– ಮದ್ವೆ ಹಿಂದಿನ ದಿನ ಕಟ್ಟಡದ ಮೇಲಿಂದ ಬಿದ್ದಿದ್ದ ಯುವತಿ
ಲಕ್ನೋ: ಬಾಲಿವುಡ್ ಸೂಪರ್ ಹಿಟ್ ವಿವಾಹ ಸಿನಿಮಾ ರೀತಿಯಲ್ಲಿಯೇ ಘಟನೆಯೊಂದು ನಡೆದಿದ್ದು, ಇಂತಹ ವಿಶೇಷ ಮದುವೆಗೆ ಉತ್ತರ ಪ್ರದೇಶದ ಪ್ರಯಾಗರಾಜ್ ಇದಕ್ಕೆ ಸಾಕ್ಷಿಯಾಗಿದೆ.
ಪ್ರಯಾಗರಾಜ್ ಜಿಲ್ಲೆಯ ಸಂಗಮ್ ನಗರದ ಆರತಿ ಮದುವೆ ಡಿಸೆಂಬರ್ 9ರಂದು ಅವಧೇಶ್ ಜೊತೆ ನಿಶ್ಚಯವಾಗಿತ್ತು. ಇತ್ತ ಆರತಿ ಮನೆಯಲ್ಲಿ ಮದುವೆ ಸಿದ್ಧತೆ ಪೂರ್ಣಗೊಂಡಿತ್ತು. ವಧುವಿನ ಕುಟುಂಬಸ್ಥರು ವರನಿಗಾಗಿ ಕಾಯುತ್ತಿದ್ದರು. ಈ ವೇಳೆ ಮೇಲ್ಚಾವಣೆ ಮೇಲೆ ಅಪಾಯದಲ್ಲಿ ಸಿಲುಕಿದ್ದ ಮಕ್ಕಳನ್ನ ರಕ್ಷಿಸಲು ಹೋದ ಆರತಿ ಮೇಲಿಂದ ಕೆಳಗೆ ಬಿದ್ದಿದ್ದಾಳೆ. ಕೂಡಲೇ ಪೋಷಕರು ಆರತಿಯನ್ನ ನಗರ ಖಾಸಗಿ ಆಸ್ಪತ್ರೆಗೆ ದಾಖಲಿಸಿ, ಅತ್ತ ವಧು ಮನೆಗೆ ಬರೋ ಸಂಭ್ರಮದಲ್ಲಿದ್ದ ವರನ ಕುಟುಂಬಸ್ಥರಿಗೆ ವಿಷಯ ತಿಳಿಸಿದ್ದಾರೆ.
ಮನೆಯ ಮೇಲಿಂದ ಬಿದ್ದ ಆರತಿ ಬೆನ್ನು ಮೂಳೆ ಮುರಿದಿದ್ದು ಮತ್ತು ಎರಡೂ ಕಾಲುಗಳ ಸ್ವಾಧೀನ ಕಳೆದುಕೊಂಡು ಹಾಸಿಗೆ ಹಿಡಿದಿದ್ದಾಳೆ. ಇತ್ತ ಆರತಿಯ ಮದುವೆ ಅಲ್ಲಿಯೇ ನಿಂತು ಹೋಯ್ತು ಅಂದುಕೊಂಡಿದ್ದ ಪೋಷಕರಿಗೆ ವರ ಅವದೇಶ್ ಶಾಕ್ ನೀಡಿದ್ದನು.
ಆಸ್ಪತ್ರೆಗೆ ಬಂದ ಅವಧೇಶ್ ಬೆಡ್ ಮೇಲೆ ಮಲಗಿದ್ದ ಆರತಿಯನ್ನ ತನ್ನ ಪತ್ನಿಯಂದು ಸ್ವೀಕರಿಸಿ, ಸಿಂಧೂರವಿಟ್ಟಿದ್ದಾನೆ. ಈ ದೃಶ್ಯ ನೋಡಿದ ಆಸ್ಪತ್ರೆ ಸಿಬ್ಬಂದಿ ಮತ್ತು ಕುಟುಂಬಸ್ಥರು ಭಾವುಕರಾಗಿ ಕಣ್ಣೀರು ಹಾಕಿದ್ದಾರೆ. ಈ ಮೊದಲು ಅವಧೇಶ್ ನಿಗೆ ನಿಗದಿಯಾದ ಮುಹೂರ್ತದಲ್ಲಿ ಆರತಿ ಸೋದರಿಯನ್ನ ಮದುವೆ ಆಗುವಂತೆ ಕುಟುಂಬಸ್ಥರು ಸಲಹೆ ನೀಡಿದ್ದರು. ಆದ್ರೆ ಅವಧೇಶ್ ಆರತಿಯನ್ನ ಮದುವೆಯಾಗುವ ಮೂಲಕ ನಿಜವಾದ ಪ್ರೀತಿಯನ್ನ ಜಗತ್ತಿಗೆ ತೋರಿಸಿದ್ದಾನೆ.