ಹುಬ್ಬಳ್ಳಿ: ಸಾರ್ವಜನಿಕ ಪ್ರಯಾಣಿಕರ ಬೇಡಿಕೆಯ ಮೇರೆಗೆ ಕೋವಿಡ್-19 ಲಾಕ್‍ಡೌನ್ ಹಿನ್ನೆಲೆಯಲ್ಲಿ ಸ್ಥಗಿತಗೊಳಿಸಲಾಗಿದ್ದ ವಾಕರಸಾ ಸಂಸ್ಥೆಯ ಹುಬ್ಬಳ್ಳಿ ವಿಭಾಗದಿಂದ ಧಾರ್ಮಿಕ ಕ್ಷೇತ್ರಗಳ ಬಸ್ಸುಗಳನ್ನು ಮತ್ತೆ ಆರಂಭಿಸಲಾಗಿದೆ. ಮೊದಲ ಹಂತದಲ್ಲಿ ಹುಬ್ಬಳ್ಳಿಯಿಂದ ಉಳವಿಗೆ ಒಂದು ಬಸ್ಸು ಹಾಗೂ ಧರ್ಮಸ್ಥಳಕ್ಕೆ ಎರಡು ಬಸ್ಸುಗಳನ್ನು ಆರಂಭಿಸಲಾಗಿದೆ. ಈ ಬಸ್ಸುಗಳು ಹುಬ್ಭಳ್ಳಿ ಹೊಸ ಬಸ್ ನಿಲ್ದಾಣದಿಂದ ಹೊರಡುತ್ತವೆ. ಎಂದು ವಿಭಾಗೀಯ ನಿಯಂತ್ರಣಾಧಿಕಾರಿ ಎಚ್. ರಾಮನಗೌಡರ ತಿಳಿಸಿದ್ದಾರೆ.
ಉಳವಿಗೆ ಹೋಗುವ ಬಸ್ಸು ಹುಬ್ಬಳ್ಳಿಯಿಂದ ಬೆಳಗ್ಗೆ 8 ಗಂಟೆಗೆ ಹೊರಡುತ್ತದೆ. ಧಾರವಾಡ, ಹಳಿಯಾಳ, ದಾಂಡೇಲಿ, ಜೊಯಿಡಾ, ಕುಂಬಾರವಾಡ ಮಾರ್ಗವಾಗಿ ಮಧ್ಯಾಹ್ನ 1 ಗಂಟೆಗೆ ಉಳವಿ ತಲುಪುತ್ತದೆ. ಉಳವಿಯಿಂದ 2 ಗಂಟೆಗೆ ಹೊರಟು ಅದೇ ಮಾರ್ಗದಲ್ಲಿ ಸಂಜೆ 6.30 ಹುಬ್ಬಳ್ಳಿಗೆ ತಲುಪುತ್ತದೆ.
ಧರ್ಮಸ್ಥಳಕ್ಕೆ ಹಗಲು ಬಸ್ಸು ಅಂಕೋಲಾ ಮಾರ್ಗವಾಗಿ ಮತ್ತು ರಾತ್ರಿ ಬಸ್ಸು ಶಿರಸಿ ಮಾರ್ಗವಾಗಿ ಒಟ್ಟು ಎರಡು ಬಸ್ಸುಗಳು ಹೊರಡುತ್ತವೆ. ಹುಬ್ಬಳಿಯಿಂದ ಬೆಳಗ್ಗೆ 7 ಗಂಟೆಗೆ ಹೊರಡುವ ಬಸ್ಸು ಯಲ್ಲಾಪುರ, ಅಂಕೋಲಾ, ಕುಮಟಾ, ಉಡುಪಿ ಮಾರ್ಗವಾಗಿ ಸಂಜೆ 6.30ಕ್ಕೆ ಧರ್ಮಸ್ಥಳ ತಲುಪುತ್ತದೆ. ಮರುದಿನ ಬೆಳಗ್ಗೆ 5.30ಕ್ಕೆ ಧರ್ಮಸ್ಥಳದಿಂದ ಹೊರಟು ಸಂಜೆ 4.30ಕ್ಕೆ ಹುಬ್ಬಳ್ಳಿ ತಲುಪುತ್ತದೆ.
ಸಂಜೆ 6.15ಕ್ಕೆ ಹುಬ್ಬಳ್ಳಿಯಿಂದ ಹೊರಡುವ ಬಸ್ಸು ಮುಂಡಗೋಡ, ಶಿರಸಿ, ಕುಮಟಾ, ಉಡುಪಿ ಮಾರ್ಗವಾಗಿ ಮರುದಿನ ಬೆಳಗ್ಗೆ 5.30ಕ್ಕೆ ಧರ್ಮಸ್ಥಳ ತಲುಪುತ್ತದೆ. ಧರ್ಮಸ್ಥಳದಿಂದಲೂ ಸಂಜೆ 6.15ಕ್ಕೆ ಹೊರಟು ಮರುದಿನ ಬೆಳಗ್ಗೆ 5.30ಕ್ಕೆ ಹುಬ್ಬಳ್ಳಿ ತಲುಪುತ್ತದೆ. ಸಾರ್ವಜನಿಕರು ಸದರಿ ಬಸ್ಸುಗಳ ಸದುಪಯೋಗ ಪಡೆದುಕೊಳ್ಳಲು ಕೋರಿರುವ ವಿಭಾಗೀಯ ನಿಯಂತ್ರಣಾಧಿಕಾರಿ ಎಚ್. ರಾಮನಗೌಡರ, ಪ್ರಯಾಣಿಕರ ಪ್ರತಿಕ್ರಿಯೆ ಗಮನಿಸಿ ಮುಂದಿನ ದಿನಗಳಲ್ಲಿ ದೂರಮಾರ್ಗದ ಬಸ್ಸುಗಳ ಸಂಖ್ಯೆಯನ್ನು ಹೆಚ್ಚಳ ಮಾಡಲಾಗುವುದು ಎಂದು ತಿಳಿಸಿದ್ದಾರೆ.