ಬೆಂಗಳೂರು: ಸರ್ಕಾರದ ವಿರುದ್ಧ ಶಾಸಕರು ಅಸಮಾಧಾನ ಹೊರ ಹಾಕುತ್ತಲೇ ಇದ್ದು, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸಹ ಸಭೆ ಕರೆದು ಚರ್ಚಿಸುತ್ತಿದ್ದಾರೆ. ಇದೇ ವೇಳೆ ಇದೀಗ ಸರ್ಕಾರದ ವಿರುದ್ಧ ಮಾಜಿ ಸಚಿವ, ಶಾಸಕ ಗೂಳಿಹಟ್ಟಿ ಶೇಖರ್ ಅಸಮಾಧಾನ ಹೊರ ಹಾಕಿದ್ದಾರೆ.
ವಿಧಾನಸೌಧದಲ್ಲಿ ಮಾತನಾಡಿದ ಅವರು, ನಾವು ಶಾಸಕರೆಲ್ಲ ಸಂದಿಗ್ಧ ಪರಿಸ್ಥಿತಿಯಲ್ಲಿ ಇದ್ದೇವೆ. ಹೇಳೋದಕ್ಕೂ ಆಗೊಲ್ಲ, ಬಿಡೋದಕ್ಕೂ ಆಗಲ್ಲ. ಅಂತಹ ಪರಿಸ್ಥಿತಿ ನಮ್ಮದಾಗಿದೆ. ಒಂದು ಮಾತನಾಡಿದರೆ ಅದು ದೊಡ್ಡದಾಗುತ್ತೆ, ಒಂದು ಮಾತು ಬಿಟ್ರೆ ಸಣ್ಣದಾಗುತ್ತೆ. ನಾವು ಏನೇ ಮಾತನಾಡಿದರೂ ಕಷ್ಟ ಆಗಿದೆ ಎಂದು ಅಳಲು ತೋಡಿಕೊಂಡರು.
ನಮಗೂ ಅನೇಕ ಸಮಸ್ಯೆಗಳಿವೆ, ಕ್ಷೇತ್ರಕ್ಕೆ ಹೋದರೆ ಕೆಲಸ ಆಗುತ್ತಿಲ್ಲ ಎಂದು ಜನ ಬೈತಾರೆ. ಮಂತ್ರಿಗಳಿಗೆ ಹೇಳಿಕೊಳ್ಳೋಕೆ ಅವರೇ ಸಿಗುತ್ತಿಲ್ಲ. ನಾವು ಮಾತನಾಡಿದರೆ ಬೇರೆ ಬಣ್ಣ ಕಟ್ತಾರೆ. ಹೀಗಾಗಿ ಜಿಲ್ಲಾವಾರು ಸಭೆ ಕರೆದಿದ್ದಾರೆ. ಸಭೆಯಲ್ಲಿ ನಮ್ಮ ಸಮಸ್ಯೆಗಳನ್ನ ಹೇಳಿಕೊಳ್ಳುತ್ತೇವೆ ಎಂದು ಅಸಹಾಯಕತೆ ವ್ಯಕ್ತಪಡಿಸಿದರು.
ಸಿಎಂ ಪುತ್ರ ವಿಜಯೇಂದ್ರ ಹಸ್ತಕ್ಷೇಪದ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ವಿಜಯೇಂದ್ರ ಬಗ್ಗೆ ಮಾತನಾಡುವಷ್ಟು ದೊಡ್ಡ ವ್ಯಕ್ತಿ ನಾನಲ್ಲ. ಅಂತಹ ಸಂದಿಗ್ಧ ಪರಿಸ್ಥಿಯಲ್ಲಿ ನಾವಿದ್ದೇವೆ. ನಾವು ಏನೇ ಮಾತನಾಡಿದರೂ ತಪ್ಪಾಗುತ್ತದೆ. ನಾನು 2009 ರಿಂದಲೂ ಸಚಿವ ಸ್ಥಾನದ ಆಕಾಂಕ್ಷಿಯೇ, ಸಿಎಂ, ವರಿಷ್ಠರು ಇದರ ಬಗ್ಗೆ ನಿರ್ಧಾರ ಮಾಡುತ್ತಾರೆ. ಬಡವ ನೀ ಮಡಗ್ದಂಗೆ ಇರು ಅಂತ ಸುಮ್ಮನಿದ್ದೇವೆ ಎಂದು ಸಚಿವ ಸಂಪುಟ ವಿಸ್ತರಣೆ ಬಗ್ಗೆ ಮಾತನಾಡಿದರು.