ಕಾರವಾರ: ಹೆಜ್ಜೇನು ದಾಳಿ ಮಾಡಿದ ಪರಿಣಾಮ ಹತ್ತಕ್ಕೂ ಹೆಚ್ಚು ಮಂದಿ ಅಸ್ವಸ್ಥಗೊಂಡ ಘಟನೆ ಉತ್ತರ ಕನ್ನಡ ಜಿಲ್ಲೆಯ ಕುಮಟಾದಲ್ಲಿ ನಡೆದಿದೆ.
ತಾಲೂಕಿನ ಹಿಂಡಬೈಲ್ ಗ್ರಾಮದಲ್ಲಿ ಅವಘಡ ಸಂಭವಿಸಿದ್ದು, ಗಾಯಗೊಂಡವರನ್ನ ಸಂತೆಗುಳಿ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ. ಗ್ರಾಮದ ರಸ್ತೆಯಲ್ಲಿ ನಡೆದು ಹೋಗುತ್ತಿದ್ದ ಜನರ ಮೇಲೆ ಕಳೆದೆರಡು ದಿನಗಳಿಂದ ಹೆಜ್ಜೇನುಗಳು ದಾಳಿ ನಡೆಸಿದ್ದು, ಇದು ಗ್ರಾಮಸ್ಥರನ್ನ ಭಯಭೀತಗೊಳಿಸಿದೆ.
ಹಿಂಡಬೈಲ್, ಬಡಾಳ್ ಮಾರ್ಗದ ರಸ್ತೆಯ ಪಕ್ಕದಲ್ಲಿ ಜೇನುಗಳು ಗೂಡು ಕಟ್ಟಿಕೊಂಡಿದ್ದು, ರಸ್ತೆಯಲ್ಲಿ ಓಡಾಡುವವರ ಮೇಲೆ ದಾಳಿ ಮಾಡುತ್ತಿವೆ. ಇದರಿಂದಾಗಿ ಯುವಕರು, ಯುವತಿಯರು ಸೇರಿದಂತೆ ಗ್ರಾಮದ ಹಲವರು ಜೇನು ದಾಳಿಗೆ ತುತ್ತಾಗಿ ಆಸ್ಪತ್ರೆ ಸೇರಿದ್ದು, ಜೇನು ಹುಳುಗಳ ಹಠಾತ್ ದಾಳಿಗೆ ಆತಂಕಗೊಂಡಿರುವ ಗ್ರಾಮಸ್ಥರು ದಾಳಿ ನಡೆದ ರಸ್ತೆಯಲ್ಲಿ ಓಡಾಡುವುದಕ್ಕೆ ಭಯಪಡುವಂತಾಗಿದೆ.