– ಕಟ್ಟಿಗೆ ಸಂಗ್ರಹಿಸಲೆಂದು ಕರೆದೊಯ್ದು ಬೆಲ್ಟ್ ನಿಂದ ಕೊಲೆಗೈದ
ಗಾಂಧಿನಗರ: ವ್ಯಕ್ತಿಯೊಬ್ಬ ತನ್ನ ಹೆಂಡತಿ ಮೇಲಿನಿ ಸಿಟ್ಟಿನಿಂದ 5 ವರ್ಷದ ಮಗಳನ್ನು ಕತ್ತು ಹಿಸುಕಿ ಕೊಲೆ ಮಾಡಿರುವ ಆಘಾತಕಾರಿ ಗಟನೆಯೊಂದು ಗುಜರಾತ್ ನ ಮುಜುಕ್ವ ಗ್ರಾಮದಲ್ಲಿ ನಡೆದಿದೆ.
ಆರೋಪಿಯನ್ನು ಶೈಲೇಶ್ ಪಧಿಯಾರ್ ಎಂದು ಗುರುತಿಸಲಾಗಿದ್ದು, ಈತ ತನ್ನ ಮಗಳಾದ ಪೂರ್ವಿಯನ್ನು ಕೊಲೆ ಮಾಡಿದ್ದಾನೆ. ಪತ್ನಿಗೆ ಅಕ್ರಮ ಸಂಬಂಧ ಇದೆ ಎಂದು ಅನುಮಾನಗೊಂಡಿರುವ ಪತಿ ಪ್ರತಿನಿತ್ಯ ಜಗಳವಾಡುತ್ತಿದ್ದನು. ಇದೇ ಜಗಳದಿಂದ ಬೇಸತ್ತು ಮಗಳನ್ನೇ ಕೊಲೆ ಮಾಡಿರುವುದಾಗಿ ವರದಿಯಾಗಿದೆ.
ವರದಿಗಳ ಪ್ರಕಾರ, ಕಟ್ಟಿಗೆ ಸಂಗ್ರಹಿಸುವ ನೆಪದಲ್ಲಿ ತಂದೆ ಮಗಳನ್ನು ಹೊಲದತ್ತ ಕರೆದುಕೊಂಡು ಹೋಗಿದ್ದಾನೆ. ಅಲ್ಲದೆ ಕಾಲುವೆ ಪಕ್ಕ ಕುಳಿತುಕೊಂಡು ಕಟ್ಟಿಗೆ ಸಂಗ್ರಹಿಸುವಂತೆ ಮಗಳಿಗೆ ಹೇಳಿದ್ದಾನೆ. ಸ್ವಲ್ಪ ಸಮಯದ ಬಳಿಕ ಆಕೆಯ ಸೊಂಟದಲ್ಲಿದ್ದ ಬೆಲ್ಟ್ ತೆಗೆದು ಕುತ್ತಿಗೆಗೆ ಬಿಗಿದು ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ. ಬಳಿಕ ಮನೆಗೆ ಬಂದು ಅನಾರೋಗ್ಯದಿಂದ ಬಳಲುತ್ತಿದ್ದ ಪತ್ನಿಯನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾನೆ.
ಇಬ್ಬರು ಆಸ್ಪತ್ರೆಯಿಂದ ಮನೆಗೆ ಬಂದ ಬಳಿಕ ಪತ್ನಿಯ ಬಳಿ ಮಗಳ ಬಗ್ಗೆ ವಿಚಾರಿಸಿದ್ದಾನೆ. ಅಂತೆಯೇ ಪತ್ನಿ ಮಗಳಿಗಾಗಿ ಹುಡುಕಾಟ ನಡೆಸಿದ್ದಾರೆ. ಆದರೆ ಆಕೆ ಎಲ್ಲಿಯೂ ಕಾಣಸಿಗಲಿಲ್ಲ. ಬಳಿಕ ಪಧಿಯಾರ್ ಗ್ರಾಮದ ಜನರ ಜೊತೆ ಸೇರಿ ಮಗಳಿಗಾಗಿ ತೀವ್ರ ಹುಡುಕಾಟದ ನಾಟಕ ಮಾಡಿದ. ಈ ವೇಳೆ ಮಗಳು ಶವವಾಗಿ ಪತ್ತೆಯಾದಳು. ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಸ್ಥಳೀಯ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದರು. ಅಲ್ಲದೆ ಗ್ರಾಮಸ್ಥರನ್ನು ವಿಚಾರಿಸಿದರು. ಈ ವೇಳೆ ಪೊಲೀಸರಿಗೆ ಪಧಿಯಾರ್ ಮೇಲೆ ಅನುಮಾನ ವ್ಯಕ್ತಪಡಿಸಿ ಆತನನ್ನು ವಿಚಾರಣೆಗೆ ಕರೆದುಕೊಂಡು ಹೋಗಿದ್ದಾರೆ. ವಿಚಾರಣೆ ವೇಳೆ ಆರೋಪಿ ಪಧಿಯಾರ್, ಮಗಳನ್ನು ತಾನೇ ಕೊಲೆ ಮಾಡಿರುವುದಾಗಿ ತಪ್ಪು ಒಪ್ಪಿಕೊಂಡಿದ್ದಾನೆ. ಬೆಲ್ಟ್ ನಿಂದ ಆಕೆಯ ಕತ್ತು ಹಿಸುಕಿ ಹತ್ಯೆ ಮಾಡಿರುವುದಾಗಿ ಬಾಯ್ಬಿಟ್ಟಿದ್ದಾನೆ.
ಪಧಿಯಾರ್ ಹಾಗೂ ಆತನ ಪತ್ನಿ ಇಬ್ಬರೂ ವಿವಾಹೇತರ ಸಂಬಂಧಗಳನ್ನು ಹೊಂದಿದ್ದಾರೆ ಎಂಬ ಅನುಮಾನದ ಮೇಲೆ ದಿನನಿತ್ಯ ಜಗಳವಾಡುತ್ತಿದ್ದರು. ಹೀಗೆ ಜಗಳವಾಡುತ್ತಿದ್ದಾಗ ಒಂದು ದಿನ ಪತ್ನಿ, ಪೂರ್ವಿ ತನ್ನ ಮಗಳಲ್ಲ ಎಂದು ಕೋಪದಿಂದ ಹೇಳಿದ್ದಳು. ಪತ್ನಿಯ ಮಾತನಿಂದ ಪಧಿಯಾರ್ ಗೆ ಆಕೆಯ ಮೇಲಿನ ಅನುಮಾನ ಇನ್ನಷ್ಟು ಹೆಚ್ಚಾಯಿತು. ಇದೇ ಮಗಳ ಕೊಲೆಗೆ ಕಾರಣವಾಯಿತು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.