ಬೆಂಗಳೂರು: ರಾಷ್ಟ್ರ ಪ್ರಶಸ್ತಿ ಪುರಸ್ಕೃತ ನಟ, 38 ವರ್ಷದ `ಸಂಚಾರಿ ವಿಜಯ್ ನಿಧನರಾಗಿದ್ದಾರೆ. ಇಂದು ಬೆಳಗಿನ ಜಾವ 3:34ಕ್ಕೆ ಸಂಚಾರಿ ವಿಜಯ್ ಮೃತಪಟ್ಟಿದ್ದಾರೆ ಎಂದು ಅಪೋಲೋ ಆಸ್ಪತ್ರೆ ಅಧಿಕೃತವಾಗಿ ತಿಳಿಸಿದೆ. ಕೆಲವೇ ಸಿನಿಮಾದಲ್ಲಿ ನಟಿಸಿ ಮನೋಜ್ಞ ಅಭಿನಯಕ್ಕೆ ರಾಷ್ಟ್ರಪ್ರಶಸ್ತಿ ಪಡೆದ ವಿಜಯ್ ಬಡತನನದಲ್ಲಿ ಆರಂಭದ ಜೀವನ ನಡೆಸಿ ಈ ಸಾಧನೆ ನಿರ್ಮಿಸಿದ್ದರು.
ಕಡೂರು ತಾಲೂಕಿನ ರಂಗಾಪುರದಲ್ಲಿ 1983ರ ಜುಲೈ 17 ರಂದು ಜನಿಸಿದ ವಿಜಯ್ ಅವರ ಪೂರ್ಣ ಹೆಸರು ವಿಜಯ್ ಕುಮಾರ್. ತಂದೆ ಬಸವರಾಜಯ್ಯ ಟೈಲರ್ ಆಗಿ ಉದ್ಯೋಗ ಮಾಡುತ್ತಿದ್ದರೆ ತಾಯಿ ಗೌರಮ್ಮ ಪಂಚನಗಳ್ಳಿಯಲ್ಲಿ ನರ್ಸ್ ಆಗಿ ಕೆಲಸ ಮಾಡುತ್ತಿದ್ದರು. ತಂದೆ-ತಾಯಿ ಇಬ್ಬರೂ ಜಾನಪದ ಕಲಾವಿದರಾಗಿದ್ದರಿಂದ ಬಾಲ್ಯದಲ್ಲೇ ಅಭಿನಯ ಕಲೆ ವಿಜಯ್ ಅವರಿಗೆ ಒಲಿದಿತ್ತು. ಇದನ್ನೂ ಓದಿ: ಹೆಲ್ಮೆಟ್ ಹಾಕಿದ್ರೆ ವಿಜಯ್ ಪ್ರಾಣಕ್ಕೆ ಕಂಟಕವಾಗ್ತಿರ್ಲಿಲ್ಲ: ಡಾ. ಅರುಣ್ ನಾಯ್ಕ್
ಪಂಚನಹಳ್ಳಿ ಗ್ರಾಮದಲ್ಲಿ ಪ್ರಾಥಮಿಕ ಶಿಕ್ಷಣವನ್ನು ಪಡೆದ ಇವರು ಆಣೆಗೆರೆಯಲ್ಲಿ ಪೌಢಶಿಕ್ಷಣ ಮುಗಿಸಿದ್ದರು. ತಿಪಟೂರಿನ `ಕಲ್ಪತರು’ ಕಾಲೇಜ್‍ನಲ್ಲಿ ಪಿಯು ವಿದ್ಯಾಭ್ಯಾಸವನ್ನು ಮಾಡಿ ನಂತರ ಬೆಂಗಳೂರಿನ ಬಿಎಂಎಸ್ ಕಾಲೇಜ್‍ನಲ್ಲಿ ಇಂಜಿನಿಯರಿಂಗ್ ಪದವಿ ಓದಿದ್ದರು. ಇದನ್ನೂ ಓದಿ: ಬೆಳಗ್ಗೆ 3:34ಕ್ಕೆ ವಿಜಯ್ ನಿಧನ – ರವೀಂದ್ರ ಕಲಾಕ್ಷೇತ್ರದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ
ಆರ್ಥಿಕ ಪರಿಸ್ಥಿತಿ ಸರಿ ಇರದೇ ಇದ್ದದ್ದರಿಂದ ಅಣ್ಣ ತಮ್ಮ ಇಬ್ಬರೂ ಓದಲೂ ಸಾಧ್ಯವಾಗದ ಪರಿಸ್ಥಿತಿ ಇತ್ತು. ಹೀಗಾಗಿ ಚೆನ್ನಾಗಿ ಓದುತ್ತಿದ್ದ ಅಣ್ಣನನ್ನು ಬಿಟ್ಟು ವಿಜಯ್ ಬೆಂಗಳೂರು ಕಡೆ ಪಯಣ ಬೆಳೆಸಿದ್ದರು. ಬೆಂಗಳೂರಿನ ರಾಜಾಜಿನಗರ ಮಲ್ನಾಡ್ ಕೆಫೆ ಹೋಟೆಲ್‍ನಲ್ಲಿ ವಿಜಯ್ ಕೆಲಸ ಮಾಡುತ್ತಿದ್ದರು. ಪ್ರತಿ ತಿಂಗಳು ತಮ್ಮನಿಗೆ ಓದಲು ಹಣ ನೀಡುತ್ತಿದ್ದ ವಿಜಯ್, ತಮ್ಮನ ಓದು ಒಂದು ಹಂತಕ್ಕೆ ಬಂದ ನಂತರ ತನ್ನ ವಿದ್ಯಾಭ್ಯಾಸವನ್ನು ಮುಂದುವರೆಸಿದ್ದರು.
ವಿಜಯ್‍ಗೆ ಬಾಲ್ಯದಿಂದಲೇ ರಂಗಭೂಮಿಯ ಕುರಿತಾಗಿ ಅಪಾರವಾದ ಆಸಕ್ತಿಯನ್ನು ಹೊಂದಿದ್ದರು. ಅತಿಥಿ ಉಪನ್ಯಾಸಕನಾಗಿ ಕೆಲಸ ಮಡುತ್ತಿದ್ದ ಇವರು ವೃತ್ತಿಗೆ ವಿದಾಯ ಹೇಳಿ ರಂಗಭೂಮಿ ಪ್ರವೇಶ ಮಾಡಿದ್ದರು. `ಸಂಚಾರಿ ಥಿಯೇಟರ್’ ಜೊತೆ 10 ವರ್ಷಗಳ ನಂಟನ್ನು ಹೊಂದಿದ್ದರು. ಸಂಚಾರಿ ವಿಜಯ್ ಕಷ್ಟದಿಂದಲೇ ಸಿನಿಮಾರಂಗ ಪ್ರವೇಶವನ್ನು ಮಾಡಿದ್ದರು. ರಂಗಭೂಮಿ, ಸಿನಿಮಾ, ಕಲಾ ಕ್ಷೇತ್ರದಲ್ಲಿ ಛಾಪುನ್ನು ಮೂಡಿಸಿ ಚಿಕ್ಕಂದಿನಿಂದಲೇ ಸಿನಿಮಾದಲ್ಲಿ ಅಭಿನಯಿಸುವ ಕನಸನ್ನು ಕಂಡಿದ್ದರು. ಶಾಲಾ ದಿನಗಳಿಂದಲೂ ಕ್ರೀಡಾ, ಸಾಂಸ್ಕೃತಿಕ ಚುಟುವಕೆಯಲ್ಲಿ ಆಸಕ್ತಿಯನ್ನು ಹೊಂದಿದ್ದ ವಿಜಯ್ ಅವರಿಗೆ ಚಿತ್ರಕಲೆ, ಅಭಿನಯ, ಗಾಯನ ಸ್ಪರ್ಧೆಯಲ್ಲಿ ಭಾಗವಹಿಸಿದರೆ ಬಹುಮಾನ ಪಡೆದುಕೊಳ್ಳುತ್ತಿದ್ದರು.
ವಿಜಯ್ ಇಂಜಿನಿಯರಿಂಗ್ ಓದುತ್ತಿರುವ ಹೊತ್ತಿನಲ್ಲೇ ರಂಗಭೂಮಿ ಪ್ರವೇಶ ಮಾಡಿದ್ದರು. ಸಣ್ಣ-ಪುಟ್ಟ ನಾಟಕಗಳಲ್ಲಿ ನಟ ಸಂಚಾರಿ ವಿಜಯ್ ಅಭಿನಯಿಸಿದ್ದರು. ಚೆನ್ನಾಗಿ ಹಾಡುಗಳನ್ನು ಹಾಡುತ್ತಿದ್ದ ಸಂಚಾರಿ ವಿಜಯ್ ಖಾಸಗಿ ಚಾನೆಲ್‍ನ ಗಾಯನ ರಿಯಾಲಿಟಿ ಶೋನಲ್ಲಿ ಕಾರ್ಯಕ್ರಮ ಭಾಗಹಿಸಿದ್ದರು. ಸಂಚಾರಿ ಥಿಯೇಟರ್ ರಂಗತಂಡ ಸೇರಿದ ಬಳಿಕ ಹಲವು ನಾಟಕಗಳಲ್ಲಿ ಅಭಿನಯಿಸತೊಡಗಿದರು. ಈ ಮೂಲವಾಗಿ ಇವರು ‘ಸಂಚಾರಿ ವಿಜಯ್’ ಎಂದೇ ಚಿರಪರಿಚಿತರಾದರು. ರಂಗಭೂಮಿಯಲ್ಲಿ ನಟನೆ ಜೊತೆ ಎರಡು ನಾಟಕಗಳ ನಿರ್ದೇಶನ ಮಾಡಿದರು. ಅಭಿನಯ ಅಲ್ಲದೇ ಶಾಸ್ತ್ರೀಯ ಸಂಗೀತ, ಹಿಂದುಸ್ತಾನಿ ಶಾಸ್ತ್ರೀಯ ಸಂಗೀತ ಅಭ್ಯಾಸವನ್ನು ಮಾಡಿದ್ದರು.
2011ರಲ್ಲಿ ತೆರೆಕಂಡಿದ್ದ `ರಂಗಪ್ಪ ಹೋಗ್ಬಿಟ್ನಾ’ ಚಿತ್ರದ ಮೂಲಕ ವಿಜಯ್ ಅವರ ಸಿನಿ ಬದುಕು ಆರಂಭವಾಯಿತು. ರಂಗಪ್ಪ ಹೋಗಿಬಿಟ್ನಾ.. ನಾನು ಅವನಲ್ಲ ಅವಳು, ವಿಲನ್, ಗೋಧಿ ಬಣ್ಣ ಸಾಧಾರಣ ಮೈಕಟ್ಟು, ಕಿಲ್ಲಿಂಗ್ ವೀರಪ್ಪನ್, ಅಲ್ಲಮ, ಕೃಷ್ಣ ತುಳಸಿ, ನಾತಿಚರಾಮಿ, ಆ್ಯಕ್ಟ್ 1978 ಸಿನಿಮಾಗಳಲ್ಲಿ ನಟಿಸಿದ್ದಾರೆ. ಕನ್ನಡ ಮಾತ್ರವಲ್ಲದೇ ತಮಿಳು, ತೆಲುಗು, ಹಿಂದಿ ಸಿನಿಮಾದಲ್ಲಿ ಅಭಿನಯಿಸಿದ್ದಾರೆ.
ಎಲ್ಲ ಸಿನಿಮಾದಲ್ಲಿ ವಿಭಿನ್ನ ಪಾತ್ರದ ಮೂಲಕ ಜನ ಮೆಚ್ಚುಗೆಯನ್ನು ಪಡೆದುಕೊಳ್ಳುತ್ತಿದ್ದ ಸಂಚಾರಿ ವಿಜಯ್ `ನಾನು ಅವನಲ್ಲ ಅವಳು’ ಸಿನಿಮಾದಲ್ಲಿ ಉತ್ತಮ ನಟನೆಯನ್ನು ಮಾಡಿದ್ದರು. ಚಿತ್ರದ ಮೂಲಕ ಖ್ಯಾತಿಯನ್ನು ಪಡೆದುಕೊಂಡರು. ತೃತೀಯ ಲಿಂಗಿ ಪಾತ್ರದಲ್ಲಿ ಸಂಚಾರಿ ವಿಜಯ್ ಕಾಣಿಸಿಕೊಂಡಿದ್ದರು. ಇದೇ ಚಿತ್ರಕ್ಕೆ ರಾಷ್ಟ್ರ ಪ್ರಶಸ್ತಿ ಕೂಡ ವಿಜಯ್ ಅವರಿಗೆ ಒಲಿದು ಬಂತು.
ಸಿನಿಮಾ, ನಟನೆ ಮಾತ್ರವಲ್ಲದೇ ಸಮಾಜ ಸೇವೆಯಲ್ಲೂ ವಿಜಯ್ ತೊಡಗಿಸಿಕೊಂಡಿದ್ದರು. ಉಸಿರು ತಂಡ ಕಟ್ಟಿಕೊಂಡು ಜನಸೇವೆಯನ್ನು ಮಾಡುತ್ತಿದ್ದರು. ಕೊರೊನಾ ಸಂಕಷ್ಟದಲ್ಲಿದ್ದವರ ನೆರವಿಗೆ ನಿಂತಿದ್ದರು. ಸಂಚಾರಿ ವಿಜಯ್ ನಟಿಸಿದ ತಲೆದಂಡ ಸಿನಿಮಾ, ಅವಸ್ಥಾಂತರ, ಪುಕ್ಸಟ್ಟೆ, ಲೈಫು, ಮೇಲೊಬ್ಬ ಮಾಯಾವಿ… ಆಟಕ್ಕುಂಟು ಲೆಕ್ಕಕಿಲ್ಲ, ಪಿರಂಗಿಪುರ ಚಿತ್ರಗಳು ಬಿಡುಗಡೆ ಸಜ್ಜಾದ್ದವು. ಲಾಕ್‍ಡೌನ್ ಅಂತ್ಯವಾದ ಮೇಲೆ ತೆರೆ ಬರಲು ಸಿದ್ಧವಾಗಿತ್ತು. ಆದರೆ ಸಿನಿಮಾಗಳು ತೆರೆಯ ಮೇಲೆ ಬರುವ ಮೊದಲೇ ಕಲಾ ಜೀವನಕ್ಕೆ ಶಾಶ್ವತವಾದ ತೆರೆ ಎಳೆದು ಸಂಚಾರವನ್ನು ಮುಗಿಸಿದ್ದಾರೆ.