ಹುಬ್ಬಳ್ಳಿ: ಇಲ್ಲಿನ ಖಾಸಗಿ ಆಸ್ಪತ್ರೆಯಲ್ಲಿ ಆಕ್ಸಿಜನ್ ಕೊರತೆಯಿಂದಾಗಿ 5 ಮಂದಿ ಸಾವನ್ನಪ್ಪಿದ್ದಾರೆ. ಸ್ಥಳಕ್ಕೆ ಡಿಸಿಪಿ, ಆರೋಗ್ಯ ಇಲಾಖೆ ಸಿಬ್ಬಂದಿ ಬಂದು ಪರಿಶೀಲನೆ ಮಾಡುತ್ತಿದ್ದಾರೆ.
ಹುಬ್ಬಳ್ಳಿಯ ಲೈಪ್‍ಲೈನ್ ಆಸ್ಪತ್ರೆಯ ಐಸಿ ವಾರ್ಡ್‍ನಲ್ಲಿ ಇದ್ದವರು ಸಂಜೆ 4 ಗಂಟೆ ಸುಮಾರಿಗೆ ಆಕ್ಸಿಜನ್ ಕೊರತೆಯಿಂದ ಸಾವನ್ನಪ್ಪಿದ್ದಾರೆ. ಸ್ಥಳಕ್ಕೆ ಡಿಎಚ್‍ಓ ಯಶವಂತ್ ಹಾಗೂ ಡಿಸಿಪಿ ರಾಮ್ ರಾಜನ್ ಬಂದು ಪರೀಶಿಲನೆ ನಡೆಸಿದ್ದಾರೆ.
ಲೈಪ್ ಲೈನ್24×7 ಆಸ್ಪತ್ರೆಯಲ್ಲಿ ಒಟ್ಟು 22 ಕೋವಿಡ್ ಬೆಡ್ ಗಳಿವೆ. 16 ನಾನ್ ಐಸಿಯು ನಲ್ಲಿದ್ದಾರೆ. ಐವರು ಐಸಿಯು ವಾರ್ಡ್‍ನಲ್ಲಿದ್ರು. ಸಂಜೆ 4 ಗಂಟೆಯ ವೇಳೆಗೆ ಘಟನೆ ನಡೆದಿದೆ. ಸಾವಿಗೆ ಆಕ್ಸಿಜನ್ ಸಮಸ್ಯೆ ಅಂತಾ ಕಂಡು ಬರತಾ ಇಲ್ಲ. ನಾವೂ ಪರಿಶೀಲನೆ ಮಾಡುತ್ತಾ ಇದ್ದೇವೆ. ಆಕ್ಸಿಜನ್ ಕೊರತೆಯಿಂದ ಆಗಿದೆ ಅಂತಾ ಹೇಳಲು ಆಗಲ್ಲ. ದಾಖಲಾದ ರೋಗಿಗಳು ವಯಸ್ಸಾದವರು ಇದ್ದರು. ಘಟನೆಯ ಬಗ್ಗೆ ತನಿಖೆ ಮಾಡುತ್ತೇವೆ. ತಜ್ಞರ ಸಮಿತಿ ರಚನೆ ಮಾಡುತ್ತೇವೆ. ಡಿಸಿಯವರ ಅಧ್ಯಕ್ಷತೆಯಲ್ಲಿ ಪರಿಶೀಲನೆ ಮಾಡುತ್ತೇವೆ. ಮೃತರಿಗೆ ಏನೆಲ್ಲಾ ಚಿಕಿತ್ಸೆ ನೀಡಿದ್ದಾರೆ ಅಂತಾ ಪರಿಶೀಲನೆ ಮಾಡುತ್ತೇವೆ ಎಂದು ಧಾರವಾಡ ಡಿಎಚ್‍ಓ ಯಶವಂತ್ ಹೇಳಿದ್ದಾರೆ.
ಸಂಬಂಧಿಕರನ್ನು ಕಳೆದುಕೊಂಡವರ ಆಕ್ರಂದನ ಮುಗಿಲುಮುಟ್ಟಿದೆ. ನಮಗೆ ಆಕ್ಸಿಜನ್ ಕೊರತೆ ಎಂದು ಮೊದಲೇ ಹೇಳಬಹುದಿತ್ತು ಎಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.