ಮಡಿಕೇರಿ : ನರಭಕ್ಷಕ ಹುಲಿಯನ್ನು ಸೆರೆ ಹಿಡಿಯದ ಹಿನ್ನೆಲೆ ರಾಜ್ಯ ರೈತ ಸಂಘಟನೆ ಕರೆ ನೀಡಿದ್ದ ಕೊಡಗು ಜಿಲ್ಲೆ ಪೊನ್ನಂಪೇಟೆ ತಾಲ್ಲೂಕು ಬಂದ್ ಯಶಸ್ವಿಯಾಗಿದೆ.
ಬೆಳಿಗ್ಗೆ 6 ಗಂಟೆಯಿಂದ ಮಧ್ಯಾಹ್ನ 12 ಗಂಟೆಯವರೆಗೆ ಸಂಪೂರ್ಣ ಬಂದ್‍ಗೆ ಕರೆ ನೀಡಲಾಗಿತ್ತು. ಪೊನ್ನಂಪೇಟೆ ತಾಲ್ಲೂಕಿನ ಹುದಿಕೇರಿ, ಶ್ರೀಮಂಗಲ ಕುಟ್ಟ ಮತ್ತು ಗೋಣಿಕೊಪ್ಪದಲ್ಲಿ ಎಲ್ಲಾ ಅಂಗಡಿ ಮುಂಗಟ್ಟುಗಳನ್ನು ಸಂಪೂರ್ಣ ಬಂದ್ ಮಾಡಿ ವ್ಯಾಪಾರಸ್ಥರು ರೈತರ ಹೋರಾಟಕ್ಕೆ ಕೈಜೋಡಿಸಿದರು.
ನಿನ್ನೆ ರೈತರು ಹುಣಸೂರು, ಗೋಣಿಕೊಪ್ಪ ಹೆದ್ದಾರಿಯನ್ನು ಬಂದ್ ಮಾಡಿದ್ದರಿಂದ ಪ್ರಯಾಣಿಕರು ತೀವ್ರ ತೊಂದರೆ ಅನುಭವಿಸಿದ್ದಾರೆ. ಇದರಿಂದಾಗಿ ಸಂಚಾರಕ್ಕೆ ಅಡ್ಡಿ ಮಾಡುವುದು ಬೇಡವೆಂದು ನಿರ್ಧರಿಸಿದ್ದರು. ಆದರೂ ತಾಲ್ಲೂಕಿನಾದ್ಯಂತ ಸಂಪೂರ್ಣ ಬಂದ್ ಆಗಿದ್ದರಿಂದ ವಾಹನಗಳ ಸಂಚಾರ ವಿರಳವಾಗಿತ್ತು.
ಶ್ರೀಮಂಗಲದಲ್ಲಿ ಪ್ರತಿಭಟನಾಕಾರರು ಸಂಪೂರ್ಣ ಬಂದ್ ಆಗಿದ್ದರೂ ವಿರಳವಾಗಿ ಓಡಾಡುತ್ತಿದ್ದ ವಾಹನಗಳನ್ನು ಅಡ್ಡಗಟ್ಟಿ ಬಂದ್‍ಗೆ ಸಹಕರಿಸುವಂತೆ ಒತ್ತಾಯಿಸಿದರು. ಕೆಲ ಸಮಯದಲ್ಲಿ ವಾಹನಗಳ ಸಂಚಾರವೂ ಸಂಪೂರ್ಣ ಬಂದ್ ಆಯಿತು.