ಮುಂಬೈ: ಹೊಸ ವರ್ಷಕ್ಕೆ ಜಿಯೋ ಬಳಕೆದಾರರಿಗೆ ಗಿಫ್ಟ್ ಸಿಕ್ಕಿದೆ. 2021 ಜನವರಿ 1 ರಿಂದ ಭಾರತದಲ್ಲಿ ಜಿಯೋದಿಂದ ಇತರ ಟೆಲಿಕಾಂ ಕಂಪನಿಗಳಿಗೆ ಹೋಗುವ ಎಲ್ಲ ಕರೆಗಳು ಉಚಿತವಾಗಲಿದೆ.
ಜಿಯೋದಿಂದ ಜಿಯೋ ಸಿಮ್‌ಗೆ ಹೋಗುವ ಕರೆಗಳು ಉಚಿತವಾಗಿತ್ತು. ಆದರೆ ಜಿಯೋದಿಂದ ಇತರೆ ಟೆಲಿಕಾಂ ಕಂಪನಿಯ ಸಿಮ್‌ಗೆ ಹೋಗುವ ಕರೆಗಳಿಗೆ ಪ್ರತಿ ನಿಮಿಷಕ್ಕೆ 6 ಪೈಸೆ ದರ ವಿಧಿಸುತ್ತಿತ್ತು. ಆದರೆ ಈಗ ಹೊರ ಹೋಗುವ ಕರೆಗಳಿಗಿದ್ದ ದರವನ್ನು ತೆಗೆದು ಹಾಕಿದೆ.
Advertisement
Advertisement
ಭಾರತೀಯ ದೂರ ಸಂಪರ್ಕ ಪ್ರಾಧಿಕಾರ(ಟ್ರಾಯ್) 2021ರ ಜನವರಿ ಒಂದರಿಂದ ದೇಶದ ಒಳಗಡೆ ಮಾಡಲಾಗುವ ಕರೆಗಳಿಗೆ ವಿಧಿಸಲಾಗುತ್ತಿದ್ದ ಇಂಟರ್ ಕನೆಕ್ಟ್ ಯೂಸೇಜ್ ಚಾರ್ಜ್ (ಐಯುಸಿ) ಕೊನೆಗೊಳಿಸಬೇಕೆಂದು ನಿರ್ದೇಶನ ನೀಡಿತ್ತು. ಈ ನಿರ್ದೇಶನವನ್ನು ಜಿಯೋ ಪಾಲಿಸುವುದಾಗಿ ತಿಳಿಸಿದೆ.
Advertisement
Advertisement
ಜಿಯೋ ಸೇವೆ ಆರಂಭಗೊಂಡ ಬಳಿಕ ಬೇರೆ ಟೆಲಿಕಾಂ ಕಂಪನಿಗಳಿಗೆ ಹೊರ ಹೋಗುವ ಕರೆಗೆ ದರ ವಿಧಿಸುತ್ತಿರಲಿಲ್ಲ. ಆದರೆ 2019ರ ಅಕ್ಟೋಬರ್ 9 ರಂದು ಜಿಯೋ ಬೇರೆ ಟೆಲಿಕಾಂ ಕಂಪನಿಗಳಿಗೆ ಹೊರಹೋಗುವ ಎಲ್ಲ ಕರೆಗಳಿಗೆ ಪ್ರತಿ ನಿಮಿಷಕ್ಕೆ 6 ಪೈಸೆ ದರ ವಿಧಿಸಲಾಗುವುದು ಎಂದು ಪ್ರಕಟಿಸಿತ್ತು. ಟ್ರಾಯ್ ನಿಗದಿ ಪಡಿಸಿದಂತೆ ಐಯುಸಿ ವಿಧಿಸಲು ಮುಂದಾಗುತ್ತಿದ್ದೇವೆ ಎಂದು ಜಿಯೋ ಹೇಳಿತ್ತು.
2019ರ ಜಿಯೋ ಹೇಳಿಕೆ
All you need to know about IUC. pic.twitter.com/svdSsrmT5s
— Reliance Jio (@reliancejio) October 9, 2019
ಜಿಯೋ ಸೇವೆ ಆರಂಭಗೊಂಡ ಬಳಿಕ ಈ ಐಯುಸಿಯನ್ನು ತಗೆದು ಹಾಕಬೇಕೆಂದು ಟ್ರಾಯ್ ಮುಂದೆ ವಾದ ಮಂಡಿಸುತಿತ್ತು. ಆದರೆ ಬೇರೆ ಟೆಲಿಕಾಂ ಕಂಪನಿಗಳು ಐಯುಸಿಯನ್ನು ತೆಗೆದು ಹಾಕಬಾರದು ದರವನ್ನು ಹೆಚ್ಚಿಸಬೇಕು ಎಂದು ವಾದಿಸುತ್ತಿದ್ದವು. ಆದರೆ ಟ್ರಾಯ್ ಹಂತ ಹಂತವಾಗಿ ಐಯುಸಿ ದರವನ್ನು ಕಡಿತಗೊಳಿಸುತ್ತಾ ಬಂದಿತ್ತು.
ಏನಿದು ಐಯುಸಿ?
ಇಂಟರ್ ಕನೆಕ್ಟ್ ಯೂಸೇಜ್ ಚಾರ್ಜ್(ಐಯುಸಿ) ಟ್ರಾಯ್ ನಿಗದಿ ಪಡಿಸುತ್ತದೆ. ಉದಾಹರಣೆಗೆ ಜಿಯೋ ಗ್ರಾಹಕರೊಬ್ಬರು ವೊಡಾಫೋನ್ ಗ್ರಾಹಕರಿಗೆ ಕರೆ ಮಾಡಿದರೆ ಜಿಯೋ ಟ್ರಾಯ್ ನಿಗದಿ ಪಡಿಸಿದ ಐಯುಸಿಯನ್ನು ವೊಡಾಫೋನ್ ಕಂಪನಿಗೆ ಪಾವತಿಸಬೇಕಾಗುತ್ತದೆ.
2003ರಲ್ಲಿ ಒಳಬರುವ ಕರೆಯನ್ನು ಉಚಿತವಾಗಿ ನೀಡುವ ಸಲುವಾಗಿ ಟ್ರಾಯ್ ಐಯುಸಿಯನ್ನು ತಂದಿತ್ತು. 2004ರ ಫೆಬ್ರವರಿಯಲ್ಲಿ ಟ್ರಾಯ್ ಪ್ರತಿ ನಿಮಿಷಕ್ಕೆ 30 ಪೈಸೆ, 2009ರ ಏಪ್ರಿಲ್ ನಲ್ಲಿ 20 ಪೈಸೆ, 2015ರ ಮಾರ್ಚ್ ನಲ್ಲಿ 14 ಪೈಸೆ, ಬಳಿಕ 6 ಪೈಸೆ ಐಯುಸಿ ಬೆಲೆಯನ್ನು ಟ್ರಾಯ್ ನಿಗದಿಪಡಿಸಿತ್ತು.
ಐಯುಸಿಯಿಂದಾಗಿ ಇತರೇ ಟೆಲಿಕಾಂ ಕಂಪನಿಗಳು ಸಾವಿರಾರು ಕೋಟಿ ರೂ. ಆದಾಯಗಳಿಸುತ್ತಿದೆ ಎನ್ನುವುದು ಜಿಯೋ ಆರೋಪ. 2019ರಲ್ಲಿ ತಿಳಿಸಿದಂತೆ ಕಳೆದ 3 ವರ್ಷಗಳಲ್ಲಿ ಜಿಯೋ ಐಯುಸಿಗೆಂದು ಒಟ್ಟು 12 ಸಾವಿರ ಕೋಟಿ ರೂ. ಹಣವನ್ನು ವಿವಿಧ ಟೆಲಿಕಾಂ ಕಂಪನಿಗಳಿಗೆ ಪಾವತಿಸಿದೆ. ಹೊರ ಹೋಗುವ ಕರೆಗಳು ಉಚಿತವಾಗಿ ಇರುವ ಕಾರಣ ಬೇರೆ ಕಂಪನಿಯ ಗ್ರಾಹಕರು ನಮ್ಮ ಕಂಪನಿಯ ಗ್ರಾಹಕರಿಗೆ ಮಿಸ್ ಕಾಲ್ ನೀಡುತ್ತಿದ್ದರು. ಇದರಿಂದಾಗಿ ನಮಗೆ ಭಾರೀ ನಷ್ಟವಾಗಿದೆ ಎಂದು ಜಿಯೋ ಹೇಳಿತ್ತು.
ಈ ಹಿಂದೆ ಭಾರತಿ ಎಂಟರ್ಪ್ರೈಸಸ್ ಮುಖ್ಯಸ್ಥ ಸುನೀಲ್ ಮಿತ್ತಲ್ ಟ್ರಾಯ್ ಮುಖ್ಯಸ್ಥರಿಗೆ ಪತ್ರ ಬರೆದು ಪ್ರಸ್ತುತ ಐಯುಸಿ ಕಡಿಮೆ ಇದೆ. ಪಾರದರ್ಶಕವಾಗಿ ಹೊಸ ಬೆಲೆಯನ್ನು ನಿಗದಿಪಡಿಸಬೇಕೆಂದು ಮನವಿ ಮಾಡಿದ್ದರು.
ಜಿಯೋ ವಿರೋಧ ಯಾಕೆ?
ಈ ಹಿಂದೆ ಟೆಲಿಕಾಂ ಕಂಪೆನಿಗಳು ಕರೆ ಮತ್ತು ಡೇಟಾ ಸೇವೆಗಳನ್ನು ಪ್ರತ್ಯೇಕವಾಗಿ ನಿಭಾಯಿಸುತಿತ್ತು. ಆದರೆ ಜಿಯೋ ಈ ಎರಡನ್ನೂ ಒಟ್ಟಿಗೆ ನಿಭಾಯಿಸುತ್ತದೆ. ಇದರಿಂದಾಗಿ ಖರ್ಚು ಕಡಿಮೆ ಆಗುತ್ತದೆ. ಇದರಲ್ಲಿ ಕರೆಗೆ ಬೇರೆ, ಡೇಟಾಗೆ ಬೇರೆ ಎಂದು ಹಣ ನೀಡಬೇಕಿಲ್ಲ. ಡೇಟಾಗೆ ನೀಡಿದ ಹಣದಲ್ಲೇ ಕರೆಯನ್ನೂ ಉಚಿತವಾಗಿ ಮಾಡಬಹುದು. ಈ ಕಾರಣಕ್ಕಾಗಿ ಜಿಯೋ ಸಂಪೂರ್ಣವಾಗಿ ಐಯುಸಿಯನ್ನು ತೆಗೆದು ಹಾಕಬೇಕೆಂದು ವಾದ ಮಂಡಿಸಿಕೊಂಡು ಬಂದಿತ್ತು. ಐಯುಸಿಯಿಂದ ನಮಗೆ ಹೊರೆಯಾಗುತ್ತಿದೆ. ಇತರೇ ಟೆಲಿಕಾಂ ಕಂಪೆನಿಗಳು ತಮ್ಮ ಆದಾಯವನ್ನು ಹೆಚ್ಚಿಸಲು ಮಾಡಿಕೊಂಡ ತಂತ್ರ ಎಂದು ಜಿಯೋ ವಾದಿಸುತ್ತಿತ್ತು.