– 861.90 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ
ನವದೆಹಲಿ: ಹೊಸ ಸಂಸತ್ ಭವನ ನಿರ್ಮಾಣದ ಯೋಜನೆಯ ಬಿಡ್‍ಅನ್ನು ಟಾಟಾ ಪ್ರಾಜೆಕ್ಟ್ಸ್ ಲಿಮಿಟೆಡ್ ಸಂಸ್ಥೆ ಪಡೆದುಕೊಂಡಿದೆ. 861.90 ಕೋಟಿ ವೆಚ್ಚದಲ್ಲಿ ಸಂಸತ್ ಕಟ್ಟಡ ನಿರ್ಮಿಸಲು ಸಂಸ್ಥೆ ಬಿಡ್ ಮಾಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Advertisement
ಸದ್ಯ ನಿರ್ಮಾಣವಾಗಲಿರುವ ಹೊಸ ಸಂಸತ್ ಭವನ ಮುಂದಿನ 21 ತಿಂಗಳಿನಲ್ಲಿ ಪೂರ್ಣಗೊಳ್ಳುವ ನಿರೀಕ್ಷೆ ಇದ್ದು, ಸೆಂಟ್ರಲ್ ವಿಸ್ಟಾ ಪುನರಾಭಿವೃದ್ಧಿ ಯೋಜನೆಯಡಿ ಹೊಸ ಸಂಸತ್ ಕಟ್ಟಡವನ್ನು ನಿರ್ಮಿಸಲಾಗುತ್ತಿದೆ. ಕೇಂದ್ರ ಲೋಕೋಪಯೋಗಿ ಇಲಾಖೆ ಕರೆದಿದ್ದ ಬಿಡ್‍ನಲ್ಲಿ ಲಾರ್ಸೆನ್ ಮತ್ತು ಟರ್ಬೋ ಕಂಪನಿಗಳು ಭಾಗಿಯಾದ್ದವು. ಆದರೆ 861.90 ಕೋಟಿ ರೂ.ಗೆ ಬಿಡ್ ಮಾಡಿದ್ದ ಟಾಟಾ ಪ್ರಾಜೆಕ್ಟ್ಸ್ ಬಿಡ್ ತನ್ನದಾಗಿಸಿಕೊಂಡಿತ್ತು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
Advertisement
Advertisement
ಕೇಂದ್ರ ಸರ್ಕಾರದ ನಾಗರೀಕ ಸಂಸ್ಥೆ ಯೋಜನೆಯ ವೆಚ್ಚವನ್ನು ಸುಮಾರು 940 ಕೋಟಿ ರೂ. ಎಂದು ಅಂದಾಜು ಮಾಡಿತ್ತು. ಕೇಂದ್ರ ಲೋಕೋಪಯೋಗಿ ಇಲಾಖೆ (ಸಿಪಿಡಬ್ಲ್ಯುಡಿ) ಅನ್ವಯ, ಹೊಸ ಸಂಸತ್ ಕಟ್ಟಡ ಈಗಿನ ಸಂಸತ್ತಿನ ಪಕ್ಕದಲ್ಲೇ ಇರಲಿದೆ. ತ್ರಿಕೋನದಂತೆ ಕಟ್ಟಡವನ್ನು ವಿನ್ಯಾಸಗೊಳಿಸಲಾಗಿದೆ. ಸಾರ್ವಜನಿಕರು, ಸಂಸದರು ಮತ್ತು ವಿಐಪಿಗಳಿಗೆ ಆರು ಪ್ರತ್ಯೇಕ ಪ್ರವೇಶದ್ವಾರಗಳೊಂದಿಗೆ 120 ಕಚೇರಿಗಳನ್ನು ಒಳಗೊಂಡು ಕಟ್ಟಡವನ್ನು ವಿನ್ಯಾಸಗೊಳಿಸಲಾಗಿದೆ. ರಾಜ್ಯಸಭೆ ಮತ್ತು ಲೋಕಸಭೆ ಒಳಗೊಂಡದಂತೆ, ಜಂಟಿ ಅಧಿವೇಶನದ ಸಂದರ್ಭದಲ್ಲಿ 1,350 ಸಂಸದರಿಗೆ ಅವಕಾಶ ಕಲ್ಪಿಸುವಂತೆ ವಿನ್ಯಾಸ ಮಾಡಲಾಗಿದೆ. 336ಕ್ಕೂ ಹೆಚ್ಚು ಜನರು ಕುಳಿತುಕೊಳ್ಳುವ ಸಾರ್ವಜನಿಕರ ವೀಕ್ಷಣಾ ಗ್ಯಾಲರಿ ಹೊಂದಿರಲಿದೆ.
Advertisement
ವರ್ಷದ ಆರಂಭದಲ್ಲಿ ಕೇಂದ್ರ ಸರ್ಕಾರ ಹೊಸ ಸಂಸತ್ ಭವನ ನಿರ್ಮಾಣ ಮಾಡುವ ನಿರ್ಧಾರವನ್ನು ಮಾಡಿತ್ತು. ಪ್ರಧಾನಿ ನರೇಂದ್ರ ಮೋದಿ ಅವರ ಕನಸಿನ ಯೋಜನೆ ಇದಾಗಿದೆ. ಹೊಸ ಕಟ್ಟಡದ ನಿರ್ಮಾಣಕ್ಕಾಗಿ ಹಳೆ ಕಟ್ಟಡಗಳನ್ನು ಧ್ವಂಸಗೊಳಿಸದೇ ಅವುಗಳನ್ನು ವಸ್ತು ಸಂಗ್ರಹಾಲಯಗಳನ್ನಾಗಿ ಪರಿವರ್ತಿಸಲು ತೀರ್ಮಾನಿಸಲಾಗಿದೆ.
ಪ್ರಸ್ತುತ ಇರುವ ಸಂಸತ್ ಕಟ್ಟಡವೂ 90 ವರ್ಷಗಳಿಗಿಂತ ಹಳೆಯದಾಗಿದ್ದು, 1931ರಲ್ಲಿ ಸಂಸತ್ ಭವನವನ್ನು ನಿರ್ಮಿಸಲಾಗಿತ್ತು. 1911ರಲ್ಲಿ ಬ್ರಿಟಿಷರು ಭಾರತದ ರಾಜಧಾನಿಯನ್ನು ಕೋಲ್ಕತ್ತಾದಿಂದ ದೆಹಲಿಗೆ ಸ್ಥಳಾಂತರಿಸುವ ಘೋಷಣೆ ಮಾಡಿದ 20 ವರ್ಷಗಳ ಬಳಿಕ ದೆಹಲಿಯಲ್ಲಿ ಸಂಸತ್ ಭವನ ಸೇರಿದಂತೆ ರಾಷ್ಟ್ರಪತಿ ಭವನವನ್ನು ನಿರ್ಮಿಸಲಾಗಿತ್ತು.