– ಕಾಪು ತಾಲೂಕಿನ ಎಲ್ಲಾ ಸಲೂನ್ ಬಂದ್
ಉಡುಪಿ: ಜಿಲ್ಲಾ ಪಂಚಾಯತ್‍ನ ಹೊರಗುತ್ತಿಗೆ ನೌಕರನಿಗೆ ಕೊರೊನಾ ಸೋಂಕು ತಗುಲುತ್ತಿದ್ದಂತೆ ಕಾಪುವಿನ ಸವಿತಾ ಸಮಾಜ ಬೆಚ್ಚಿ ಬಿದ್ದಿದೆ.
ಉಡುಪಿ ಜಿಲ್ಲಾ ಪಂಚಾಯತ್‍ನ ಸ್ವಚ್ಛ ಭಾರತ ಮಿಷನ್ ಕಚೇರಿಯಲ್ಲಿ ಕೆಲಸ ಮಾಡುತ್ತಿರುವ ಮೂವತ್ತು ವರ್ಷದ ಯುವಕನಿಗೆ ಕೊರೊನಾ ಬಾಧಿಸಿದೆ. ಯುವಕನಿಗೆ ಕೊರೊನಾ ಪಾಸಿಟಿವ್ ವರದಿ ಬರುವ ಎರಡು ದಿನಗಳ ಹಿಂದೆ ಆತ ಕಾಪುವಿನ ಸಲೂನ್ ಒಂದರಲ್ಲಿ ಹೇರ್ ಕಟ್ಟಿಂಗ್ ಮಾಡಿಸಿಕೊಂಡಿದ್ದ. ಹೀಗಾಗಿ ಕಾಪು ತಾಲೂಕಿನ ಸವಿತಾ ಸಮಾಜ ತಮ್ಮ ಎಲ್ಲಾ ಸಲೂನ್ ಗಳನ್ನು ಬಂದ್ ಮಾಡಲು ನಿರ್ಧರಿಸಿದೆ.
ಸೋಂಕಿತನಿಂದ ಬೇರೆಯವರಿಗೂ ರೋಗ ಅಂಟಿರಬಹುದು ಎಂಬುವುದು ಸವಿತಾ ಸಮಾಜದ ಆತಂಕ. ತಾಲೂಕಿನ ನೂರಾರು ಸಲೂನ್ ಗಳನ್ನು ಬಂದ್ ಮಾಡಿರುವ ಸವಿತಾ ಸಮಾಜ, ತಮ್ಮ ಸಂಘದ ಮುಂದಿನ ನಿರ್ಧಾರದ ವರೆಗೆ ಅಂಗಡಿಗಳನ್ನೆಲ್ಲಾ ಬಂದ್ ಇಟ್ಟುಕೊಳ್ಳಲು ಚಿಂತನೆ ಮಾಡಿದೆ.