಮಣ್ಣ, ಜಿಲ್ಲೆಯಲ್ಲಿರುವ 29 ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲೂ ನಿತ್ಯ ಕನಿಷ್ಟ 100 ಜನರ ಕೋವಿಡ್ ಟೆಸ್ಟ್ ಮಾಡಬೇಕು ಮತ್ತು ವ್ಯಾಕ್ಸಿನ್ ವಿತರಣೆ ಮಾಡುವಂತೆ ಸೂಚಿಸಿದರು. 32 ಇಲಾಖೆಗಳ ಅಧಿಕಾರಿಗಳನ್ನು ಎಡಿಸಿ ಅವರ ನೇತೃತ್ವದಲ್ಲಿ ಸಮಿತಿ ರಚಿಸಿ ಕೋವಿಡ್ ನಿರ್ವಹಣೆಗೆ ಎಲ್ಲರಿಗೂ ಜವಾಬ್ದಾರಿ ನೀಡಲಾಗಿದೆ ಎಂದು ತಿಳಿಸಿದರು.
ಕೋವಿಡ್ ವಿಚಾರದಲ್ಲೂ ರಾಜಕಾರಣ ಬೇಡ
ಕೋವಿಡ್ ನಿಭಾಯಿಸುವಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸೋತಿವೆ ಎಂದು ಹೇಳುವ ಮೂಲಕ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಎಲ್ಲದರಲ್ಲೂ ರಾಜಕಾರಣ ಮಾಡುವುದನ್ನು ಬಿಡಲಿ. ಕೋವಿಡ್ ನಿಭಾಯಿಸುವಲ್ಲಿ ನಾವು ಸೋತಿದ್ದೇವೆ ಎನ್ನುವುದಾದರೆ, ಅವರದ್ದೇ ಸರ್ಕಾರವಿರುವ ಪಂಜಾಬ್ ನಲ್ಲಿ ಯಾಕೆ ಅವರಿಗೆ ಕೋವಿಡ್ ನಿಯಂತ್ರಿಸಲು ಆಗಿಲ್ಲ. ಅಲ್ಲಿ ಕನಿಷ್ಟ ವ್ಯಾಕ್ಸಿನ್ ಹಾಕಿಸಿಕೊಳ್ಳಲು ಜನರು ಬರುತ್ತಿಲ್ಲ. ಮಹಾರಾಷ್ಟ್ರದಲ್ಲಿ ಸ್ಥಿತಿ ಏನಾಗಿದೆ, ದೆಹಲಿಯಲ್ಲಿ ಎಂತಹ ಸ್ಥಿತಿ ನಿರ್ಮಾಣವಾಗಿದೆ? ಮೊದಲು ಅವರ ಕಾರ್ಯಕ್ರಮಗಳಲ್ಲಿ ಸರಿಯಾಗಿ ಕೋವಿಡ್ ನಿಯಮಗಳನ್ನು ಪಾಲಿಸುವುದನ್ನು ಕಲಿತುಕೊಳ್ಳಲಿ ಎಂದು ಸಂಸದ ಪ್ರತಾಪ್ ಸಿಂಹ ತಿರುಗೇಟು ನೀಡಿದರು.