– ಪತ್ನಿ ಹಣ ಕೊಡದಿದ್ದಕ್ಕೆ ಕಂದಮ್ಮನನ್ನೇ ಮಾರಿದ
ಹೈದರಾಬಾದ್: ಮದ್ಯದ ಚಟಕ್ಕೆ ಒಳಗಾಗಿದ್ದ ವ್ಯಕ್ತಿಯೊಬ್ಬ ಹೊಸ ವರ್ಷದ ಸಂಭ್ರಮಾಚರಣೆಗೆ ಮದ್ಯ ಖರೀದಿಸಲು ತನ್ನ ಮಗನನ್ನೇ ಮಾರಾಟಕ್ಕಿಟ್ಟು ಇದೀಗ ಪೊಲೀಸರ ಅತಿಥಿಯಾಗಿದ್ದಾನೆ.
ರಾಜು ಮತ್ತು ಸಾರಾ ದಂಪತಿ ಮಲಕ್‍ಪೇಟೆ ಏರಿಯಾ ಆಸ್ಪತ್ರೆಯ ಬಳಿ ಫುಟ್‍ಪಾತ್‍ನಲ್ಲಿ ವಾಸಿಸುತ್ತಾ ಜೀವನ ನಡೆಸುತ್ತಿದ್ದರು. ದಂಪತಿಗೆ 6 ತಿಂಗಳ ಗಂಡು ಮಗುವೊಂದಿತ್ತು. ಹೊಸ ವರ್ಷದ ಗುಂಗಿನಲ್ಲಿದ್ದ ರಾಜು ತನ್ನ ಪತ್ನಿ ಸಾರಾ ಜೊತೆ ಮದ್ಯ ಖರೀದಿಸಲು ಹಣ ಕೇಳಿದ್ದಾನೆ. ಆಕೆ ಹಣ ಕೊಡಲು ನಿರಾಕರಿಸಿದ್ದರಿಂದ ತನ್ನ 6 ತಿಂಗಳ ಮಗುವನ್ನೇ ಮಾರಾಟ ಮಾಡಲು ಹೊರಟಿದ್ದಾನೆ.
ಹೊಸ ವರ್ಷದ ಆಚರಣೆಗಾಗಿ ಮದ್ಯಕುಡಿಯಲು ಹಣ ಕೊಡದಿದ್ದ ಪತ್ನಿಯ ವಿರುದ್ಧ ಕೋಪಗೊಂಡ ರಾಜು ತನ್ನ ಆರು ತಿಂಗಳ ಗಂಡು ಮಗುವನ್ನು ಆಫ್ರೀನ್ ಎಂಬ ಏಜೆಂಟ್‍ನ ಸಹಾಯದಿಂದ ಮಾರಾಟ ಮಾಡಲು ಯತ್ನಿಸಿದ್ದಾನೆ. ಅದರಂತೆ ಏಜೆಂಟ್, ಗಂಡು ಮಗುವನ್ನು ಬಯಸುವ ಗ್ರಾಹಕರನ್ನು ಸಂಪರ್ಕಿಸಿ 70,000 ರೂಪಾಯಿಗೆ ಮಾರಾಟ ಮಾಡಿ ಕೊಡುವುದಾಗಿ ರಾಜುಗೆ ತಿಳಿಸಿದ್ದಾನೆ.
ಆಫ್ರೀನ್ ಮಗುವಿನೊಂದಿಗೆ ಎಬ್ಬಿ ನಗರಕ್ಕೆ ಕರೆದುಕೊಂಡು ಬಂದು ಮಾರಾಟ ಮಾಡುತ್ತಿರುವುದರ ಖಚಿತ ಮಾಹಿತಿ ಪಡೆದು ದಾಳಿ ನಡೆಸಿದ ಚಾದರ್‍ಘಾಟ್ ಪೊಲೀಸರು, ರಾಜು ಮತ್ತು ಆಫ್ರೀನ್ ನಡುವೆ ಹಣದ ವಿಚಾರವಾಗಿ ಚೌಕಾಸಿ ನಡೆಯುತ್ತಿರುವುದನ್ನು ಗಮನಿಸಿದ್ದಾರೆ. ನಂತರ ಸಿಸಿಟಿವಿ ಆಧಾರದ ಮೂಲಕ ಮಗುವನ್ನು ಮಾರಾಟ ಮಾಡಿದ ಸ್ಥಳವನ್ನು ಗುರುತು ಮಾಡಿ ಮಗುವನ್ನು ರಕ್ಷಿಸಿದ್ದಾರೆ. ರಾಜು ಮತ್ತು ಆಫ್ರೀನ್ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ಚಾದರ್‍ಘಾಟ್ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.