– ಮಗು ಪಡೆದುಕೊಂಡಾಕೆಗೂ ಜೈಲು
ಚಿಕ್ಕಬಳ್ಳಾಪುರ: ಹೆತ್ತ ಮಗುವನ್ನ ತಾಯಿಯೇ ಬೇರೆಯವರಿಗೆ ಮಾರಾಟ ಮಾಡಿದ ಪರಿಣಾಮ, ಹೆತ್ತ ತಾಯಿ ಸೇರಿ ಮಗು ಪಡೆದುಕೊಂಡಾಕೆ ಜೈಲುಪಾಲಾಗಿರುವ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ.
ತನ್ನ ಮಗುವನ್ನು ಮಾರಾಟ ಮಾಡಿ ಜೈಲುಪಾಲಾಗಿರುವ ತಾಯಿ ಚಂದನಾ ಆಗಿದ್ದಾಳೆ. ಈಕೆ ಮೂಲತಃ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲೂಕಿನ ನಿವಾಸಿಯಾಗಿದ್ದಾಳೆ. ತನ್ನ ಮಗುವನ್ನು ಮಾರಾಟ ಮಾಡಿರುವ ಆರೋಪದಲ್ಲಿ ಜೈಲು ಸೇರಿದ್ದಾಳೆ.
ಈಕೆ ಚಿಕ್ಕಬಳ್ಳಾಪುರ ತಾಲೂಕಿನ ಹಳ್ಳಿಯ ನಿವಾಸಿ ಜೊತೆ ಮದುವೆಯಾಗಿದ್ದಳು. ಮದುವೆಯಾಗಿ ಐದೇ ತಿಂಗಳಿಗೆ ಈಕೆ ಮಗುವಿಗೆ ಜನ್ಮ ನೀಡಿದ್ದಾಳೆ. ಇದರಿಂದ ಪತ್ನಿಯ ಬಗ್ಗೆ ಅನುಮಾನಗೊಂಡು ಆಕೆ ಹಾಗೂ ಮಗುವನ್ನು ತವರು ಮನೆಗೆ ಕಳುಹಿಸಿಬಿಟ್ಟಿದ್ದಾನೆ.
ಮಗುವಿನೊಂದಿಗೆ ತವರಿಗೆ ಬಂದಿರುವ ಮಹಿಳೆ, ಬೆಂಗಳೂರಿನ ಬಾಗಲೂರು ಮೂಲದ ರೂಪಾ-ಮಲ್ಲೇಶ್ ದಂಪತಿಗೆ ಮಗುವನ್ನ ಮಾರಾಟ ಮಾಡಿದ್ದಾಳೆ. ಈ ಬಗ್ಗೆ ಚಿಕ್ಕಬಳ್ಳಾಪುರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ದೂರು ಬಂದ ಕೂಡಲೇ ಎಚ್ಚೆತ್ತ ಆಧಿಕಾರಿಗಳು ಪೊಲೀಸರ ಸಹಾಯದಿಂದ ಮಗುವನ್ನ ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ. ತಾಯಿ ಚಂದನಾ ಹಾಗೂ ಈಕೆಯ ತಂದೆ ನಾಗರಾಜು ಹಾಗೂ ತಾಯಿ ನಾಗರತ್ಮಮ್ಮ ಸೇರಿ ಮಗು ಪಡೆದುಕೊಂಡಿದ್ದ ರೂಪಾವತಿಯನ್ನು ಪೊಲೀಸರು ಬಂಧಿಸಿದ್ದಾರೆ.