ವಾಷಿಂಗ್ಟನ್: ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದ ಬ್ರಿಟನ್ ರಾಜವಂಶಸ್ಥೆ ಪ್ರಿನ್ಸ್ ಹ್ಯಾರಿ ಪತ್ನಿ ಮೇಘನ್ ಮಾರ್ಕೆಲ್ ಗರ್ಭಪಾತದ ನೋವನ್ನು ಮೊದಲ ಬಾರಿಗೆ ಹಂಚಿಕೊಂಡಿದ್ದಾರೆ.
ರಾಜಮನೆತನದ ವೈಭೋಗ ಬೇಡ ಎಂದು ಹೇಳಿ ಬ್ರಿಟನ್ ರಾಜಕುಮಾರ ಹ್ಯಾರಿ ಮತ್ತು ಮೇಘನ್ ಮಾರ್ಕೆಲ್ ಕಳೆದ ಮಾರ್ಚ್‍ನಲ್ಲಿ ಅಧಿಕೃತವಾಗಿ ಅರಮನೆಯಿಂದ ಹೊರನಡೆದಿದ್ದು, ಸದ್ಯ ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿನ ಸಾಂತಾ ಬಾರ್ಬರಾದಲ್ಲಿ ಸಾಮಾನ್ಯರಂತೆ ವಾಸಿಸುತ್ತಿದ್ದಾರೆ. ಈಗ ಮೇಘನ್ ತನಗಾದ ಗರ್ಭಪಾತ ವಿಚಾರವನ್ನು ನ್ಯೂಯಾರ್ಕ್ ಟೈಮ್ಸ್ ಪತ್ರಿಕೆಗೆ ಪತ್ರ ಬರೆದು ಆ ಸಂದರ್ಭವನ್ನು ವಿವರಿಸಿದ್ದಾರೆ.
ಪತ್ರದಲ್ಲಿ ಏನಿದೆ?
ಕಳೆದ ಜುಲೈನಲ್ಲಿ ಒಂದು ದಿನ ನನಗೆ ಬೆಳಗ್ಗೆ ಹೊಟ್ಟೆ ನೋವು ಕಾಣಿಸಿಕೊಂಡಿತ್ತು. ಆಗ ನಾನು ನೋವಿನಿಂದ ಕುಸಿದು ಬಿದ್ದೆ. ನನ್ನ ಮೊದಲನೇ ಮಗುವನ್ನು ಬಿಗಿದಪ್ಪಿ ಹಿಡಿದುಕೊಂಡಿದ್ದೆ. ಆ ಘಳಿಗೆ ಎರಡನೇ ಮಗುವು ಪ್ರಪಂಚ ನೋಡುವ ಮೊದಲೇ ಕಳೆದುಕೊಳ್ಳುತ್ತಿದ್ದೇನೆ ಎನ್ನುವುದು ನನಗೆ ತಿಳಿಯಿತು.
ಕೆಲ ಗಂಟೆಗಳ ಬಳಿಕ ಕಣ್ಣುತೆರೆದು ನೋಡಿದಾಗ ನಾನು ಆಸ್ಪತ್ರೆಯ ಬೆಡ್ ಮೇಲೆ ಮಲಗಿದ್ದೆ. ನನ್ನ ಪತಿ ಹ್ಯಾರಿ ಹಾಗೂ ನನ್ನ ಕಣ್ಣಲ್ಲಿ ನೀರು ತುಂಬಿತ್ತು. ಮಗುವನ್ನು ಕಳೆದುಕೊಂಡಿರುವ ನೋವು ಇಬ್ಬರಲ್ಲೂ ಇದೆ. ಈ ನೋವನ್ನು ಹಲವಾರು ಮಹಿಳೆಯರು ಅನುಭವಿಸಿರುತ್ತಾರೆ. ಆದರೆ ಆ ವಿಷಯದ ಕುರಿತಾಗಿ ಮಾತನಾಡುವುದು ತುಂಬಾ ಕಡಿಮೆ.
100ರಲ್ಲಿ 10 – 20 ಮಹಿಳೆಯರು ಇಂತಹ ನೋವನ್ನು ಅನುಭವಿಸಿರುತ್ತಾರೆ. ಇದು ಸಾಮಾನ್ಯವಾಗಿದ್ದರೂ ಗರ್ಭಪಾತದ ಕುರಿತಾಗಿ ಮಾತನಾಡುವುದು ನಿಷಿದ್ಧವಾಗಿದೆ. ಅವಮಾನ, ಆತಂಕ, ಏಕಾಂಗಿತನ, ಮಾತೃ ಶೋಕ ಅನುಭವಿಸುವುದು ಮುಂದುವರೆಯುತ್ತಲೇ ಸಾಗಿದೆ. ಮಗುವನ್ನು ಕಳೆದುಕೊಂಡಿರುವ ನೋವನ್ನು ನಾನು ಹಾಗೂ ನನ್ನ ಪತಿ ಅನುಭವಿಸಿದ್ದೇವೆ ಎಂದು ಮೇಘನ್ ಮಾರ್ಕಲ್ ತಮ್ಮ ಗರ್ಭಪಾತದ ಕಹಿ ಅನುಭವವನ್ನು ಬರೆದುಕೊಂಡಿದ್ದಾರೆ.
ಬ್ರಿಟನ್ ರಾಜಮನೆತನದವರು ಬಹುತೇಕವಾಗಿ ಯಾವುದೇ ಖಾಸಗಿ ವಿಚಾರಗಳನ್ನು ಹಂಚಿಕೊಳ್ಳುವುದಿಲ್ಲ. ಹೀಗಿರುವಾಗ ಮೇಘನ್ ಗರ್ಭಪಾತದ ಬಗ್ಗೆ ಮಾತನಾಡಿರುವುದು ವಿಶೇಷತೆ ಪಡೆದುಕೊಂಡಿದೆ.
ಗರ್ಭಪಾತದ ಬಗ್ಗೆ ಜನರು ಬಹಿರಂಗವಾಗಿ ಮಾತನಾಡಲು ಮಡಿವಂತಿಕೆ ಇದೆ. ಆದರೆ ಬ್ರಿಟನ್ ರಾಜಮನೆತನದಿಂದ ಇಂತಹ ಅಪರೂಪದ ಮಾಹಿತಿಯನ್ನು ಹಂಚಿಕೊಳ್ಳುವ ಮೂಲಕವಾಗಿ ಮೇಘನ್ ಮಾರ್ಕಲ್ ಮಹಿಳೆಯರಿಗೆ ಧೈರ್ಯ ತುಂಬಿದ್ದಾರೆ.