-ಕಾಂಡೋಮ್, ಆಕ್ಷೇಪಾರ್ಹ ವಸ್ತುಗಳು ಪತ್ತೆ
-ಸ್ಪಾದಲ್ಲಿದ್ದ ಐದು ಜನ ಗ್ರಾಹಕರು ವಶಕ್ಕೆ
ನವದೆಹಲಿ: ದೇಶದ ರಾಜಧಾನಿಯ ತಿಲಕ್ ನಗರದಲ್ಲಿ ಸ್ಪಾ ಹೆಸರಲ್ಲಿ ನಡೆಯುತ್ತಿದ್ದ ಸೆಕ್ಸ್ ದಂಧೆಯ ಮೇಲೆ ದೆಹಲಿಯ ಮಹಿಳಾ ಆಯೋಗ ದಾಳಿ ನಡೆಸಿದೆ.
ದೆಹಲಿ ಮಹಿಳಾ ಆಯೋಗದ ಹೆಲ್ಪ್‍ಲೈನ್ 181 ಸಂಖ್ಯೆಗೆ ಕರೆ ಮಾಡಿದ ಅನಾಮಧೇಯ ವ್ಯಕ್ತಿ ತಿಲಕ್ ನಗರದ ಸ್ಪಾದಲ್ಲಿ ನಡೆಯುತ್ತಿರೋ ಸೆಕ್ಸ್ ದಂಧೆಯ ಮಾಹಿತಿ ನೀಡಿದ್ದರು. ಮಾಹಿತಿ ಪಡೆದ ಮಹಿಳಾ ಅಯೋಗದವರು ದೆಹಲಿ ಪೊಲೀಸರ ಜೊತೆ ಮಾಂಸದಂಧೆಯ ಅಡ್ಡೆಯ ಮೇಲೆ ದಾಳಿ ನಡೆಸಿದ್ದಾರೆ.
ಈ ಕುರಿತು ಮಾಹಿತಿ ನೀಡಿರುವ ದೆಹಲಿ ಮಹಿಳಾ ಆಯೋಗದ ಸದಸ್ಯೆ ಕಿರಣ್ ನೇಗಿ, ಈ ಸಂಬಂಧ ಅಧ್ಯಕ್ಷೆ ಸ್ವಾತಿ ಮಾಲಿವಾಲ್ ಮಾಹಿತಿ ನೀಡಿದ್ರು. ಸೂಚನೆ ಸಿಗುತ್ತಿದ್ದಂತೆ ದಾಳಿ ನಡೆಸಲು ನಾವು ಎರಡು ತಂಡಗಳ ರಚನೆ ಮಾಡಲಾಯ್ತು. ಸರಿಯಾದ ಸಮಯಕ್ಕೆ ಪೊಲೀಸರು ಅಲ್ಲಿಗೆ ಬಂದಾಗ ಅವರ ಜೊತೆ ಸ್ಪಾ ಒಳಗೆ ಹೋದೆವು ಎಂದು ಹೇಳಿದ್ರು.
ರಿಸೆಪ್ಷನ್ ನಲ್ಲಿ ಕುಳಿತಿದ್ದ ಯುವತಿಗೆ ಮಾಲೀಕನನ್ನ ಕರೆಸುವಂತೆ ಹೇಳಲಾಯ್ತು. ದಾಳಿಯ ವಿಷಯ ತಿಳಿಯುತ್ತಲ್ಲೇ ಮಾಲೀಕ ತನ್ನ ಫೋನ್ ಸ್ವಿಚ್ಛ್ ಮಾಡಿದ. ಸ್ಪಾದಲ್ಲಿದ್ದ ಐವರು ಗ್ರಾಹಕರನ್ನು ಪೊಲೀಸರು ವಶಕ್ಕೆ ಪಡೆದುಕೊಂಡರು. ನಂತರ ಅಲ್ಲಿ ಕೆಲಸ ಮಾಡುತ್ತಿದ್ದ ಹುಡುಗಿಯರ ಹೇಳಿಕೆಯನ್ನ ದಾಖಲಿಸಿಕೊಳ್ಳಲಾಗಿದೆ. ಸ್ಪಾದ ಸಿಸಿಟಿವಿ ಫೋಟೋಜ್ ಸಹ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದು, ಪ್ರಕರಣ ಸಂಬಂಧ ಎಫ್‍ಐಆರ್ ದಾಖಲಿಸಿಕೊಂಡಿದ್ದಾರೆ ಎಂದು ಕಿರಣ್ ನೇಗಿ ತಿಳಿಸಿದ್ದಾರೆ.
ಮಹಿಳಾ ಆಯೋಗಕ್ಕೆ ಮೂರು ಸ್ಪಾಗಳ ಬಗ್ಗೆ ಮಾಹಿತಿ ಬಂದಿತ್ತು. ಒಂದರ ಮೇಲೆ ದಾಳಿ ನಡೆಯುತ್ತಿದ್ದಂತೆ ಇನ್ನೆರಡು ಸ್ಪಾಗಳ ಬಾಗಿಲು ಹಾಕಿವೆ. ಮಹಾಮಾರಿ ಕೊರೊನಾ ಹಿನ್ನೆಲೆ ಸ್ಪಾಗಳನ್ನ ತೆರೆಯದಂತೆ ಸರ್ಕಾರ ಹೇಳಿದೆ. ಮಾರ್ಗಸೂಚಿಯಲ್ಲಿ ಸ್ಪಾಗಳ ಆರಂಭಕ್ಕೆ ಕೇಂದ್ರ ಸರ್ಕಾರ ಗ್ರೀನ್ ಸಿಗ್ನಲ್ ನೀಡಿಲ್ಲ. ಆದ್ರೂ ದೆಹಲಿಯಲ್ಲಿ ಸ್ಪಾಗಳು ಆರಂಭವಾಗಿದ್ದು ಹೇಗೆ? ಈ ಬಗ್ಗೆ ಪೊಲೀಸರಿಗೆ ಮಾಹಿತಿ ಇರಲಿಲ್ವಾ ಎಂದು ದೆಹಲಿ ಮಹಿಳಾ ಆಯೋಗದ ಅಧ್ಯಕ್ಷೆ ಸ್ವಾತಿ ಮಾಲಿವಾಲ್ ಪ್ರಶ್ನಿಸಿದ್ದಾರೆ.