– ತಾಲೂಕಾಗಿ ನಾಲ್ಕು ವರ್ಷವಾದ್ರೂ ಸೌಲಭ್ಯ ವಂಚಿತ ಸಿರವಾರ
– ಕಟ್ಟಡವೂ ಇಲ್ಲಾ, ಅಧಿಕಾರಿಗಳು ಇಲ್ಲಾ
ರಾಯಚೂರು: ಜಿಲ್ಲೆಯ ಸಿರವಾರ ತಾಲೂಕು ಘೋಷಣೆಯಾಗಿ ನಾಲ್ಕು ವರ್ಷವಾದರೂ ಇನ್ನೂ ಕೇವಲ ನೂತನ ತಾಲೂಕು ನಾಮಕಾವಸ್ಥೆಗೆ ಮಾತ್ರ ಸಿಮೀತವಾಗಿದೆ. ತಾಲೂಕಿಗೆ ಬೇಕಾಗಿರುವ ಸೌಲಭ್ಯಗಳು ಮಾತ್ರ ಇನ್ನೂ ಸರ್ಕಾರ ಸಮರ್ಪವಾಗಿ ಒದಗಿಸಿಲ್ಲ. ಕನಿಷ್ಠ ತಹಶೀಲ್ದಾರ್ ಕೂರಲು ಸಹ ಒಂದು ಸುಸಜ್ಜಿತ ಸ್ಥಳವಿಲ್ಲ. ಉಳಿದ ಸೌಲಭ್ಯಗಳ ಮಾತಂತೂ ಕೇಳಲೇಬಾರದ ಪರಸ್ಥಿತಿಯಿದ್ದು ಸರ್ಕಾರದಿಂದ ದಿವ್ಯ ನಿರ್ಲಕ್ಷ್ಯಕ್ಕೆ ಒಳಗಾಗಿದೆ ಅಂತ ನೂತನ ತಾಲೂಕಿನ ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಜನರ ಹೋರಾಟದಿಂದ ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನಲ್ಲಿದ್ದ ಸಿರವಾರ ನಾಲ್ಕು ವರ್ಷದ ಹಿಂದೆ ಪ್ರತ್ಯೇಕ ತಾಲೂಕಾಗಿ ಘೋಷಣೆಯಾಯಿತು. ಆದರೆ ಇಂದಿಗೂ ಪ್ರತಿಯೊಂದು ಕೆಲಸ ಕಾರ್ಯಕ್ಕೂ ಮಾನ್ವಿ ತಾಲೂಕು ಕೇಂದ್ರವನ್ನೇ ಸಿರವಾರದ ಜನ ಅವಲಂಬಿಸಬೇಕಾಗಿದೆ. ತಾಲೂಕು ಕೇಂದ್ರದಲ್ಲಿ ಉತ್ತಮ ಬಸ್ ನಿಲ್ದಾಣವಿಲ್ಲ, ಆಸ್ಪತ್ರೆಯಿಲ್ಲ. ವಿವಿಧ ಇಲಾಖೆಗಳು ಹೆಸರಿಗೆ ಮಾತ್ರ ಇದ್ದು ಅಧಿಕಾರಿಗಳಿಲ್ಲ, ಅಧಿಕಾರಿಗಳು ಇದ್ದರೆ ಕಚೇರಿಯ ಕಟ್ಟಡವೇ ಇಲ್ಲದಂತಹ ಪರಿಸ್ಥಿತಿ ಇದೆ.
ತಾಲೂಕಿಗೆ ಮುಖ್ಯವಾಗಿ ಬೇಕಾದ ತಹಶೀಲ್ದಾರ್ ಕಚೇರಿಯನ್ನು ನೋಡಿದರೆ ಎಂತಹವರು ಹೆದರಿಕೊಳ್ಳುವ ರೀತಿಯಲ್ಲಿದೆ. ಈಗಲೋ ಆಗಲೋ ಬಿಲುವ ಹಂತದಲ್ಲಿರುವ ಕಟ್ಟಡದಲ್ಲಿ ಐದಾರು ಸಿಬ್ಬಂದಿ ತಮ್ಮ ಕೆಲಸ ನಿರ್ವಹಿಸುತ್ತಿದ್ದಾರೆ. ಅದೂ ಸಹ ನೀರಾವರಿ ಇಲಾಖೆಯ ಕಾರ್ಯನಿರ್ವಾಹಕ ಅಭಿಯಂತರರ ಹಳೆಯ ವಸತಿಗೃಹವನ್ನೇ ಬಳಸಿಕೊಳ್ಳಲಾಗಿದೆ. ಹೀಗಾಗಿ ಇಇ ಗೆ ಈಗ ವಸತಿಗೃಹ ಇಲ್ಲದಂತಾಗಿದೆ. ಇನ್ನೂ ತಾಲೂಕಿಗೆ ಖಾಯಂ ಆದ ತಹಶೀಲ್ದಾರ್ ಸಹ ಇಲ್ಲಾ. ಒಬ್ಬರೇ ಅಧಿಕಾರಿ ದೇವದುರ್ಗ ಹಾಗೂ ಸಿರವಾರ ಎರಡನ್ನೂ ನಿಭಾಯಿಸುತ್ತಿದ್ದಾರೆ. ಭೂಮಿ ಕೇಂದ್ರ ಇನ್ನೂ ಮಾನ್ವಿಯಲ್ಲಿ ಉಳಿದಿರುವುದರಿಂದ ಕಂದಾಯ ದಾಖಲಾತಿಗಳಿಗೆ ಅಧಿಕಾರಿಗಳು ಸೇರಿ ಪ್ರತಿಯೊಬ್ಬರು ಮಾನ್ವಿ ಪಟ್ಟಣಕ್ಕೆ ನಿತ್ಯ ಹೋಗಿಬರಬೇಕಿದೆ. ಇದರಿಂದ ಸಾರ್ವಜನಿಕರು ಬೇಸತ್ತು ಹೋಗಿದ್ದಾರೆ. ಹೆಸರಿಗಷ್ಟೇ ನೂತನ ತಾಲೂಕಾಗಿ ಘೋಷಣೆ ಮಾಡಲಾಗಿದೆ. ಸೌಲಭ್ಯಗಳನ್ನು ನೀಡಬೇಕು ಅಂತ ಜನ ಒತ್ತಾಯಿಸುತ್ತಿದ್ದಾರೆ.
ಜಗದೀಶ್ ಶಟ್ಟರ್ ಮುಖ್ಯಮಂತ್ರಿಗಳಾಗಿದ್ದಾಗ ಮೊದಲ ಬಾರಿಗೆ ಸಿರವಾರನ್ನು ತಾಲೂಕಾಗಿ ಘೋಷಣೆ ಮಾಡಲಾಯಿತಾದರೂ ಅದು ಜಾರಿಗೆ ಬರಲಿಲ್ಲ. 2017 ರಲ್ಲಿ ಸಿದ್ದರಾಮಯ್ಯ ಅಧಿಕಾರವಧಿಯಲ್ಲಿ ಸಿರವಾರ ನೂತನ ತಾಲೂಕಾಗಿ ರೂಪಗೊಂಡಿತು. ಆದರೆ ಇದುವರೆಗೂ ಯಾವುದೇ ಸೌಲಭ್ಯಗಳು ತಾಲೂಕಿಗೆ ದೊರೆತಿಲ್ಲ. ಕಚೇರಿಗಳು, ಅಧಿಕಾರಿಗಳು ಇಲ್ಲದಿರುವುದರಿಂದ ಸಣ್ಣಪುಟ್ಟ ಕೆಲಸಗಳು ಸಹ ಆಗದೆ ಜನ ಒದ್ದಾಡುವಂತಾಗಿದೆ.
ಮಾನ್ವಿ ತಾಲೂಕು ಇದ್ದಾಗಲೇ ಚೆನ್ನಾಗಿತ್ತು ಈಗ ನೂತನ ತಾಲೂಕಾಗಿ ಪ್ರತಿಯೊಂದು ಕೆಲಸ ಕಾರ್ಯಗಳಿಗೂ ಪರದಾಡಬೇಕಾಗಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದು, ಒಂದು ತಾಲೂಕಿಗಿರಬೇಕಾದ ಕನಿಷ್ಠ ಸೌಲಭ್ಯಗಳನ್ನು ಸಿರವಾರ ತಾಲೂಕಿಗೂ ಒದಗಿಸಬೇಕು ಅನ್ನೊದು ಇಲ್ಲಿನ ಜನರ ಬೇಡಿಕೆಯಾಗಿದೆ.