ಹಾಸನ: ಜಿಲ್ಲೆಯ ಜೀವನಾಡಿ ಹೇಮಾವತಿ ಹಾಗೂ ಬೇಲೂರಿನ ಯಗಚಿ ಜಲಾಶಯ ಬಹುತೇಕ ಭರ್ತಿಯಾಗಿದ್ದು, ಇದರಿಂದ ಜಿಲ್ಲೆಯ ಜನರಲ್ಲಿ ಹರ್ಷ ಮೂಡಿಸಿದೆ. ಹೇಮಾವತಿ ಜಲಾನಯನ ಪ್ರದೇಶದಲ್ಲಿ ಕಳೆದ ಕೆಲ ದಿನಗಳಿಂದ ಮತ್ತೆ ಮುಂಗಾರು ಮಳೆ ಚುರುಕುಗೊಂಡಿದ್ದು ಜಲಾಶಯಕ್ಕೆ ಒಳ ಹರಿವಿನ ಪ್ರಮಾಣ ವೃದ್ಧಿಸಿದೆ.
ಹೇಮಾವತಿ ಜಲಾಶಯದ ಜಲಾನಯನ ಪ್ರದೇಶಗಳಾದ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ಹಾಗೂ ಹಾಸನ ಜಿಲ್ಲೆಯ ಸಕಲೇಶಪುರ, ಆಲೂರು ತಾಲೂಕಿನಲ್ಲಿ ಮುಂಗಾರು ಮಳೆ ಬಿರುಸಾಗಿದೆ. ಇಂದು 10,089 ಸಾವಿರ ಕ್ಯೂಸೆಕ್ ನೀರು ಹರಿದುಬರುತ್ತಿದ್ದು, ಕಳೆದ ಎರಡು ವಾರದಿಂದ ಪ್ರತಿದಿನ ಸರಿಸುಮಾರು 2,000 ಕ್ಯೂಸೆಕ್ ನೀರು ಹರಿದು ಜಲಾಶಯ ಸೇರುತ್ತಿದೆ. ಕಳೆದ ಮೂರು ವಾರದ ಹಿಂದೆ ಮುಂಗಾರು ಚುರುಕಾಗಿತ್ತು ಈ ವೇಳೆ ಒಳಹರಿವು 16 ಸಾವಿರ ಕ್ಯೂಸೆಕ್ ತಲುಪಿತ್ತು ನಂತರ ಮಳೆಯ ಪ್ರಮಾಣ ಕಡಿಮೆಯಾಗಿ ಕೆಲ ದಿನದಿಂದ ಮತ್ತೆ ಮಳೆ ಶುರುವಾಗಿದೆ.
37.10 ಟಿಎಂಸಿ ಸಂಗ್ರಹಣಾ ಸಾಮಥ್ರ್ಯದ ಜಲಾಶಯದಲ್ಲಿ ಸದ್ಯ 19.227 ಟಿಎಂಸಿ ನೀರು ಸಂಗ್ರಹವಾಗಿದೆ. 200 ಕ್ಯೂಸೆಕ್ ನೀರು ಕ್ರಸ್ಟ್‍ಗೇಟ್‍ಗಳ ಮೂಲಕ ನದಿಗೆ ಹರಿಬಿಡಲಾಗುತ್ತಿದೆ. ಜಲಾಶಯದಲ್ಲಿ 25 ಟಿಎಂಸಿ ಗೂ ಹೆಚ್ಚುನೀರು ಸಂಗ್ರಹವಾದರೆ ಮಾತ್ರ ಅಚ್ಚುಕಟ್ಟು ಪ್ರದೇಶದ ಬೆಳೆಗಳಿಗೆ ಹಾಗೂ ಕುಡಿಯುವ ನೀರಿಗಾಗಿ ಕೆರೆಗಳನ್ನು ತುಂಬಿಸಲು ನಾಲೆಗಳಲ್ಲಿ ನೀರು ಹರಿಸಲಾಗುವುದು ಎಂದು ಹೇಮಾವತಿ ಅಣೆಕಟ್ಟು ವಿಭಾಗದ ಎಂಜಿನಿಯರುಗಳು ಸ್ಪಷ್ಟಪಡಿಸಿದ್ದಾರೆ.
23 ಅಡಿ ಬಾಕಿ: ಜಲಾಶಯ ಭರ್ತಿಗೆ ಇನ್ನೂ 23 ಅಡಿಗಳಷ್ಟು ನೀರು ತುಂಬಬೇಕಿದೆ. ಒಳ ಹರಿವೇನೂ ಹೆಚ್ಚಳವಾಗಿದೆ ಆದರೆ ಮಳೆಯ ಪ್ರಮಾಣ ಇದೇ ರೀತಿ ಹೆಚ್ಚಾದರೆ ಜಲಾಶಯ ಭರ್ತಿಯಾಗಲಿದ್ದು ಇನ್ನು ಎರಡು ಮೂರು ವಾರ ಒಳ ಹರಿವು ಪ್ರತಿದಿನ ಹೆಚ್ಚಾದರೆ ಮಾತ್ರ ಜಲಾಶಯ ತುಂಬಲಿದೆ ಎಂದು ಅಂದಾಜಿಸಲಾಗಿದೆ.
ಯಗಚಿ ಜಲಾಶಯ ಭರ್ತಿ: ಜಿಲ್ಲೆಯ ಬೇಲೂರಿನ ಯಗಚಿ ಜಲಾಶಯ ಬಹುತೇಕ ಭರ್ತಿಯಾಗಿದ್ದು, ಜಲಾಶಯದಿಂದ ನೀರನ್ನು ಹೊರಬಿಡಲಾಗುತ್ತಿದೆ. ಡ್ಯಾಂಗೆ ಸದ್ಯ 500 ಕ್ಯೂಸೆಕ್ ಒಳಹರಿವು ಬರುತ್ತಿದೆ.
ಜಲಾಶಯಕ್ಕೆ ಒಳಹರಿವಿನಲ್ಲಿ ಹೆಚ್ಚಳ ಹಿನ್ನೆಲೆ ಐದು ಕ್ರಸ್ಟ್ ಗೇಟ್ ಗಳ ಮೂಲಕ 500 ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗುತ್ತಿದೆ. ಜಲಾಶಯದ ಗರಿಷ್ಠ ನೀರಿನ ಮಟ್ಟ 3164.900 ಅಡಿಗಳಷ್ಟು ಇದ್ದು ಬಹುತೇಕ ಭರ್ತಿಯಾಗಿದೆ. ಜಲಾಶಯದ ನೀರಿನ ಸಂಗ್ರಹ ಸಾಮಥ್ರ್ಯ 3.603 ಟಿಎಂಸಿ ಇದ್ದು ಇಂದು 3.055 ಟಿಎಂಸಿ ಸಂಗ್ರಹ ವಿದೆ. ಒಳಹರಿವಿನ ಪ್ರಮಾಣದಲ್ಲಿ ಏರಿಕೆಯಾದರೆ ಮತ್ತಷ್ಟು ನೀರು ಹೊರಬಿಡುವ ಸಾಧ್ಯತೆ ಇರುವ ಕಾರಣ ಅಣೆಕಟ್ಟೆಯ ಅಚ್ಚುಕಟ್ಟು ಪ್ರದೇಶ ಹಾಗೂ ನದಿ ಪಾತ್ರದ ಜನರು ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಯಗಚಿ ಯೋಜನಾ ವಿಭಾಗದ ಕಾರ್ಯಪಾಲಕ ಅಭಿಯಂತರ ಎಸ್.ಡಿ.ತಿಮ್ಮೇಗೌಡ ಸೂಚನೆ ಹೊರಡಿಸಿದ್ದಾರೆ. ಇದನ್ನೂ ಓದಿ: ಲಾಕ್ ಡೌನ್ ನಡುವೆ ಎಂಜಿನಿಯರಿಂಗ್ ಪದವೀಧರನಿಂದ ಮೀನು ಕೃಷಿಯಲ್ಲಿ ವಿನೂತನ ಸಾಧನೆ