– ನಗರದ ಬಹುತೇಕ ರಸ್ತೆಗಳು ಕೆರೆಯಂತಾಗಿವೆ
ಬೆಂಗಳೂರು: ರಾತ್ರಿ ಪೂರ್ತಿ ಸುರಿದ ಮಳೆಗೆ ಸಿಲಿಕಾನ್ ಸಿಟಿ ತತ್ತರಿಸಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ಜೊತೆಗೆ ಭಾರೀ ಮಳೆಗೆ ನಗರದ ರಸ್ತೆಗಳು ಕೆರೆಗಳಾಗಿವೆ. ಅಲ್ಲದೇ ಹೆಬ್ಬಾಳ ಫ್ಲೈ ಓವರ್ ಕೆಳಭಾಗದ ರಸ್ತೆ ಸಂಪೂರ್ಣ ಜಲಾವೃತವಾಗಿದೆ. ವಾಹನ ಸವಾರರು ಓಡಾಡಲು ಪರದಾಡುತ್ತಿದ್ದಾರೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ವರುಣಾಘಾತ – ಹೆಚ್‍ಎಸ್‍ಆರ್ ಲೇಔಟ್, ಹೊರಮಾವು ಜಲಾವೃತ
ಮಂಗಳವಾರ ರಾತ್ರಿ ನಗರದ ಬಹುತೇಕ ಭಾಗಗಳಲ್ಲಿ ಮಳೆಯಾಗಿದೆ. ಹೆಚ್‍ಎಸ್‍ಆರ್ ಲೇಔಟ್ ಸಂಪೂರ್ಣವಾಗಿ ಜಲಾವೃತವಾಗಿದೆ. ಮನೆಗಳಿಗೆ ನೀರು ನುಗ್ಗಿ ನಿವಾಸಿಗಳು ಪರದಾಡುತ್ತಿದ್ದಾರೆ. ಜೊತೆಗೆ ವಾಹನಗಳು ಮುಳುಗಿ ಹೋಗಿದ್ದು, ಮಳೆಯ ಪರಿಣಾಮ ರಾತ್ರಿ ಜನ ಜಗರಣೆ ಮಾಡಿದ್ದಾರೆ. ಇನ್ನೂ ಟಿ.ದಾಸರಹಳ್ಳಿಯ ವಿದ್ಯಾನಗರ, ರುಕ್ಮಿಣಿ ನಗರದಲ್ಲಿ ನೂರಾರು ಮನೆಗಳಿಗೆ ರಾಜಕಾಲುವೆ ನೀರು ನುಗ್ಗಿ ರಾತ್ರಿಯಿಡೀ ಜನರು ಪರದಾಡಿದ್ದಾರೆ. ಮನೆಗೆ ನೀರು ನುಗ್ಗಿದ ಪರಿಣಾಮ ಮನೆಯಲ್ಲಿದ್ದ ವಸ್ತುಗಳು ಹಾನಿಯಾಗಿದ್ದು, ಜನರು ಸ್ವಚ್ಛತಾ ಕಾರ್ಯದಲ್ಲಿ ತೊಡಗಿದ್ದಾರೆ.
ಶಾಸಕರು, ಅಧಿಕಾರಿಗಳಿಗೆ ಎಷ್ಟೇ ಬಾರಿ ಮನವಿ ಮಾಡಿದರೂ ಕ್ರಮ ತೆಗೆದುಕೊಂಡಿಲ್ಲ. ಪಕ್ಕದಲ್ಲಿ ರಾಜಕಾಲುವೆ ಇದೆ. ಮಳೆ ಬಂದಾಗ ಇದೇ ಅವಸ್ಥೆ ಆಗುತ್ತದೆ. ಕಳೆದ 5-6 ವರ್ಷಗಳಿಂದ ಇದೇ ಕಷ್ಟ ಅನುಭವಿಸುತ್ತಿದ್ದೇವೆ ಎಂದು ನಿವಾಸಿಗಳು ಅಧಿಕಾರಿಗಳು ಮತ್ತು ಜನ ಪ್ರತಿನಿಧಿಗಳ ವಿರುದ್ಧ ಪ್ರತಿಭಟನೆ ಮಾಡಿದ್ದಾರೆ. ಕೂಡಲೇ ರಾಜಕಾಲುವೆ ತೆರವು ಮಾಡುವಂತೆ ರಸ್ತೆ ತಡೆದು ಪ್ರತಿಭಟನೆ ಮಾಡಿದ್ದಾರೆ. ಅಲ್ಲದೇ ರಸ್ತೆಗೆ ಕಲ್ಲು, ಮರದ ದಿಮ್ಮಿಗಳನ್ನ ಇಟ್ಟು ಅಧಿಕಾರಿಗಳು ಸ್ಥಳಕ್ಕೆ ಬರುವಂತೆ ಆಗ್ರಹಿಸಿದ್ದಾರೆ. 8ನೇ ಮೈಲು ನೆಲಗೆದರನಹಳ್ಳಿ ಮುಖ್ಯ ರಸ್ತೆ ಬಂದ್ ಮಾಡಿ ಜನರು ಪ್ರತಿಭಟನೆ ಮಾಡಿದ್ದಾರೆ.
ಡಾಲರ್ಸ್ ಕಾಲೋನಿಯ ಎಸ್‍ಎಂಸಿ ಅಪಾರ್ಟ್‌ಮೆಂಟ್‌ಗೆ ನೀರು ನುಗ್ಗಿದ್ದು, ಕೆಳಗಡೆ ಬೇಸ್ ಮೆಂಟ್‍ನಲ್ಲಿ ನೀರು ನುಗ್ಗಿದೆ. ಪರಿಣಾಮ ಶೆಡ್ ಒಳಗಿದ್ದ ಸುಮಾರು 30-40 ಕಾರುಗಳು ಮುಳುಗಡೆಯಾಗಿವೆ. ಪಕ್ಕದಲ್ಲಿ ಮೋರಿ ಇದೆ. ಮಳೆ ನೀರು ನುಗ್ಗಿರುವುದರಿಂದ ಈ ಅವಾಂತರ ಸೃಷ್ಟಿಯಾಗಿದೆ. ಇದು ಐದನೇ ಬಾರಿ ಮಳೆಗೆ ಅಪಾರ್ಟ್‌ಮೆಂಟ್ ಒಳಗೆ ನೀರು ಬಂದಿರುವುದು ಎಂದು ಅಪಾರ್ಟ್‌ಮೆಂಟ್ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಬೆಂಗಳೂರಿನ ಬಹುತೇಕ ರಸ್ತೆಗಳು ಕೆರೆಯಂತಾಗಿವೆ. ಎಚ್‍ಬಿಆರ್ ಲೇಔಟ್ 5ನೇ ಬ್ಲಾಕ್‍ನಲ್ಲಿ ರಸ್ತೆ ತುಂಬೆಲ್ಲಾ ನೀರು ನಿಂತಿದೆ. ನೀರು ತುಂಬಿದ ರಸ್ತೆಯಲ್ಲಿ ವಾಹನ ಸವಾರರು ಪರದಾಡುತ್ತಿದ್ದಾರೆ. ಇನ್ನೂ ರಾಮಮೂರ್ತಿ ನಗರ ಚರ್ಚ್ ಬಳಿ ಮಳಿಗೆಗಳಿಗೆ ಮಳೆ ನೀರು ನುಗ್ಗಿದೆ. ಇದರಿಂದ ಲಕ್ಷಾಂತರ ಮೌಲ್ಯದ ವಸ್ತುಗಳ ಹಾನಿಯಾಗಿದೆ ಎಂದು ಯಂತ್ರಗಳ ಮೂಲಕ ಅಗ್ನಿಶಾಮಕ ಸಿಬ್ಬಂದಿ ನೀರು ಹೊರ ಹಾಕುತ್ತಿದ್ದಾರೆ.
ಇತ್ತ ಹೆಬ್ಬಾಳ ಫ್ಲೈ ಓವರ್ ಕೆಳಭಾಗದ ರಸ್ತೆ ಸಂಪೂರ್ಣ ಜಲಾವೃತವಾಗಿದೆ. ಅಲ್ಲದೇ ರಸ್ತೆ ಹಾಗೂ ಹೆಬ್ಬಾಳ ಬಸ್ ಸ್ಟಾಪ್ ಆವರಣ ಕೆರೆಯಂತಾಗಿದೆ. ಟ್ರಾಫಿಕ್ ಪೊಲೀಸರು ಹಾಗೂ ಬಿಬಿಎಂಪಿ ಸಿಬ್ಬಂದಿ ನೀರನ್ನು ಹೊರ ಹಾಕುತ್ತಿದ್ದಾರೆ. ಹೆಬ್ಬಾಳದಿಂದ ಯಶವಂತಪುರ ಕಡೆ ಹೋಗುವ ರಿಂಗ್ ರಸ್ತೆಯಲ್ಲಿ ನೀರು ತುಂಬಿಕೊಂಡಿದೆ. ವಡ್ಡರಪಾಳ್ಯದ ಹಲವು ಬಡಾವಣೆಗಳು ಕೂಡ ಮಳೆಗೆ ಸಂಪೂರ್ಣ ಜಲಾವೃತವಾಗಿದೆ. ಹೀಗಾಗಿ ಮನೆಯಿಂದ ಹೊರಬರಲು ಸಾಧ್ಯವಾಗದೆ ಜನರು ಮನೆಯಲ್ಲಿ ಉಳಿದಿದ್ದಾರೆ.