ಬಾಗಲಕೋಟೆ: ಅಮೃತಸರದಲ್ಲಿ ಬಾಗಲಕೋಟೆ ಜಿಲ್ಲೆಯ ಕರ್ತವ್ಯ ನಿರತ ಬಿಎಸ್‍ಎಫ್ ಯೋಧ ಹೃದಯಾಘಾತದಿಂದ ನಿಧನ ಹೊಂದಿದ್ದಾರೆ. ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಬೇಲೂರು ಗ್ರಾಮದ 53 ವರ್ಷದ ಚಂದ್ರಶೇಖರ ಕಿನ್ನಾಳ ಸೋಮವಾರ ಆರೋಗ್ಯದಲ್ಲಿ ಏರುಪೇರಾಗಿತ್ತು. ಈ ವೇಳೆ ಆಸ್ಪತ್ರೆಗೆ ದಾಖಲಾಗಿಸಿತ್ತು. ಹೃದಯಾಘಾತದಿಂದ ಮೃತಪಟ್ಪಿರುವುದಾಗಿ ವೈದ್ಯರು ತಿಳಿಸಿದ್ದಾರೆ.
31 ವರ್ಷದಿಂದ ಅವರು ಪಂಜಾಬ್ ರಾಜ್ಯದ ಅಮೃತಸರದ 183ರ ಬಿಎಸ್‍ಎಫ್ ಬಟಾಲಿಯನ್ ನಲ್ಲಿ ಸೇವೆ ಸಲ್ಲಿಸುತ್ತಿದ್ದರು. ಜುಲೈ 26ರಂದು ರಜೆಗೆಂದು ಸ್ವಗ್ರಾಮಕ್ಕೆ ಬಂದು ಕರ್ತವ್ಯಕ್ಕೆ ಮರಳಿದ್ದರು. ತಾಯಿ ಬಸಮ್ಮ, ಪತ್ನಿ ಶಿವಲೀಲಾ, ಪುತ್ರ ಅಭಿಷೇಕ್, ವಿಶ್ವನಾಥ್, ಸಹೋದರಿಯರು ಮೃತ ಯೋಧನಿಗಿದ್ದು, ಗ್ರಾಮಕ್ಕೆ ತಹಶೀಲ್ದಾರ್ ಎಸ್.ಎಸ್.ಇಂಗಳೆ, ಸಿಪಿಐ ರಮೇಶ್ ಹಾನಾಪೂರ, ಪಿಎಸ್‍ಐ ನೇತ್ರಾವತಿ ಪಾಟೀಲ ಭೇಟಿ ನೀಡಿ, ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.
ಇವತ್ತು ಬೆಳಗ್ಗೆ 9 ಗಂಟೆಗೆ ಬೆಂಗಳೂರಿಗೆ ಮೃತ ಯೋಧನ ಪಾರ್ಥಿವ ಶರೀರ ಆಗಮಿಸಿದ್ದು, ರಾತ್ರಿ ಸ್ವಗ್ರಾಮ ಬೇಲೂರಿಗೆ ಬರಲಿದೆ. ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆ ಆವರಣದಲ್ಲಿ ಅಂತ್ಯಕ್ರಿಯೆಗೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.